ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಅವರ ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಫೆ.28 ರಂದು ಮದ್ದೂರು ಪಟ್ಟಣದ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಹೂತಗೆರೆ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಉದ್ಯೋಗ ಮೇಳಕ್ಕೆ ಬೆಂಗಳೂರು ಹಾಗೂ ಮೈಸೂರಿನ 60ಕ್ಕೂ ಹೆಚ್ಚು ಪ್ರತಿಷ್ಟಿತ ಕಂಪನಿಗಳಾದ ಐಸಿಐಸಿಐ ಬ್ಯಾಂಕ್, ಅಕ್ಸೆಂಚರ್, ಟಾಟಾ ಮೋಟಾರ್ಸ್ ರೆನಾಲ್ಟ್, ಟೊಯೋಟಾ ಕಿರ್ಲೋಸರ್, ಟಾಟಾ ಮೋಟರ್ಸ್, ಕ್ಯಾಪ್ ಜೆಮಿನಿ, ವಿಪ್ರೋ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಬೆಳಿಗ್ಗೆ 9 ರಿಂದ ಸಂಜೆ 4.30 ರವರೆಗೆ ನಡೆಯಲಿದೆ ಎಂದರು.
ಈ ಉದ್ಯೋಗ ಮೇಳದಲ್ಲಿ 3000ಕ್ಕೂ ಹೆಚ್ಚು ಯುವಕ ಯುವತಿಯರಿಗೆ ಉದ್ಯೋಗ ಸಿಗುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತಿದೆ. ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮೊ, ಬಿಇ ಹಾಗೂ ಯಾವುದೇ ಪದವೀಧರರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ ಹಾಗೂ ವಿವರದ ಬಯೋಡೇಟಾದೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.
ಎಸ್.ಪಿ.ಸ್ವಾಮಿ ಅವರು ಕಳೆದ ಮೂರು ವರ್ಷಗಳಿಂದ ನಮ್ಮ ಗ್ರಾಮೀಣ ಯುವ ಜನತೆಗೆ ಉದ್ಯೋಗ ದೊರಕಿಸಿ ಕೊಡುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕೊರೊನಾ ನಂತರ ನಮ್ಮ ಗ್ರಾಮೀಣ ಪ್ರದೇಶದ ಯುವ ಜನತೆಗೆ ಉದ್ಯೋಗ ನೀಡುವ ಸಂಕಲ್ಪದಿಂದ ಎರಡು ಬಾರಿ ಉದ್ಯೋಗ ಮೇಳ ನಡೆಸಲಾಗಿದೆ. ಮೂರನೇ ಬಾರಿ ನಡೆಯುತ್ತಿರುವ ಈ ಬೃಹತ್ ಉದ್ಯೋಗ ಮೇಳದ ಅವಕಾಶವನ್ನು ಎಲ್ಲಾ ಯುವ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು.ಇದರ ಮೂಲಕ ನಮ್ಮ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ತಿಳಿಸಿದರು.
ಶ್ರೀನಿಧಿ ಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಕಳೆದ 15 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದೆ. ಶಿಕ್ಷಣ, ಆರೋಗ್ಯ, ಕೃಷಿ,ಮಹಿಳಾ ಸಬಲೀಕರಣ, ರಕ್ತದಾನ ಶಿಬಿರ, ಯುವ ಜನತೆಗೆ ಉದ್ಯೋಗ ಕಲ್ಪಿಸುವ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.
ಗೋಷ್ಠಿಯಲ್ಲಿ ಕೆ.ಶೆಟ್ಟಹಳ್ಳಿ ಮಾಜಿ ಗ್ರಾಂ.ಪಂ. ಅಧ್ಯಕ್ಷ ಹನುಮಂತೇಗೌಡ,ವಿಎಸ್ಎಸ್ಎನ್ ಅಧ್ಯಕ್ಷ ಜಿ.ಬಿ.ಕೃಷ್ಣ, ಶಂಕರೇಗೌಡ ವೆಂಕಟೇಶ, ಮಹೇಶ್ ಉಪಸ್ಥಿತರಿದ್ದರು.




