ಮಂಡ್ಯ ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕೋಚಿಂಗ್ ಸೆಂಟರ್ ಅಥವಾ ಟ್ಯೂಷನ್ ಸೆಂಟರ್ ಗಳ ವಿರುದ್ಧ ದೂರು ದಾಖಲಿಸಿ, ಪೋಷಕರಿಗೆ ಅನಧಿಕೃತ ಕೋಚಿಂಗ್ ಸೆಂಟರ್ ಗಳಿಗೆ ಮಕ್ಕಳನ್ನು ದಾಖಲಿಸದಂತೆ ಜಾಗೃತಿ ಮೂಡಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಡಾ.ಜಯಶ್ರೀ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳು ವಿದ್ಯಾಭ್ಯಾಸ ಹಾಗೂ ಇನ್ನಿತರ ತರಬೇತಿಗೆ ಹೋಗುವ ಸ್ಥಳಗಳಲ್ಲಿ ಸಂಪೂರ್ಣ ರಕ್ಷಣೆ ದೊರೆಯಬೇಕು. ಈ ಹಿನ್ನಲೆಯಲ್ಲಿ ಸೂಕ್ತ ಪರಿಶೀಲನೆ ನಡೆಸಿ ನಂತರ ಕೋಚಿಂಗ್ ಅಥವಾ ಟುಟೋರಿಯಲ್ ಸೆಂಟರ್ ಗಳಿಗೆ ಅನುಮತಿ ನೀಡಿ, ಮಕ್ಕಳ ರಕ್ಷಣೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ರಕ್ಷಣೆ ಕುರಿತಂತೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.
ತಂಗಳಕೆರೆ ವಸತಿ ಶಾಲೆಯಿಂದ ಕಾಣೆಯಾಗಿರುವ ಬಾಲಕ ಇನ್ನೂ ಪತ್ತೆಯಾಗಿಲ್ಲ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕನನ್ನು ಪತ್ತೆ ಹಚ್ಚಿ ವರದಿ ನೀಡುವಂತೆ ತಿಳಿಸಿದರು. ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ವಸತಿ ಶಾಲೆಯಲ್ಲಿ ಮಕ್ಕಳು ಪೋಷಕರಿಂದ ದೂರವಿರುತ್ತಾರೆ. ಅವರಿಗೆ ಸಮಾಲೋಚನಾ ಕಾರ್ಯಕ್ರಮವನ್ನು ಹೆಚ್ಚು ಹೆಚ್ಚು ನಡೆಸಿ, ಪೋಷಕರೊಂದಿಗೆ ವಸತಿ ಶಾಲೆಯ ಶಿಕ್ಷಕರು ಸಂಪರ್ಕದಲ್ಲಿದ್ದು, ಮಗುವಿನ ಬೆಳವಣಿಗೆ ಬಗ್ಗೆ ಚರ್ಚಿಸಿ ಎಂದರು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಳಿನ ಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್.ಹುಲ್ಮನಿ, ಡಿ.ಒ. ಎಸ್.ಪಿ.ವೇಣುಗೋಪಾಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಾಗರಾಜು ಉಪಸ್ಥಿತರಿದ್ದರು.




