Tuesday, November 24, 2026

ಪ್ರಾಯೋಗಿಕ ಆವೃತ್ತಿ

ಯೂರಿಯಾ ಕೊರತೆ | ಕೇಂದ್ರ ಸರ್ಕಾರ ನಮಗೆ ಬೇಕಾದಷ್ಟನ್ನು ಪೂರೈಕೆ ಮಾಡಿಲ್ಲ : ಚಲುವರಾಯಸ್ವಾಮಿ

ಕೇಂದ್ರ ಸರ್ಕಾರದಿಂದ ಯೂರಿಯಾ ಪೂರೈಕೆ ಕೊರತೆಯಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಿತರಣೆಯಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿಭಾಯಿಸಲಾಗುತ್ತಿದೆ.  ಮುಂದಿನ ದಿನಗಳಲ್ಲಿ ಎಲ್ಲಾ ಗೊಂದಲಗಳು ಬಗೆಹರಿಯಲಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಸ್ಫಷ್ಟಪಡಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಸಚಿವರು ರಾಜ್ಯದಲ್ಲಿ ಕಳೆದ 2ವರ್ಷಗಳಲ್ಲಿ 3 ಮುಂಗಾರು ಹಂಗಾಮಿನಲ್ಲಿ ಇದೇ ಸರ್ಕಾರ ಅಧಿಕಾರದಲ್ಲಿದೆ.  ನಾನೇ ಕೃಷಿ ಸಚಿವನಾಗಿ ಇದ್ದೇನೆ.  ಈವರಗೆ ಉಂಟಾಗದ ಸಮಸ್ಯೆ ಈಗೇಕೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು ಹೇಳಿದರು.

ಸಂಸದ ಸುಧಾಕರ್‌ ಹೇಳಿಕೆ ಹಸಿ ಸುಳ್ಳು

ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಅವರು ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಮೇಲೆ ರಸಗೊಬ್ಬರ ವಿತರಣೆಯಲ್ಲಿ ದುರಾಡಳಿತ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಂಸತ್‌ನ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಸಕಾಲಕ್ಕೆ ರಸಗೊಬ್ಬರವನ್ನು ಸರಬರಾಜು ಮಾಡಿದ್ದರೂ, ರಾಜ್ಯ ಸರ್ಕಾರದ ಅಸಮರ್ಪಕ ವಿತರಣೆಯಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಸೂಕ್ತ ಸೂಚನೆಗಳನ್ನು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಡಾ. ಸುಧಾಕರ್ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ. 2025ರ ಏಪ್ರಿಲ್ 1ರಿಂದ ಈವರೆಗೆ ಕೇಂದ್ರ ಸರ್ಕಾರವು ರಾಜ್ಯಕ್ಕೆ 5,46,391 ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರವನ್ನು ಮಾತ್ರ ಸರಬರಾಜು ಮಾಡಿದೆ ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರವು 3,46,498.74 ಮೆಟ್ರಿಕ್ ಟನ್ ಹಳೆಯ ದಾಸ್ತಾನು ಇಟ್ಟುಕೊಂಡಿರುವುದರಿಂದ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಕೇಂದ್ರ ಸರ್ಕಾರದಿಂದ ಬಾಕಿಯಿರುವ 1,36,109.2 ಮೆಟ್ರಿಕ್ ಟನ್ ರಸಗೊಬ್ಬರವನ್ನು ಶೀಘ್ರವಾಗಿ ಸರಬರಾಜು ಮಾಡುವಂತೆ ಒತ್ತಾಯಿಸುವ ಬದಲು, ಸಂಸದರು ರಾಜ್ಯದ ರೈತರಿಗೆ ಅನ್ಯಾಯ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಈ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರವು 8.13 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸರಬರಾಜು ಮಾಡಿದೆ ಎಂಬ ಸುಧಾಕರ್ ಅವರ ಹೇಳಿಕೆಯನ್ನು ಸಚಿವರು “ಹಸಿ ಸುಳ್ಳು” ಎಂದು ಕರೆದಿದ್ದಾರೆ.

ರಾಜ್ಯಕ್ಕೆ ಪೂರೈಕೆಯಾಗಬೇಕಾಗಿದ್ದ ಯೂರಿಯಾ ರಸಗೊಬ್ಬರದಲ್ಲಿ ಈ ಬಾರಿ 1.36ಲಕ್ಷ ಮೆಟ್ರಿಕ್ ಟನ್ ಕೊರತೆಯಾಗಿದೆ. ಇದೇ ಈ ಎಲ್ಲಾ ಸಮಸ್ಯೆಗಳು ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಕೃಷಿ ಸಚಿವರು ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದರು.

ಈ ಬಾರಿ ಮುಂಗಾರು ಬೇಗ ಪ್ರಾರಂಭವಾಗಿ ಉತ್ತಮ ಮಳೆಯಾಗಿದ್ದು, 2ಲಕ್ಷ ಹೆಕ್ಟೇರ್ ಹೆಚ್ಚುವರಿ ಮುಸುಕಿನ ಜೋಳ ಬಿತ್ತನೆ ಕೂಡ  ಯೂರಿಯಾ ಬೇಡಿಕೆ ಹಠಾತ್ ಏರಿಕೆಗೆ ಕಾರಣವಾಗಿದೆ ಎಂದರು.

ರಸಗೊಬ್ಬರ ಪೂರೈಕೆ ಅಂಕಿ ಅಂಶ 
ಕೇಂದ್ರ ಸರ್ಕಾರದಿಂದ ಏಪ್ರಿಲ್ ನಿಂದ ಜುಲೈನವರೆಗಿನ ಹಂಚಿಕೆ-6.82 ಲಕ್ಷ ಮೆ.ಟನ್
ಏಪ್ರಿಲ್‌ನಿಂದ ಇಲ್ಲಿಯವರೆಗೆ ಸರಬರಾಜು- 5.46 ಲಕ್ಷ ಮೆ.ಟನ್.
ಈಗಿನ ಉಳಿಕೆ ದಾಸ್ತಾನು-1.22ಲಕ್ಷ ಮೆ.ಟನ್
ಇಲ್ಲಿಯವರೆಗಿನ ಸರಬರಾಜಿನಲ್ಲಿ ಕೊರತೆ-1.36ಲಕ್ಷ ಮೆ.ಟನ್ ಎಂದು ಸಚಿವರು ವಿವರಿಸಿದರು

ರಾಜ್ಯದಲ್ಲಿ ಅಕ್ರಮ ಸಾಗಾಟ, ಯೂರಿಯಾ ದುರ್ಬಳಕೆ ಬಗ್ಗೆ ವಿಚಕ್ಷಣ ದಳ ಚುರುಕಾಗಿ  ಕಾರ್ಯ ನಿರ್ವಹಿಸುತ್ತಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿದೆ. ವಿರೋಧ ಪಕ್ಷದ ಮುಖಂಡರು ಮಾಧ್ಯಮಕ್ಕೆ ತಿಳಿಸಿರುವಂತೆ ಕರ್ನಾಟಕ ರಾಜ್ಯವು ನೆರೆ ದೇಶಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶದೊಂದಿಗೆ ಯಾವುದೇ ಗಡಿಯನ್ನು ಹಂಚಿಕೊಂಡಿರುವುದಿಲ್ಲ. ಈ ಹೇಳಿಕೆಯು ಹಾಸ್ಯಾಸ್ಪದವಾಗಿದೆ.  ವಿರೋಧ ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.

ರಸಗೊಬ್ಬರಗಳ ಪೂರೈಕೆ ಕಾಪು ದಾಸ್ತಾನಿಗೆ ಇರಿಸಲಾಗಿದ್ದ ಗ್ಯಾರಂಟಿ ಹಣ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.  ಆದರೆ ಈ ಹಿಂದೆ ಇದ್ದದ್ದು ಬಿ.ಜೆ.ಪಿ ಸರ್ಕಾರ ಅವರೇ ನಿಗಧಿಪಡಿಸಿದ್ದ 400 ಕೋಟಿ ರೂ ಹಣವನ್ನು ನಾವು ಯಥಾ ಸ್ಥಿತಿಯಲ್ಲಿ ಮುಂದುವರೆಸಿದ್ದೇವೆ.  ಇನ್ನೂ 600 ಕೋಟಿ ರೂಪಾಯಿ ಹೆಚ್ಚವರಿ ಹಣ ನೀಡಲು ರಾಜ್ಯ ಸರ್ಕರ ಸಿದ್ದವಿದೆ. ಪ್ರತಿಯಾಗಿ ಬಿಜೆಪಿ ನಾಯಕರು ಗೊಬ್ಬರ ಒದಗಿಸಲು ಸಾಧ್ಯವೇ ತಿಳಿಸಬೇಕು ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

ರಾಜ್ಯದಲ್ಲಿ ದಾವಣಗೆರೆ, ಗದಗ, ಕೊಪ್ಪಳ, ಧಾರವಾಡ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಯೂರಿಯಾ ಕೊರತೆ ಸ್ವಲ್ಪ ಕಂಡುಬಂದಿರುವುದು ನಿಜ. ಆದರೆ ಅದನ್ನು ನಿಬಾಯಿಸಲಾಗುತ್ತಿದೆ. ಹೆಚ್ಚುವರಿ ದಾಸ್ತಾನು ಬೇರೆ ಜಿಲ್ಲೆಗಳಿಂದ ವರ್ಗಾವಣೆ ಮಾಡಲಾಗುತ್ತಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.

ರಸಗೊಬ್ಬರ ಅದರಲ್ಲೂ ಮುಖ್ಯವಾಗಿ ಯೂರಿಯಾ ಮತ್ತು ಡಿ.ಎ.ಪಿ. ಪೂರೈಕೆ ಕೋರಿ ಜುಲೈ 7 ರಂದು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.  ಆ ನಂತರ ನಾನು ಹಾಗೂ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ರಸಗೊಬ್ಬರ ಖಾತೆ ಸಚಿವರ ಭೇಟಿಗಾಗಿ ಸಮಯಾವಕಾಶ ಕೋರಿ ಪತ್ರ ಬರೆಯಲಾಗಿದ್ದು, ಅವಕಾಶ ಸಿಕ್ಕರೆ ಭೇಟಿ ಮಾಡಿ, ರಾಜ್ಯದ ಪರಿಸ್ಥಿತಿ ವಿವರಿಸಿ ಮನವಿ ಮಾಡಲಾಗುವುದು ಎಂದು ಚಲುವರಾಯಸ್ವಾಮಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ