Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ವಕ್ಪ್ ಬೋರ್ಡ್ ಜಮೀನು ವಿವಾದ : ಕೊತ್ತತ್ತಿಯಲ್ಲಿ ಸಚ್ಚಿದಾನಂದ ಪರಿಶೀಲನೆ

ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ಸರ್ವೆ ನಂಬರ್ 237 ರಲ್ಲಿ ಸರಕಾರಿ ಗುಂಚು ತೋಪು ಹಾಗೂ ರೈತರೊಬ್ಬರಿಗೆ ಸೇರಿದ ಒಟ್ಟು ಮೂರು ಎಕರೆ ಜಮೀನು ವಕ್ಪ್ ಬೋರ್ಡ್ ಗೆ ಖಾತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಎಸ್. ಸಚ್ಚಿದಾನಂದ ಇಂಡುವಾಳು ಅವರ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣ ತಾಲೂಕು ಮಹದೇವಪುರ, ಚಂದಗಾಲು ಹಾಗೂ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ದೇವಾಲಯ, ಸರ್ಕಾರಿ ಶಾಲೆ ಹಾಗೂ ಖಾಸಗಿ ಜಮೀನು ವಕ್ಪ್ ಬೋರ್ಡ್ ಗೆ ಖಾತೆಯಾಗಿದ್ದ ಬೆನ್ನಲ್ಲೇ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಡ್ಯ ತಾಲೂಕು ಕೊತ್ತತ್ತಿ ಗ್ರಾಮದಲ್ಲೂ ಸರ್ಕಾರಿ ಆಸ್ತಿ ಮತ್ತು ರೈತರ ಖಾಸಗಿ ಕೃಷಿ ಭೂಮಿ ವಕ್ಪ್ ಬೋರ್ಡ್ ಗೆ ಖಾತೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ನೀಡಿದ ಮಾಹಿತಿ ಆಧರಿಸಿ ಸಚ್ಚಿದಾನಂದ ಅವರು ಗ್ರಾಮಕ್ಕೆ ತೆರಳಿ ಗ್ರಾಮದ ರೈತರು ಹಾಗೂ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು. ಜೊತೆಗೆ ಇದೆ ವೇಳೆ ವಕ್ಪ್ ಬೋರ್ಡ್ ಗೆ ಖಾತೆಯಾಗಿರುವ ಜಮೀನಿನ ಸ್ಥಳಕ್ಕೂ ಕೂಡ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮದ ಕೆರೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಕೆಲವು ಮುಸ್ಲಿಂ ವ್ಯಕ್ತಿಗಳು ಸಣ್ಣದಾದ ದರ್ಗಾ ನಿರ್ಮಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ವೆ ನಂಬರ್ 237 ರಲ್ಲಿ 3 ಎಕರೆ ಜಮೀನನ್ನು ವಕ್ಫ್ ಬೋರ್ಡ್ ಗೆ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಖಾತೆ ನಂಬರ್ 1224ರಲ್ಲಿ ಒಂದು ಎಕರೆ ಸರಕಾರಿ ಗುಂಚುತೋಪು, ಖಾತೆ ನಂಬರ್ 774ರಲ್ಲಿ ಕೆ.ಪಿಸೋಮಶೇಖರ್ ಬಿನ್ ಪುಟ್ಟೇಗೌಡ ಅವರಿಗೆ ಸೇರಿದ ಎರಡು ಎಕರೆ ಸಂಪೂರ್ಣ ಜಮೀನು ವಕ್ಫ್ ಬೋರ್ಡ್ ಗೆ ಖಾತೆಯಾಗಿದೆ. ನೂರಾರು ವರ್ಷಗಳಿಂದಲೂ ಈ ಜಾಗ ಸೋಮಶೇಖರ್ ಅವರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದೆ. ಜೊತೆಗೆ ಆರು ವರ್ಷಗಳ ಹಿಂದೆಯೇ ರಚನೆಯಾಗಿರುವ ಈ ಗ್ರಾಮದಲ್ಲಿ ಶ್ರೀಬ್ಯಾಲಕಮ್ಮ ದೇವಿ ದೇವಾಲಯವಿದೆ. ಹೀಗಿರುವಾಗ ಈ ಜಾಗವು ವಕ್ಫ್ ಬೋರ್ಡ್ ಗೆ ಖಾತೆಯಾಗಿದ್ದಾದರೂ ಹೇಗೆ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ರೈತರು ಬ್ಯಾಲಕಮ್ಮ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಅವರಿಗೆ ಬಿಜೆಪಿ ಮುಖಂಡ ಎಸ್ ಸಚ್ಚಿದಾನಂದ ಅವರು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. ಇದೇ ಸಂದರ್ಭದಲ್ಲಿ ಸಚ್ಚಿದಾನಂದ ಅವರು ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಫೋನ್ ಕರೆ ಮಾಡಿ ಸರ್ಕಾರಿ ಜಾಗ ಹಾಗೂ ರೈತರ ಖಾಸಗಿ ಜಮೀನು ಅಕ್ರಮವಾಗಿ ವಕ್ಫ್ ಬೋರ್ಡ್ ಗೆ ಖಾತೆಯಾಗಿರುವುದನ್ನು ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಈ ವಿಷಯ ಈಗಾಗಲೇ ತಮ್ಮ ಗಮನಕ್ಕೆ ಬಂದಿದೆ. ಬಗ್ಗೆ ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಆಗ ಸಚ್ಚಿದಾನಂದ ಅವರು ಗ್ರಾಮಕ್ಕೆ ಖುದ್ದಾಗಿ ನೀವೇ ಉಪವಿಭಾಗಾಧಿಕಾರಿ, ತಹಸಿಲ್ದಾರ್ ವಿಎ, ಆರ್ ಐ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಗ್ರಾಮಸ್ಥರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದರು.

ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ ಸಚ್ಚಿದಾನಂದ ಅವರು, ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ ಮಾಡೋಣ. ಉಳಿದಂತೆ ಯಾವುದೇ ರಾಜಕೀಯ ಬೇಡ. ಗ್ರಾಮದ ರೈತ ಸೋಮಶೇಖರ್ ಹಾಗೂ ಗ್ರಾಮಕ್ಕೆ ಆಗಿರುವ ಅನ್ಯಾಯದ ಬಗ್ಗೆ ಈಗ ಎಲ್ಲರೂ ಒಟ್ಟಾಗಿ. ಪಕ್ಷಾತೀತ, ಜಾತ್ಯಾತೀತವಾಗಿ ಒಂದಾಗಬೇಕು ಎಂದು ಕರೆ ನೀಡಿದರು.

ಕಂದಾಯ ಇಲಾಖೆಗೆ ರೈತರಿಗೆ ಯಾವುದೇ ತೊಂದರೆಯಾದರೆ ಸಂಬಂಧಿಸಿದ ರೈತರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸಿಲ್ದಾರ್ ಕೋರ್ಟ್ ಅಥವಾ ಸಾಮಾನ್ಯ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ರೈತರ ಜಮೀನಿನ ಆರ್ ಟಿ ಸಿ ಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿ ಸಮಸ್ಯೆಯಾದರೆ ವಕ್ಫ್ ಪ್ರಾಧಿಕಾರಕ್ಕೆ ಹೋಗಬೇಕು. ಇದು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನಾಗಿದೆ. ರೈತರಿಗೆ ಆಗಿರುವ ಅನ್ಯಾಯ. ಜನರ ಧಾರ್ಮಿಕ ಭಾವನೆಗಳಿಗೆ ಆಗಿರುವ ಧಕ್ಕೆಯಾಗಿದೆ. ತಕ್ಷಣವೇ ಈ ಕಾಯಿದೆ ರದ್ದಾಗಬೇಕು. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಆಗ್ರಹಿಸಿದರು.

ನಾನು ಇಲ್ಲಿಗೆ ರಾಜಕಾರಣ ಮಾತನಾಡಲು ಬಂದಿಲ್ಲ. ರೈತರ ಪರವಾಗಿ ಬಂದಿದ್ದೇನೆ. ರೈತರು ಮತ್ತು ಗ್ರಾಮಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಲು ಬಂದಿದ್ದೇನೆ. ಮುಸ್ಲಿಮರ ಓಲೈಕೆಗಾಗಿ ಹಿಂದುಗಳು ಹಾಗೂ ರೈತರ ಮೇಲೆ ದಬ್ಬಾಳಿಕೆ ಮಾಡುವುದನ್ನು ತಾವು ಸಹಿಸುವುದಿಲ್ಲ. ರೈತರಿಗೆ ಅನ್ಯಾಯ ಮಾಡಿ ಮುಸ್ಲಿಮರನ್ನು ಹೋಲಿಕೆ ಮಾಡುವುದು ಒಳ್ಳೆಯದಲ್ಲ. ದೇವರು ಅವರಿಗೆ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪದೇ ಪದೇ ತಾನು ಹಿಂದೂ ಮತ್ತು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತ ವಿದ್ಯಾರ್ಥಿ ನಿಧಿ, ರೈತರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಿದೆ. ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ತೀರಾ ವಿಳಂಬ ಮಾಡುತ್ತಿದೆ. ಈಗ ಹೊಸ ಬೆಳವಣಿಗೆ ಎಂಬಂತೆ ರೈತ ಕುಲದ ನಿರ್ನಾಮಕ್ಕೆ ವಕ್ಫ್ ಬೋರ್ಡ್ ಹೆಸರಿನಲ್ಲಿ ಮುನ್ನುಡಿ ಬರೆದಿದೆ. ರೈತರ ಜಮೀನು, ಸರ್ಕಾರಿ ಶಾಲೆ, ದೇವಾಲಯದ ಆಸ್ತಿಯನ್ನು ವಕ್ಫ್ ಬೋರ್ಡ್ ಕಬಡಿಸಲು ಮುಖ್ಯಮಂತ್ರಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರಂಭಿಸಿದರು.

ಕ್ಷೇತ್ರದಲ್ಲಿ ರೈತರಿಗೆ ಇಷ್ಟೆಲ್ಲಾ ಅನ್ಯಾಯ ಆಗುತ್ತಿದ್ದರೂ ಕೂಡ ಶಾಸಕರು ಈ ಬಗ್ಗೆ ಒಂದು ಚೂರು ಗಮನಹರಿಸುತ್ತಿಲ್ಲ. ಕ್ಷೇತ್ರದ ಶಾಸಕರು ಸಂಪೂರ್ಣ ಕಾಣೆಯಾಗಿದ್ದಾರೆ ಎಂದು ಕಿಡಿ ಕಾರಿದರು.

ಈ ಸಂದರ್ಭದಲ್ಲಿ ಜಮೀನು ಮಾಲಿಕ ಸೋಮಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಯೋಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ಜವರೇಗೌಡ, ಸದಸ್ಯ ಚೇತನ್, ಉದ್ಯಮಿ ಮಹೇಶ್, ತಾಪಂ ಮಾಜಿ ಉಪಾಧ್ಯಕ್ಷ ಭಾಸ್ಕರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೇವಿನಹಳ್ಳಿ ಮಹೇಶ್, ಗ್ರಾಮದ ಮುಖಂಡರಾದ ಸುಖೇಂದ್ರ, ಪ್ರದೀಪ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ