ಯಾರನ್ನು ಕೇಳಿ ನೀರು ನಿಲ್ಲಿಸಿದ್ದೀರಿ, ನೀರು ಬಿಡಬಾರದೆಂದು ಯಾರು ಹೇಳಿದ್ರು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಿದ್ದೀಯಾ ಎಂದು ಕಾ.ನೀ.ನಿ.ಯ ಕಾರ್ಯಪಾಲಕ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡ ಕ್ರೀಡಾ ಮತ್ತು ರೇಷ್ಮೆ ಇಲಾಖೆ ಸಚಿವ ನಾರಾಯಣಗೌಡ ಇಂದೇ ನಾಲೆಗಳಿಗೆ ನೀರು ಹರಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿ.ಸಿ.ನಾಲೆಯಿಂದ ಒಂದು ತಿಂಗಳಿಂದ ನೀರು ಬಿಡುಗಡೆ ಮಾಡದೇ ರೈತರ ಬೆಳೆಗಳು ಒಣಗುತ್ತಿದೆ ಎಂದು ಶಾಸಕರು ಹಾಗೂ ಸಂಸದರು ಸಚಿವರಿಗೆ ತಿಳಿಸಿದಾಗ ನೀರು ನಿಲುಗಡೆಗೂ ಮುನ್ನ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ವಿ.ಸಿ.ನಾಲೆ ಕಾರ್ಯಪಾಲಕ ಅಭಿಯಂತರ ಆನಂದ್ ಅವರ ವಿರುದ್ಧ ಆಕ್ರೋಶಗೊಂಡು ಇಂದೇ ನೀರು ಹರಿಸುವಂತೆ ತಿಳಿಸಿದರು.
ಕಲಬೆರೆಕೆ ರಸಗೊಬ್ಬರ ಕಂಡು ಬಂದರೆ ಕ್ರಮ
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಅಥವಾ ಕಲಬೆರೆಕೆ ರಸಗೊಬ್ಬರ ವಿತರಣೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು. ಜಿಲ್ಲೆಯಿಂದ ಹೊರ ಜಿಲ್ಲೆ ಅಥವಾ ಹೊರ ರಾಜ್ಯಕ್ಕೆ ಅಕ್ರಮವಾಗಿ ರಸಗೊಬ್ಬರ ಸಾಗಾಣಿಕೆಯಾಗಬಾರದು. ಈ ರೀತಿಯ ಪ್ರಕರಣಗಳು ಕಂಡುಬಂದರೆ ದಾಳಿ ನಡೆಸಿ ವಶ ಪಡಿಸಿಕೊಂಡು ದಂಡ ಹಾಕದೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಎಂದರು.
ಬಿತ್ತನೆ ಬೀಜ ಅಥವಾ ರಸಗೊಬ್ಬರದ ಅವಶ್ಯಕತೆಯನ್ನು ಪರಿಶೀಲಿಸಿಕೊಳ್ಳಿ.ಕೊರತೆ ಇದ್ದಲ್ಲಿ ನನ್ನ ಗಮನಕ್ಕೆ ತಂದರೆ ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವುದಾಗಿ ತಿಳಿಸಿದರು.
ಶಾಲಾ ಕಾಲೇಜು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಡಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಸಂಸದೆ ಸುಮಲತಾ ಅಂಬರೀಶ್, ಶಾಸಕರಾದ ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಜಿ.ಪಂ ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ವಿ.ರಾಮ್ ಪ್ರಸಾಥ್ ಮನೋಹರ್, ಜಿಲ್ಲಾಧಿಕಾರಿಗಳಾದ ಎಸ್.ಅಶ್ವತಿ, ಜಿ.ಪಂ. ಸಿಇಒ ದಿವ್ಯ ಪ್ರಭು, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್,ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ.ಋತ್ರೇನ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.