Saturday, November 21, 2026

ಪ್ರಾಯೋಗಿಕ ಆವೃತ್ತಿ

ದೇವನಹಳ್ಳಿ ಭೂ ಸ್ವಾಧೀನ ಕೈಬಿಟ್ಟ ಸರ್ಕಾರ ; ರೈತ ಚಳುವಳಿಗೆ ದೊರತ ವಿಜಯ – ಭರತ್ ರಾಜ್

ರೈತರ ಕೃಷಿ ಭೂಮಿಯನ್ನ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿದ್ದ ಕ್ರಮವನ್ನು ವಿರೋಧಿಸಿ ಕಳೆದ ಮೂರೂವರೆ ವರ್ಷಗಳಿಂದ ರೈತರು ನಡೆಸಿದ ಹೋರಾಟಕ್ಕೆ ಜಯ ದೊರೆತಿದೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ತಿಳಿಸಿದ್ದಾರೆ.

ಮಳವಳ್ಳಿ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿ, ರೈತ ಹೋರಾಟಗಾರರನ್ನ ಅಭಿನಂದಿಸಿ ಮಾತನಾಡಿದ ಅವರು, ದೇವನಹಳ್ಳಿ ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ,  ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಸಚಿವರಾದ ಪ್ರಿಯಾಂಕ ಖರ್ಗೆ, ಕೆಎಚ್ ಮುನಿಯಪ್ಪ ಅವರ ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರನ್ನೊಳಗೊಂಡ ಸಭೆಯಲ್ಲಿ ತೀರ್ಮಾನ ಮಾಡಿರುವುದು, ರೈತ ಚಳುವಳಿಗೆ ಪ್ರಗತಿಪರ ಚಳುವಳಿಗೆ ಸಿಕ್ಕ ವಿಜಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ 1777ಎಕರೆ ಭೂಮಿಯನ್ನ ಹಿಂದೆ ಆಡಳಿತ ನಡೆಸುತ್ತಿದ್ದ ಬಿಜೆಪಿ ಸರ್ಕಾರ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿ ಭೂಸ್ವಾಧೀನ ಮಾಡಿಕೊಳ್ಳಲು ಹೊರಟಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ರೈತರ ಪರವಾಗಿ ನಿಲ್ಲುವುದಾಗಿ ಹೇಳಿ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಭೂಸ್ವಾಧೀನವನ್ನ ಕೈ ಬಿಡುವ ಭರವಸೆಯನ್ನ ಮೊದಲು ನೀಡಿದ್ದರು ಅಧಿಕಾರಕ್ಕೆ ಬಂದ ನಂತರದಲ್ಲಿ ಬಿಜೆಪಿಯ ರೈತ ವಿರೋಧಿಯ ನೀತಿಯನ್ನೇ ಅನುಸರಿಸಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತು.ಈ ರೈತ ವಿರೋಧಿ ನೀತಿಯನ್ನ ಖಂಡಿಸಿ ಯಾವುದೇ ಕಾರಣಕ್ಕೂ ಭೂಸ್ವಾಧೀನವನ್ನ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ದೇವನಹಳ್ಳಿ ತಾಲೂಕಿನ ರೈತರು ಕಳೆದ ಮೂರು ವರ್ಷಕ್ಕಿಂತಲೂ ಹೆಚ್ಚು ದಿನಗಳಿಂದ ನಿರಂತರ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದರು. ಈ ಹೋರಾಟದಲ್ಲಿ ಅಖಿಲ ಭಾರತ ಮಟ್ಟದ ರಾಷ್ಟ್ರ ನಾಯಕರು ಕಲಾವಿದರು ಸಾಹಿತಿಗಳು ಪ್ರಗತಿಪರರು ಎಲ್ಲರೂ ವ್ಯಾಪಕವಾದ ಬೆಂಬಲವನ್ನ ವ್ಯಕ್ತಪಡಿಸಿದ್ದರು. ಈ ಸಮಸ್ಯೆ ರಾಷ್ಟ್ರದ ಗಮನ ಸೆಳೆದಿತ್ತು ಎಂದು ಅವರು ಸ್ಮರಿಸಿದ್ದಾರೆ.

ಕರ್ನಾಟಕ ಪ್ರಾಂತ ರೈತ ಸಂಘ ಜನವಾದಿ ಮಹಿಳಾ ಸಂಘಟನೆ, ಕಾರ್ಮಿಕ ಸಂಘಟನೆಗಳು ಇತರೆ ಪ್ರಗತಿಪರ ಸಂಘಟನೆಗಳ ಮುಖಂಡರನ್ನು ಅಭಿನಂದಿಸಿದ ಅವರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಮಳವಳ್ಳಿ ತಾಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ , ಉಪಾಧ್ಯಕ್ಷ ಎಂ ಇ ಮಹದೇವು, ಶಿವಕುಮಾರ್, ಗುರುಸ್ವಾಮಿ, ಮರಿಲಿಂಗೇಗೌಡ, ಚಿಕ್ಕಸ್ವಾಮಿ, ಗಣೇಶ್, ಕೆ ಎನ್ ಮೂರ್ತಿ, ದೊಡ್ಡ ಮರಿಗೌಡ, ನಂಜುಂಡಸ್ವಾಮಿ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲ, ಪದ್ಮ, ಅಂಬಿಕಾ, ಅನಿತ, ಸಿಐಟಿಯು ರಾಜ್ಯ ಮುಖಂಡರಾದ ಜಿ ರಾಮಕೃಷ್ಣ, ಮಹಾದೇವಮ್ಮ, ಅರ್ಜುನ್ ಹಾಗೂ ನಾಗರಾಜ್ ಮುಂತಾದವರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ