ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ಸಾರ್ವಜನಿಕರ ಸ್ಮಶಾನ ಕಬಳಿಸಲು ಎಚ್.ಎಂ.ನಾಗರಾಜು ಹಾಗೂ ಬೆಂಬಲಿಗರು ಮುಂದಾಗಿದ್ದು, ಅವರ ವಿರುದ್ದ ಕಾನೂನು ಕ್ರಮ ಕೈಗೊಂಡು ಸ್ಮಶಾನವನ್ನು ಉಳಿಸಿಕೊಡಬೇಕೆಂದು ಆಗ್ರಹಿಸಿ ಗೆಜ್ಜಲರೆಗೆ ಕಾಲೋನಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗೆಜ್ಜಲಗೆರೆ ಕಾಲೋನಿಯಲ್ಲಿ ಸಾರ್ವಜನಿಕ ಸ್ಮಶಾನವನ್ನು ಕಬಳಿಸಲು ಅಕ್ರಮವಾಗಿ ಖಾತೆ ಮಾಡಿಸಿಕೊಂಡು ದೌರ್ಜನ್ಯ ನಡೆಸುತ್ತಿದ್ದಾರೆ, ಸಾರ್ವಜನಿಕ ಸ್ಮಶಾನ ಉಳಿಸಲು ಹೋರಾಟ ಮಾಡುತ್ತಿರುವವರ ಮೇಲೆ ನಿಂದನೆ ಮಾಡಿ, ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ಗ್ರಾಮದ ಸರ್ವೆ ನಂ. 203 ಸ್ಮಶಾನದ ಬಗ್ಗೆ ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ, ಸರ್ವೆ ನಂ 139ರ ಸರ್ಕಾರಿ ಕಟ್ಟೆ ಜಾಗ ಉಳಿಸುವ ಬಗ್ಗೆ ತಹಸಿಲ್ದಾರ್ ಅವರಿಗೆ ಮನವಿ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರಿ ಜಾಗ ಉಳಿಸಲು ಹೋರಾಡುತ್ತಿರುವ ಜಿ.ಪಿ ಶಿವಲಿಂಗಯ್ಯ, ಮಂಜುನಾಥ್, ಜಯ ವೀರೇಗೌಡ ಎಂಬುವವರಿಗೆ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದು ಈ ಬಗ್ಗೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಗ್ರಾಮದ ಅಶೋಕ, ಸತೀಶ್, ಹರೀಶ್, ಸುರೇಶ್, ಆದಿ ಪ್ರಸಾದ್ ಮತ್ತು ಎಚ್ ಎಂ ನಾಗರಾಜ್ ವಿರುದ್ಧ ದೂರು ದಾಖಲಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಜಿ.ಪಿ ಶಿವಲಿಂಗಯ್ಯ, ಜಿ.ಎನ್ ಮಂಜುನಾಥ್, ದೇವರಾಜ್, ಜಯ ವೀರೇಗೌಡ ಮತ್ತಿತರರಿದ್ದರು.




