ಕೆ.ಆರ್.ಪೇಟೆ ತಾಲ್ಲೂಕಿನ ಸಿಂಧಘಟ್ಟ ಗ್ರಾಮದ ರೈತ ಪುಟ್ಟರಾಜು ಅವರ ರಾಸುಗಳಿಗೆ ಮೇವು ಒದಗಿಸುವ ಮೂಲಕ ನಟ ವಿನೋದ್ ರಾಜ್ ಸಹಾಯಾಸ್ತ ಚಾಚುವ ಜೊತೆಗೆ ಮಾನವೀಯತೆ ಮೆರೆದಿದ್ದಾರೆ.
ತೀವ್ರ ಬರಗಾಲದ ಪರಿಣಾಮ ರಾಸುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದ ರೈತ ಕುಟುಂಬಕ್ಕೆ ಒಂದು ಲಾರಿ ಮೇವನ್ನು ಉಚಿತವಾಗಿ ನೀಡಿ ರಾಸುಗಳ ಸಂರಕ್ಷಣೆಗೆ ಮುಂದಾದರು. ಒಂದು ಲಾರಿ ಲೋಡ್ ಹುಲ್ಲಿನೊಂದಿಗೆ ಸಿಂಧಘಟ್ಟ ಗ್ರಾಮಕ್ಕೆ ಆಗಮಿಸಿ ರೈತನಿಗೆ ನೆರವಾದರು.
ಕೆ.ಆರ್.ಪೇಟೆ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೆರೆ-ಕಟ್ಟೆಗಳು ಬರಿದಾಗಿವೆ. ಹೇಮಾವತಿ ನದಿಯಿಂದಲೂ ನೀರಿನ ಅಭಾವಿವಿದೆ, ಇದರ ಪರಿಣಾಮ ಜನ ಜಾನುವಾರು ಮತ್ತು ಪ್ರಾಣಿ, ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಬೆಳೆಯಿಲ್ಲದೆ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜಾನುವಾರಗಳ ರಕ್ಷಣೆಗೆ ಅಗತ್ಯ ಮೇವು ನೀಡುವಂತೆ ರೈತ ಪುಟ್ಟರಾಜು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ನಟ ವಿನೋದ್ರಾಜ್ ಒಂದು ಲಾರಿ ಹುಲ್ಲನ್ನು ಬೇರೆ ರೈತರಿಂದ ಖರೀದಿ ಮಾಡಿ ಬಡರೈತನಿಗೆ ಕೊಡುಗೆಯಾಗಿ ನೀಡಿದ್ದಾರೆ.




