Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಜ.12ಕ್ಕೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ: ಪದಗ್ರಹಣ

ಮಂಡ್ಯ ಜಿಲ್ಲಾ ಯುವ ಪರಿಷತ್, ಭಾರತೀಯ ರೆಡ್‌ಕ್ರಾಸ್, ಎಸ್.ಬಿ. ಎಜುಕೇಷನ್ ಟ್ರಸ್ಟ್ ವತಿಯಿಂದ ಜ. 12ರಂದು ಬೆಳಗ್ಗೆ 10.30ಕ್ಕೆ ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ, ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾ ಯುವ ಪರಿಷತ್ತಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಪಿ. ರವಿಕುಮಾರ್ ಸಮಾರಂಭ ಉದ್ಘಾಟಿಸುವರು. ಭಾರತೀಯ ರೆಡ್‌ಕ್ರಾಸ್ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಯುವ ಪ್ರಶಸ್ತಿ ಪ್ರದಾನ ಮಾಡುವರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ. ಚಲುವಯ್ಯ ಬಹುಮಾನ ವಿತರಿಸುವರು. ಜೆ.ಎಸ್.ಎಸ್. ಉನ್ನತ ಶಿಕ್ಷಣ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಡಾ. ಭೀಮರಾಜ್ ಈರೇಗೌಡ ವಿಶೇಷ ಉಪನ್ಯಾಸ ನೀಡುವರು. ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಕಾರಸವಾಡಿ ಮಹದೇವು ಮತ್ತು ತಂಡ ಜವಾಬ್ದಾರಿ ಸ್ವೀಕಾರ ಮಾಡುವರು. ನಿಕಟಪೂರ್ವ ಅಧ್ಯಕ್ಷ ಮಂಗಲ ಎಂ. ಯೋಗೀಶ್ ಜವಾಬ್ದಾರಿ ಹಸ್ತಾಂತರಿಸುವರು. ರೆಡ್‌ಕ್ರಾಸ್ ಸಂಸ್ಥೆ ಕರ‍್ಯದರ್ಶಿ ಡಾ. ಕೆ.ಎಂ. ಶಿವಕುಮಾರ್, ಕೃಷಿಕ್ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಡಾ. ಕೆ.ಟಿ. ಹನುಮಂತು ಭಾಗವಹಿಸಲಿದ್ದಾರೆ ಎಂದರು.

ಇದೇ ವೇಳೆ ಯುವ ಸಂಘಟನೆ ಹಾಗೂ ಕಲಾವಿದರಾದ ಕೆ.ಎನ್. ಪದ್ಮಿನಿ ಪ್ರಸನ್ನಕುಮಾರ್, ಎ.ಎಂ. ಸಚಿನ್‌ಕುಮಾರ್, ಕೆ.ಆರ್. ಗಿರೀಶ್, ಪುಟ್ಟಸ್ವಾಮಿ, ಬಿ.ಎಸ್. ಚಂದ್ರಶೇಖರ್, ಎಂ.ಪಿ. ಸೋನು, ಡಿ.ಎಚ್. ಶೇಖರ್ ಅವರಿಗೆ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸ್ವಾಮಿ ವಿವೇಕಾನಂದರು ಚಿಕಾಗೋನಲ್ಲಿ ಮಾಡಿದ ಭಾಷಣದ ವಿಷಯ ಕುರಿತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 1 ಸಾವಿರ, ದ್ವಿತೀಯ 750, ತೃತೀಯ 500 ಹಾಗೂ 250 ರೂ. ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಜಿಲ್ಲಾದ್ಯಂತ ಯುವಜನರನ್ನು ಒಗ್ಗೂಡಿಸಿ ಅವರಲ್ಲಿ ಕಲೆಯನ್ನು ಪೋಷಿಸುವುದು, ಅವರಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಯುವಜನರನ್ನು ಯುವಜನೋತ್ಸವದಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಯುವ ಪರಿಷತ್ ಶ್ರಮಿಸಲಿದೆ ಎಂದು ತಿಳಿಸಿದರು.

ಪರಿಷತ್‌ನ ಪದಾಧಿಕಾರಿಗಳಾದ ಕೆ.ಜೆ. ಸುರೇಶ್ ಕೀಲಾರ, ಕೀಲಾರ ಕೃಷ್ಣೇಗೌಡ, ಹನಿಯಂಬಾಡಿ ನಾಗರಾಜು, ಮಂಜೇಶ್, ಜಯಶೀಲ, ಮಂಜುಳಾ ಗೋಷ್ಠಿಯಲ್ಲಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ