ಮೇಲುಕೋಟೆ ಜಾತ್ರೆ ಸಂದರ್ಭದಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿಸಿಕೊಂಡ ಅಧಿಕಾರಿಗಳು, ಇದುವರೆಗೆ ಬಿಲ್ ಪಾವತಿ ಮಾಡದೇ ವಂಚಿಸುತ್ತಿದ್ದಾರೆಂದು ಆಲ್ವಿನ್ ಸುಮನ್ ಅಳಲು ತೋಡಿಕೊಂಡರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಂಡವಪುರ ವಿಭಾಗದ ಗ್ರಾಮಾಂತರ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ತಮ್ಮಣ್ಣ ಎಂ.ಕೆ. ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಸಾಮ್ಯಯಲ್ ಅವರು ಮೇಲುಕೋಟೆ ಜಾತ್ರೆ ಸಂದರ್ಭದಲ್ಲಿ ಕಳೆದ ಮಾ.13ರಿಂದ 17ರವರೆಗೆ ನೀರು ಸರಬರಾಜು ಮಾಡುವಂತೆ ಕೇಳಿಕೊಂಡಿದ್ದರು, ಅದರಂತೆ ನಾನು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದೆ, ಆದರೆ ಇದರ ಬಿಲ್ ಪಾವತಿ ಮಾಡದೆ ಇಲ್ಲದ ನೆಪ ಹೇಳುತ್ತಿದ್ದಾರೆಂದು ದೂರಿದರು.
ಮಂಡ್ಯ ಬಂದೀಗೌಡ ಬಡಾವಣೆಯಲ್ಲಿರುವ ಕರ್ನಾಟಕ ಜಲ ಮಂಡಳಿಯ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಜುನಾಥ್ ಅವರು, ಇಇ ತಮ್ಮಣ್ಣ ಹಾಗೂ ಎಇಇ ಸಾಮ್ಯಯಲ್ ಗೆ ನನ್ನನ್ನು ಪರಿಚಯ ಮಾಡಿಕೊಟ್ಟಿದ್ದರು, ಇದರ ಆಧಾರದ ಮೇಲೆ ಈ ಅಧಿಕಾರಿಗಳು ನೀರು ಸರಬರಾಜು ಮಾಡುವಂತೆ ನನಗೆ ದುಂಬಾಲು ಬಿದ್ದು ಕೇಳಿಕೊಂಡಿದ್ದರು, ಅದರಂತೆ ಜಾತ್ರೆ ಸಂದರ್ಭದಲ್ಲಿ ಒಟ್ಟು 5 ದಿನಗಳ ಕಾಲ ನೀರು ಸರಬರಾಜು ಮಾಡಿದ್ದೇನೆ, ಇದರ ವೆಚ್ಚ 65,000 ಆಗಿದ್ದು, ಈ ಬಿಲ್ಲನ್ನು ಪಾವತಿಸಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಅವರು ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿದರು.




