ಪಟ್ಟಣ ಪ್ರದೇಶದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಾಗೂ ದುರ್ಬಲ ವರ್ಗದವರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು ಸರ್ಕಾರ ”ನಮ್ಮ ಕ್ಲಿನಿಕ್” ತೆರೆದಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
ಶ್ರೀರಂಗಪಟ್ಟಣದ ರಂಗನಾಥನಗರದಲ್ಲಿ ”ನಮ್ಮ ಕ್ಲಿನಿಕ್” ಅನ್ನು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ನಮ್ಮ ಕ್ಲಿನಿಕ್ ನಲ್ಲಿ ಸಿಗುವಂತಹ ಸೇವೆಗಳನ್ನು ಪಡೆದುಕೊಂಡು, ತಮ್ಮ ಆರೋಗ್ಯ ಸುಧಾರಣೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ತಾಲೂಕು ನೋಡಲ್ ಅಧಿಕಾರಿ ಕೆ.ಪಿ. ಅಶ್ವತ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ನಾಲ್ಕು ಕಡೆ ನಮ್ಮ ಕ್ಲಿನಿಕ್ ಗಳನ್ನು ಪ್ರಾರಂಭಿಸಲಾಗಿದ್ದು ಶ್ರೀರಂಗಪಟ್ಟಣದ ರಂಗನಾಥ ಬಡಾವಣೆಯಲ್ಲಿ ಪ್ರಾರಂಭಿಸಲಾಗಿರುವ ಈ ನಮ್ಮ ಕ್ಲಿನಿಕ್ ನಿಂದ ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲವಾಗಲಿದ್ದು, ಇಲ್ಲಿ ಒಟ್ಟು 12 ವಿಧದ ಪ್ರಾಥಮಿಕ ಆರೋಗ್ಯ ಆರೋಗ್ಯ ಸೇವೆಗಳು ದೊರಯಲಿವೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಎನ್.ಕೆ.ವೆಂಕಟೇಶ್ ಮಾತನಾಡಿ, ”ನಮ್ಮ ಕ್ಲಿನಿಕ್” ನಲ್ಲಿ ಓರ್ವ ವೈದ್ಯರು, ಶುಷ್ರೂಶಕಿ, ಪ್ರಯೋಗಶಾಲಾ ತಂತ್ರಜ್ಞ ಹಾಗೂ ಡಿ ಗ್ರೂಪ್ ನೌಕರರನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೇಮಕ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ಪ್ರಾಥಮಿಕ ಆರೋಗ್ಯ ಸೇವೆ ಲಭ್ಯವಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ನಿರ್ಮಲ ವೇಣುಗೋಪಾಲ್ ತಹಸೀಲ್ದಾರ್ ಶ್ವೇತಾ ರವೀಂದ್ರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀಣಾ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪಿ ಮಾರುತಿ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ. ಮೋಹನ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ, ಮುಖ್ಯಾಧಿಕಾರಿ ಸಂದೀಪ್ ಮತ್ತಿತರರು ಭಾಗವಹಿಸಿದ್ದರು.




