ದಲಿತ ಸಂಘರ್ಷ ಸಮಿತಿ(ಬಣ ರಹಿತ) ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೫ನೇ ಜಯಂತಿ ಪ್ರಯುಕ್ತ ಅಂಬೇಡ್ಕರ್ ಅವರ ಬದುಕು, ಸಾಧನೆಗಳು ಹಾಗೂ ದೇಶದ ಭವಿಷ್ಯದ ಬಗ್ಗೆ ಅವರ ಚಿಂತನೆಗಳು ಹಾಗೂ ‘ಭಾರತ ಸಂವಿಧಾನದಿಂದ ನಾವು ಕಲಿಯಬೇಕಿರುವುದು ಏನನ್ನು?’ ಕುರಿತು ಮಾ.೨೨ರಂದು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಮಿತಿಯ ಮೈಸೂರು ಜಿಲ್ಲಾ ಸಂಚಾಲಕ ಉಮಾಮಹದೇವು ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಅದರ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಅರ್ಥ ಮಾಡಿಕೊಳ್ಳಬೇಕಾದುದು ಬಹಳಷ್ಟಿದೆ. ಆದ್ದರಿಂದ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕಳೆದ ಬಾರಿಯು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ೪೦ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ ೭೫ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ೭೫ ಕಾಲೇಜಿನ ಪ್ರಾಂಶುಪಾಲರಿಗೂ ಮನವಿ ಮಾಡಿದ್ದು, ಅವರು ವಿದ್ಯಾರ್ಥಿಗಳ ಭಾಗವಹಿಸುವಿಕೆಗೆ ಒಪ್ಪಿಕೊಂಡಿದ್ದಾರೆ. ಕಾಲೇಜು ಶಿಕ್ಷಕರ ಇಲಾಖೆಯ ಆಯುಕ್ತರು, ವಿವಿಯ ಕುಲಸಚಿವರ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವವರು ಅರ್ಹತಾ ಪರೀಕ್ಷೆ ಎದುರಿಸಬೇಕಾಗುವುದು. ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಮಾ.9 ಅಂತಿಮ ದಿನವಾಗಿರುತ್ತದೆ. ಮಾ.9ರಂದು ಆಯಾ ಕಾಲೇಜಿನಲ್ಲಿ ಸಂವಿಧಾನದ ಆಧಾರದಲ್ಲಿ 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅಲ್ಲಿ20 ಕ್ಕಿಂತ ಹೆಚ್ಚು ಅಂಕಗಳಿಸಿದವರು ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ. ಅವರು ಮಾ.22ರಂದು ಮುಖ್ಯ ಪ್ರಬಂಧ ಸ್ಪರ್ಧೆ ಮಂಡ್ಯ ನಗರದ ಪಿಇಎಸ್ ಕಾಲೇಜು, ಮೈಸೂರಿನ ಮಹಾರಾಜ ಕಾಲೇಜು, ಚಾಮರಾಜನಗರದ ಕೇಂದ್ರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಅಂಬೇಡ್ಕರ್ ಅಧ್ಯಯನ ಸಂಸ್ಥೆಯಿಂದ ಮೌಲ್ಯ ಮಾಪನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನಕ್ಕೆ ಡಾ.ರಾಮ್ ಮನೋಹರ ಲೋಹಿಯಾ ವಿಚಾರ ವೇದಿಕೆಯಿಂದ ೩೭ ಸಾವಿರದ ಟ್ಯಾಬ್, ಎರಡನೇ ಬಹುಮಾನವಾಗಿ ಇಬ್ಬರಿಗೆ ತಲಾ ೫೦೦೦ ಸಾವಿರ, ೩ನೇ ಬಹುಮಾನವಾಗಿ ಮೂವರಿಗೆ ತಲಾ ೨೦೦೦ ಪ್ರೋತ್ಸಾಹ ನೀಡಲಾಗುವುದು. ಇದು ಪ್ರತಿ ಜಿಲ್ಲೆಗೆ ಪ್ರತ್ಯೇಕವಾಗಿರುತ್ತದೆ. ೧ನೇ ಸ್ಥಾನಕ್ಕೆ ೩, ೨ನೇ ಸ್ಥಾನಕ್ಕೆ ೬, ೨ನೇ ಸ್ಥಾನಕ್ಕೆ ೯ ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ವಿವರಿಸಿದರು.
ಕಳೆದ ಬಾರಿ ಅಂಧ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಬಾರಿಯೂ ವಿಶೇಷ ಚೇತನರ ಭಾಗವಹಿಸುವಿಕೆಗೆ ಅವಕಾಶವಿದೆ. ಅವರಲ್ಲಿ ವಿಜೇತರನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗುವುದು. ಯುವ ಜನತೆ ಅಂಬೇಡ್ಕರ್ ಅವರ ಚಿಂತನೆ ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಮೌಲ್ಯ ತಿಳಿದು ಅದರ ಮೂಲಕ ದೇಶದ ಆಗು-ಹೋಗುಗಳ ಬಗ್ಗೆ ಅರಿಯಬೇಕು ಎಂಬುದು ಸ್ಪರ್ಧೆಯ ಉದ್ದೇಶವಾಗಿದೆ ಎಂದರು.
ಗೋಷ್ಠಿಯಲ್ಲಿ ಮೈಸೂರು ಜಿಲ್ಲಾ ಸಂಚಾಲಕ, ಮಂಡ್ಯ ಜಿಲ್ಲಾ ಸಂಚಾಲಕ ಉರುಗಲವಾಡಿ ರಾಮಯ್ಯ, ಅಶೋಕ್, ಮಹಿಳಾ ಜಿಲ್ಲಾ ಸಂಚಾಲಕಿ ಕೆ.ಪಲ್ಲವಿ, ಸಿದ್ದರಾಜು, ಶಿವಮ್ಮ, ಮರಿಸ್ವಾಮಿ ಇದ್ದರು.




