-
ವನ್ಯಪ್ರಾಣಿ ಹಾವಳಿಯಿಂದಾದ ನಷ್ಟ, ಸಾವು – ನೋವು ಪರಿಹಾರದ ಬಗ್ಗೆ ಸದನದಲ್ಲಿ ಪ್ರಶ್ನೆ
- ಕಾಲಮಿತಿಯಲ್ಲಿ ಬಾಕಿ ಪ್ರಕರಣಗಳಿಗೂ ಪರಿಹಾರ ವಿತರಣೆ ಮಾಡುವ ಭರವಸೆ
ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಪ್ರಕರಣಗಳಿಗೆ ಇ-ಪರಿಹಾರ ತಂತ್ರಾಂಶದ ಮೂಲಕ ಪರಿಹಾರವನ್ನು ಪಾವತಿಸಲಾಗುತ್ತದೆ. ಬಾಕಿ ಪ್ರಕರಣಗಳಲ್ಲಿ ಅನುದಾನ ಬಿಡುಗಡೆಗೆ ಅನುಗುಣವಾಗಿ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಮೊತ್ತ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಮಾನವ ಪ್ರಾಣಿಗಳ ಸಂಘರ್ಷಗಳಿಂದ ಆದ ನಷ್ಟ ಸಾವು- ನೋವುಗಳು ಸೇರಿದಂತೆ ರೈತರಿಂದ ಪರಿಹಾರಕ್ಕಾಗಿ ಬಂದ ಅರ್ಜಿಗಳು ಅವುಗಳಲ್ಲಿ ಇತ್ಯರ್ಥವಾದ ಅರ್ಜಿಗಳು ಸೇರಿದಂತೆ ಪರಿಹಾರ ನೀಡಲು ಬಾಕಿ ಇರುವ ಪ್ರಕರಣಗಳಲ್ಲಿ ಯಾವ ರೀತಿ ಕಾಲಮಿತಿಯನ್ನು ಹಾಕಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸದನದಲ್ಲಿ ಪ್ರಶ್ನೆ ಕೇಳಿದ್ದರು.
ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ಬೆಳೆ ನಷ್ಟದ ಪ್ರಮಾಣವೆಷ್ಟು ಹಾಗೂ ಜನರ ಮೇಲೆ ಕಾಡು ಪ್ರಾಣಿಗಳಿಂದಾದ ದಾಳಿಯ ಪ್ರಕರಣಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ತಾಲೂಕುವಾರು ಮಾಹಿತಿ ನೀಡುವಂತೆ ಶಾಸಕರು ಕೋರಿದ್ದರು. ಇದಕ್ಕೆ ಉತ್ತರ ನೀಡಿರುವ ಮುಖ್ಯಮಂತ್ರಿಯವರು, 2019-20 ನೇ ಸಾಲಿನಲ್ಲಿ ಮಳವಳ್ಳಿ ತಾಲೂಕಿನ 381 ಬೆಳೆ ಹಾನಿ ಪ್ರಕರಣಗಳಲ್ಲಿ 19,30,760 ರೂಪಾಯಿಗಳ ಪರಿಹಾರ ನೀಡಲಾಗಿದೆ. 2020- 21ನೇ ಸಾಲಿನಲ್ಲಿ ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕಿನ 223 ಬೆಳೆಹಾನಿ ಪ್ರಕರಣಗಳು ವರದಿಯಾಗಿದ್ದು, 17,44,229 ರೂಪಾಯಿಗಳ ಪರಿಹಾರ ನೀಡಲಾಗಿದೆ ಎಂದು ತಿಳಿಸಿದ್ದಾರೆ.
2021-22ನೇ ಸಾಲಿನಲ್ಲಿ ಮಳವಳ್ಳಿ ಮಂಡ್ಯ ವಿಭಾಗಗಳಲ್ಲಿ 775 ಬೆಳೆ ಹಾನಿ ಪ್ರಕರಣಗಳಲ್ಲಿ 49,61,901 ರೂಪಾಯಿ ಪರಿಹಾರ ನೀಡಲಾಗಿದೆ. 2022- 2023ನೇ ಸಾಲಿನಲ್ಲಿ ಮಳವಳ್ಳಿ ವಿಭಾಗದಲ್ಲಿ 35 ಪ್ರಕರಣಗಳು ದಾಖಲಾಗಿದ್ದು 2,90,918 ಪರಿಹಾರವನ್ನು ನೀಡಲಾಗಿದೆ ಎಂದೂ ಮುಖ್ಯಮಂತ್ರಿಗಳು ಉತ್ತರದಲ್ಲಿ ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಾಡಾನೆ, ಕಾಡು ಹಂದಿ, ಜಿಂಕೆ ಕಡವೆಗಳ ಹಾವಳಿಗೆ ಸಂಬಂಧಿಸಿದಂತೆ ತಾಲೂಕುವಾರು ಪರಿಹಾರ ಕೋರಿ ಎಷ್ಟು ಅರ್ಜಿಗಳು ಬಂದಿವೆ ಎಂದು ಶಾಸಕರು ಕೇಳಿರುವ ಪ್ರಶ್ನೆಗೆ ಉತ್ತರ ದೊರೆತಿದ್ದು, ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ಹಾಗೂ ಪಾಂಡವಪುರ ತಾಲೂಕುಗಳಲ್ಲಿ 1622 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಪರಿಹಾರ ಕೋರಿ ಅರ್ಜಿಗಳು ಬಂದಿವೆ ಎಂದು ತಿಳಿಸಲಾಗಿದೆ.
ಇವುಗಳಲ್ಲಿ ಈಗಾಗಲೇ 1400 ಪ್ರಕರಣಗಳಿಗೆ ಪರಿಹಾರ ನಿಡಲಾಗಿದ್ದು, ಮಂಡ್ಯ ಜಿಲ್ಲೆಯ ಏಳು ತಾಲೂಕುಗಳಲ್ಲಿ ಇನ್ನೂ 222 ಪ್ರಕರಣಗಳಲ್ಲಿ ರೈತರಿಗೆ ಪರಿಹಾರ ನೀಡಲು ಬಾಕಿ ಉಳಿದಿವೆ ಎಂದು ಮುಖ್ಯಮಂತ್ರಿಯವರು ಉತ್ತರಿಸಿದ್ದಾರೆ.
ಇನ್ನು ಮಾನವ ಪ್ರಾಣ ಹಾನಿಗೆ ಸಂಬಂಧಪಟ್ಟಂತೆ ಕೊಳ್ಳೇಗಾಲದ ಕಾವೇರಿ ವನ್ಯಜೀವಿ ವಿಭಾಗ ಹಾಗೂ ಮಂಡ್ಯ ವಿಭಾಗದಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ತಲಾ 7.50 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ ಎಂದೂ ಮುಖ್ಯಮಂತ್ರಿಯವರು ಉತ್ತರಿಸಿದ್ದಾರೆ.




