ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಆಡಳಿತ ನಡೆಸುವವರಿಗೆ ಮಾರ್ಗದರ್ಶನ ನೀಡುವ ಚಿಂತನ ಸಭೆಯಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅಭಿಪ್ರಾಯಪಟ್ಟರು.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು .
ಸಾಹಿತ್ಯ ಸಮ್ಮೇಳನ ಕನ್ನಡದ ಬಗ್ಗೆ ಚಿಂತನೆ ಮಾಡುವ ತಾಣವಾಗಿದೆ. ಸೌಹಾರ್ದತೆ, ಸಮನ್ವಯತೆ, ಸಮಾನತೆ, ಶಾಂತಿಯ ಹಿನ್ನೆಲೆಯಲ್ಲಿ ಒಂದು ಶಕ್ತಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಡಳಿತದೊಂದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸುತ್ತಿದೆ ಎಂದರು.
ಕನ್ನಡ ಸಾಹಿತ್ಯ , ಸಂಸ್ಕೃತಿ ,ಭಾಷೆ ಇವುಗಳ ಜೊತೆಗೆ ಕಲೆ, ಜನಪದ ಸೇರಿದಂತೆ ಎಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಅಸ್ಮಿತೆಯ ಬಗ್ಗೆ ಸಮ್ಮೇಳನದಲ್ಲಿ ಚಿಂತನೆ ನಡೆಸಲಾಗುತ್ತದೆ ಎಂದರು.
ಕ್ರಿಮಿನಲ್ ಆರೋಪಿಗಳಿಗೆ ಅವಕಾಶವಿಲ್ಲ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಿತಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೊಂದಿರುವವರಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟಪಡಿಸಿದರು.
ಶ್ರೀರಂಗಪಟ್ಟಣದ ತಾಲ್ಲೂಕು ಅಧ್ಯಕ್ಷರ ಮೇಲೆ ಕ್ರಿಮಿನಲ್ ಆರೋಪ ಕೇಳಿ ಬಂದಿದ್ದು, ನಿಯಮದ ಪ್ರಕಾರ ಅವರಿಗೆ ಸಮ್ಮೇಳನದ ಸಮಿತಿಯಲ್ಲಿ ಅವಕಾಶ ನೀಡುವಂತಿಲ್ಲ. ಆದರೆ ಅವರಿಗೆ ಅವಕಾಶ ನೀಡಲಾಗಿದೆ ಎಂದು ದಾಖಲೆ ಸಮೇತ ಪತ್ರಕರ್ತರು ಪ್ರಶ್ನೆ ಮಾಡಿದಾಗ, ಇಂತಹ ಹಿನ್ನೆಲೆ ಉಳ್ಳವರಿಗೆ ಅವಕಾಶ ನೀಡುವುದಿಲ್ಲ ಕೆಲವು ನಿಯಮಾವಳಿಗೆ ತಿದ್ದುಪಡಿ ತರಲಾಗುವುದು ಎಂದರು.
86ನೇ ಸಮ್ಮೇಳನದ ಸಂದರ್ಭದಲ್ಲಿ ಕರೋನದಿಂದ ತತ್ತರಿಸಿ ಹೋಗಲಾಗಿತ್ತು. ಆಗ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗಿತ್ತು. ಕರೋನ ನಿಂತ ಮೇಲೆ ಹಾವೇರಿಯಲ್ಲಿ ಹೊಸ ಚಿಗುರು ಹಳೆಯ ಬೇರಿನೊಂದಿಗೆ ಅರ್ಥಪೂರ್ಣವಾಗಿ ಸಮ್ಮೇಳನ ಸಮ್ಮೇಳನವನ್ನು ಆಯೋಜಿಸಲಾಯಿತು ಎಂದು ಸ್ಮರಿಸಿದರು.
ಅಂದು ನಡೆದ ಸಮ್ಮೇಳನದ ಬಗ್ಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ವಿಶೇಷವಾಗಿ ಒತ್ತು ನೀಡಿದ್ದರು ಎಂದರು.
ಮಂಡ್ಯದಲ್ಲಿಯೂ ಅತ್ಯಂತ ಯಶಸ್ಸಿನಿಂದ ಸಮ್ಮೇಳನ ನಡೆಯುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಜಿಲ್ಲಾಡಳಿತ ಹಾಗೂ 28 ಸಮಿತಿಯ ಸದಸ್ಯರು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು. ಭುವನಗಿರಿಯ ಭುವನೇಶ್ವರಿ ದೇವಸ್ಥಾನದಲ್ಲಿ ಇದೆ 22ರಂದು ಪೂಜೆ ಸಲ್ಲಿಸಿ ನಂತರ ಅಲ್ಲಿನ ದೀಪದಿಂದಲೇ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ,ಇದಕ್ಕೆ ಸಿದ್ಧತೆಗಳು ನಡೆದಿದೆ ಎಂದು ತಿಳಿಸಿದರು.
ಗುರುವಾರ ಸಾಂಕೇತಿಕವಾಗಿ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುವುದು . ನಂತರ ಮಂಡ್ಯದಿಂದ ಕನ್ನಡ ರಥವನ್ನು ಆರಂಭಿಸಲಾಗುವುದು ಎಂದರು. ಕನ್ನಡ ಭಾಷೆಯ ಬಗ್ಗೆ ಮಾತನಾಡಿ ಪ್ರಕಟಣ ಫಲಕದಲ್ಲಿ ಶೇಕಡ 60 ರಷ್ಟು ಕನ್ನಡ ಭಾಷೆ ಇರಬೇಕೆಂಬ ನಿಯಮವಿದೆ .ಕನ್ನಡದಲ್ಲಿ ಆಡಳಿತ ನಡೆಯಬೇಕು. ಕನ್ನಡ ಭಾಷೆ ನ್ಯಾಯಾಲಯದ ಭಾಷೆಯಾಗಬೇಕು.ಎಲ್ಲರಿಗೂನ್ಯಾಯಾಲಯದ ತರ್ಪು ಅರ್ಥವಾಗುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಹೋರಾಟಗಾರರ ಮೇಲಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರಕ್ಕೆ ಮನದಟ್ಟು ಮಾಡಿಕೊಟ್ಟಿದ್ದು ಇದಕ್ಕೆ ಸರ್ಕಾರ ಒಪ್ಪಿದೆ ಎಂದರು. ದಾವಣಗೆರೆಯಲ್ಲಿ ವಿಶ್ವಕನ್ನಡ ಸಮ್ಮೇಳನ ಮಾಡುವ ವಿಚಾರದ ಬಗ್ಗೆಯೂ ನೂತನ ಸರ್ಕಾರ ಆಶ್ವಾಸನೆ ನೀಡಿದೆ. ಈ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರುವ ಹಿನ್ನೆಲೆಯಲ್ಲಿ ಸಾಹಿತ್ಯ ಪರಿಷತ್ತು ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದರು.
ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಬಳಕೆ ಬಗ್ಗೆ ಬೇರೆ ಯಾವ ಭಾಷೆ ಬಳಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ .ಈ ಬಗ್ಗೆ ಸ್ಪಷ್ಟತೆ ಪಡೆದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಹಾವೇರಿಯಲ್ಲಿ 130 ಎಕರೆ ಜಾಗದಲ್ಲಿ ಸಮ್ಮೇಳನ ನಡೆದಿದೆ. ಕಲಬುರ್ಗಿಯಲ್ಲಿ ಕೂಡ ಸಮ್ಮೇಳನ ಯಶಸ್ವಿಯಾಗಿದೆ. ಹಾಗೆಯೇ ಮಂಡ್ಯದಲ್ಲಿ 120 ಎಕರೆ ಜಾಗದಲ್ಲಿ ಸಮ್ಮೇಳನ ನಡೆಯುತ್ತಿದ್ದು ಸಮ್ಮೇಳನವು ಯಶಸ್ಸು ಕಾಣಲಿದೆ ಎಂದರು. 87ನೇ ಅಖಿಲ ಭಾರತ ಸಮ್ಮೇಳನ ಅತ್ಯುತ್ತಮವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಸಮ್ಮೇಳನವು ಆಡಳಿತ ನಡೆಸುವವರಿಗೆ ಮಾರ್ಗದರ್ಶನ ನೀಡುವ ಚಿಂತನ ಸಭೆಯಾಗಬೇಕು ಎಂದರು.
ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆಯಾಗಿದೆ. ಬೇರೆ ಭಾಷೆಗಳ ಹೇರಿಕೆಯನ್ನು ಒಪ್ಪುವುದಿಲ್ಲ .ಈ ಬಗ್ಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಸಂವಾದದಲ್ಲಿ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸಂಚಾಲಕರಾದ ಡಾ.ಮೀರಾ ಶಿವಲಿಂಗಯ್ಯ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿಪಿ ಪ್ರಕಾಶ್, ಉಪಾಧ್ಯಕ್ಷರಾದ ನವೀನ್, ಗಣಂಗೂರು ನಂಜೇಗೌಡ, ,ಪ್ರಧಾನ ಕಾರ್ಯದರ್ಶಿ ಆನಂದ ಉಪಸ್ಥಿತರಿದ್ದರು.




