✍️ ಗಿರೀಶ್ ತಾಳಿಕಟ್ಟೆ
ನೀವು
ಹಸಿವಿಗಾಗಿ
ಅಕ್ಕಿ ಕೇಳಿ,
ಅವರು
ನಿಮ್ಮ ಮನೆಯ
ಸಾವಿನ ಲೆಕ್ಕ
ಕೇಳುತ್ತಾರೆ;
ಬಿದ್ದ ಹೆಣದ ಹಿಂದೆ
ಸಾಬರ ನೆರಳಿಗಾಗಿ
ತಲಾಷು ಮಾಡುತ್ತಾರೆ!
ನೀವು
ತಲೆಯ ಮೇಲೊಂದು
ಸೂರು ಕೇಳಿ,
ಅವರು
ನಿಮ್ಮ ನೆತ್ತಿ ಮೇಲಿನ
ಟೋಪಿಯ ಬಣ್ಣವ
ಪರಿಶೀಲಿಸುತ್ತಾರೆ;
ಮತಾಂಧತೆಯ
ಮೆಟ್ಟಿಲ
ಮೇಲೆ ನಿಂತು
ನಿಮಗೆ
ನಿರಪೇಕ್ಷತೆಯ
ಬಿಟ್ಟಿ ಪಾಠವ
ಬೋಧಿಸುತ್ತಾರೆ!
ನೀವು
ಬದುಕಿಗಾಗಿ
ಉದ್ಯೋಗ ಕೇಳಿ,
ಅವರು ನಿಮಗೆ
ಪಕೋಡ ಮಾರಲು
ಹೇಳುತ್ತಾರೆ;
ಗ್ಯಾರೇಜು
ಹೊಟೇಲುಗಳಲ್ಲಿ
ಕೆಲಸ
ಮಾಡುವವರ್ಯಾರೆಂದು?
ನಿಮ್ಮನ್ನೇ ಧಮಕಿಸಿ
ಪ್ರಶ್ನಿಸುತ್ತಾರೆ!
ನೀವು
ದುಬಾರಿ
ದರಗಳ ಕುರಿತು
ತಕರಾರು ಹೇಳಿ,
ಅವರು
ನಿಮ್ಮ ಬಳಿ
ದೇಶಭಕ್ತಿಯ
ಸರ್ಟಿಫಿಕೇಟು
ಕೇಳುತ್ತಾರೆ;
ದೊರೆಯ
ದುಂದುವೆಚ್ಚವ
ನಯವಾಗಿ
ಮುಚ್ಚಿಹಾಕುತ್ತಾರೆ!
ನಿಮ್ಮ
ಪಾಡಿಗೆ ನೀವು
ಬದುಕುವ
ನೆಮ್ಮದಿಯ ಕೇಳಿ,
ಅವರು
ಧರ್ಮ ಅಪಾಯದಲ್ಲಿದೆಯೆಂದು
ಬೊಬ್ಬಿರಿಯುತ್ತಾರೆ;
ಅವರ ಮಕ್ಕಳನು
ಬೆಚ್ಚಗಿಟ್ಟು,
ಧರ್ಮ ರಕ್ಷಣೆಗಾಗಿ
ನಿಮ್ಮ ಮಕ್ಕಳ
ನೆತ್ತರಿನ ಬಲಿ
ಕೇಳುತ್ತಾರೆ!




