Sunday, October 20, 2024

ಪ್ರಾಯೋಗಿಕ ಆವೃತ್ತಿ

ಪತ್ರಿಕೋದ್ಯಮ ಜನರಿಗೆ ಸತ್ಯದ ದರ್ಶನ ಮಾಡಿಸಬೇಕು; ಚಲುವರಾಯಸ್ವಾಮಿ

ಪತ್ರಿಕೋದ್ಯಮ ಇಂದು ಮಾನವೀಯ ಮೌಲ್ಯಗಳನ್ನ ಉಳಿಸಿ, ಸಾರ್ವಜನಿಕರಿಗೆ ಸತ್ಯದ ಪರಿಚಯ ಮಾಡಿಸುವ ಕೆಲಸವನ್ನ ಮಾಡಬೇಕು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ ಶಂಕರೇಗೌಡ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.

ಯಾವ ಸರ್ಕಾರಗಳು ಏನೇ ತಪ್ಪು ಮಾಡಿದರೂ ಅದರ ಬಗ್ಗೆ ಸಮಾಜಕ್ಕೆ ತಪ್ಪು, ಸರಿ ಪ್ರಸಾರ ಮಾಡುವುದರ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವವರ ಬಗ್ಗೆ ದಿನನಿತ್ಯ ವರದಿ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಪತ್ರಕರ್ತರು ಪತ್ರಿಕಾ ಜೀವನದಲ್ಲಿ ಸಮಾಜದ ವ್ಯವಸ್ಥೆಯನ್ನು ಸರಿಮಾಡಲು ಪ್ರಯತ್ನಿಸಬೇಕು. ಪ್ರಜಾಪ್ರಭುತ್ವದಲ್ಲಿ ಯಾರು ಸಹ ತಪ್ಪು ಮಾಡದೇ ಇರಲಾರರು. ಅವರುಗಳಲ್ಲಿ ಯಾವುದು ಸರಿ ಅಥವಾ ಯಾವುದು ತಪ್ಪು ಎಂಬ ಅಂಶಗಳನ್ನು ಮಾತ್ರ ತೆಗೆದುಕೊಂಡು ಜನರಿಗೆ ಸತ್ಯಸತ್ಯತೆ ತಿಳಿಸಬೇಕಿದೆ ಎಂದು ಹೇಳಿದರು.

ಪ್ರತಿಕೋದ್ಯಮ ಇಂದು ಕಮರ್ಷಿಯಲ್‌ ಆಗುತ್ತಿದೆ. ಯಾರದೊ ಒತ್ತಡದಲ್ಲಿ ಇಂದಿನ ಪತಿಕೋದ್ಯಮದ ನೈಜತೆಗೆ ಕೆಟ್ಟ ಪರಿಣಾಮ ಬೀರಿದೆ. ಜನತೆಗೆ ಹೆಚ್ಚು ಆಘಾತಕಾರಿ ವಿಷಯಗಳನ್ನು ತಿಳಿಸದೇ, ಸತ್ಯಗಳನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂದು ನುಡಿದರು.

ಪತ್ರಕರ್ತರ ನೆರವಿಗೆ ಸರ್ಕಾರ ಬದ್ದ

ಸಾರ್ವಜನಿಕ ಹಿತಾಸಕ್ತಿ ಪತ್ರಿಕೋದ್ಯಮದಲ್ಲಿ ದುಡಿದು ಸಂಕಷ್ಟದಲ್ಲಿರುವ ಪತ್ರಕರ್ತರಿಗೆ 12 ಸಾವಿರ ರೂ.ವರೆಗೂ ಪಿಂಚಣಿ ನೀಡಲಾಗುತ್ತಿದೆ. ಮೊನ್ನೆಯಷ್ಟೆ ಸಿಎಂ ಸಿದ್ದರಾಮಯ್ಯ ಅವರು ಗ್ರಾಮೀಣ ಭಾಗದ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌ ಸೇವೆ ನೀಡಿದ್ದಾರೆ. ಪತ್ರಿಕೆ ಮತ್ತು ಪತ್ರಕರ್ತರು ನೆರವಿಗೆ ಸರ್ಕಾರ ಸದಾ ಬದ್ದವಾಗಿದೆ ಎಂದರು.

ರಾಜ್ಯ ಹಾಗೂ ಜಿಲ್ಲೆಯ ಒಳಿತಿಗೆ ಪತ್ರಕರ್ತರು ಸಲಹೆ ನೀಡಬೇಕು. ನಾವು ನಿಮ್ಮಿಂದ ಬಯಸುವುದಿಷ್ಟೆ. ನಾನೂ ಕೂಡ ವೈಯಕ್ತಿಕವಾಗಿ ನಿಮ್ಮ ನೆರವಿಗೆ ಇರುತ್ತೇನೆ ಎಂದು ಸಚಿವರು ಹೇಳಿದರು.

ಇತ್ತೀಚೆಗಷ್ಟೆ, ಜಿಲ್ಲೆಯ ಪತ್ರಕರ್ತ ಮೋಹನ್ ಅಪಘಾತದಲ್ಲಿ ಸಾವನ್ನಪ್ಪಿರುವುದು ದುರಂತ. ಸರ್ಕಾರ ಹಾಗೂ ವೈಯಕ್ತಿಕವಾಗಿಯೂ ಕುಟುಂಬಕ್ಕೆ ನೆರವು ನೀಡಲಾಗುವುದು ಎಂದು ಹೇಳಿದರು. ಇದಕ್ಕೂ ಮುನ್ನ, ಸಚಿವರು ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ನಗರಸಭೆ ಅಧ್ಯಕ್ಷ ನಾಗೇಶ್, ಮುಡಾ ಅಧ್ಯಕ್ಷ ನಹೀಂ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಹಿರಿಯ ಪತ್ರಕರ್ತರಾದ ಮತ್ತೀಕೆರೆ ಜಯರಾಂ, ಕೆರಗೋಡು ಸೋಮಶೇಖರ್, ಕೆ.ಎನ್.ರವಿ, ಕೆ.ಸಿ.ಮಂಜುನಾಥ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!