ನಿಮ್ಮವನು…
ಕವಿತೆಗಳೇ ಪ್ರೊಫೆಸರ್, ಲೆಕ್ಚರ್ ಮನೆಯ
ರೀಡಿಂಗ್ ರೂಮುಗಳಲ್ಲಿ ಜೋಪಾನವಾಗಿ ಬಚ್ಚಿಟ್ಟುಕೊಳ್ಳಿ
ಅಪ್ಪಿ ತಪ್ಪಿಯು ಗಾರೆ ಕೆಲಸದ ಮೇಸ್ತ್ರಿ, ಹಮಾಲಿ
ಕೂಲಿಯ ಗುಡಿಸಿಲಿನ ಕಡೆ ಕಾಲಿಡಬೇಡಿ
ಕಿತ್ತು ಹೋದ ಗೋಡೆ, ಹರಿದ ಚಾವಣಿ
ನಿಮ್ಮ ಕಾವ್ಯವನ್ನು ಕುಲಗೆಡಿಸಿಬಿಟ್ಟವು
ರೀಡಿಂಗ್ ರೂಮಿನ ಬೋರ್ ಹೊಡೆಸುವ
ಕ್ಷಣಗಳಿಗೆ ಒಳಗಾಗಿ ಅಪ್ಪಿ ತಪ್ಪಿಯು ಸ್ಲಮ್
ಕಡೆ ಮುಖ ಮಾಡಬೇಡಿ ಕೊಚ್ಚೆ, ಗಲೀಜು
ಹೇಲು, ಉಚ್ಚೆಗಳು ನಿಮ್ಮ ಕವಿತ್ವವನ್ನು
ಹಾಳು ಮಾಡಿಬಿಟ್ಟವು
ಬೇಜಾರು ಕಳೆಯಲೆಂದು ವಿಲೇಜ್ ಟೂರ್,
ಹೆರಿಟೇಜ್ ಟೂರ್ ಗಳ ಆಕರ್ಷಣೆಗೊಳಗಾಗಿ
ಹಳ್ಳಿಗಳ ಕಡೆ ಟೂರು ಹೋಗಿ ಬಿಟ್ಟಿರಿ, ಬತ್ತಿ ಹೋದ
ಕೆರೆ ಕುಂಟೆಗಳು, ಅಸ್ತಿತ್ವ ಕಳೆದುಕೊಳ್ಳುತ್ತಿರುವ
ಹಳ್ಳಿಗಳು ನಿಮ್ಮ ಕವನ ಸಂಕಲನಕ್ಕೆ
ಸಂಚಕಾರ ತಂದು ಬಿಟ್ಟವು
ನಿಮ್ಮ ಕಾವ್ಯ ತತ್ವವನ್ನು ಅಮರತ್ವದ ಕಡೆ
ಮುನ್ನಡೆಸಲು ಸದಾ ಕಾಲ ಜನರೊಂದಿಗಿರಿ ಎಂಬ ಕೆಲಸಕ್ಕೆ ಬಾರದ ಜನರ ಮಾತು ಕೇಳಿಕೊಂಡು ದಾರಿತಪ್ಪಿ ಬಿಟ್ಟಿರಿ, ಸರಿಯಾದ ಟೈಮಿನಲ್ಲಿ ಅಧಿಕಾರಸ್ಥರ ಹಿಂದೆ ಮುಂದೆ ಮಾರ್ಚ್ ಫಸ್ಟ್ ನಲ್ಲಿ
ತೊಡಗಿಕೊಂಡಿರಿ
ನಿಮಗೆ ಬೇಸರವದಾಗ ಹಾಗೇ ಸುಮ್ಮನೆ
ಕಾಲಮಂದಿರ, ಬಯಲುಮಂದಿರದ
ಕವಿಗೋಷ್ಠಿಯಲ್ಲಿ ಹೂವಿನ ಬಗ್ಗೆ, ಹೂವಿನ
ದಾರದ ಬಗ್ಗೆ, ನಾರಿನ ಬಗ್ಗೆ, ಬೇರಿನ ಬಗ್ಗೆ
ಎರಡೇರಡು ಕವಿತೆಗಳ ವಾಚಿಸುತ್ತಿರಿ,
ಅಪ್ಪಿತಪ್ಪಿಯು ಬದುಕಿನ ಬಗ್ಗೆ, ಬವಣೆಯ
ಬಗ್ಗೆ ಬರೆದು ಬಹುಮಾನ, ಸನ್ಮಾನಗಳಿಂದ
ಕವಿಗೆ ವಂಚನೆ ಮಾಡಿಬಿಟ್ಟಿರಿ
ಐಷರಾಮಿ ಬಂಗಲೆಯಲ್ಲಿ ನಿಮಗಾಗಿ
ಕಾಯ್ದಿರಿಸಿದ ಟೇಬಲ್ಲು, ಕುರ್ಚಿಯ ಮೇಲೆ
ನಿಮಗನ್ನಿಸಿದ ಕವಿತೆಯ ಬರೆದು ಬರೆದು ಬೀಸಾಕಿ
ಆದರೆ ಪ್ರಿಂಟಿಂಗ್ ಕಳಿಸುವ ಮೊದಲು
ಸ್ಥಾನ ಮಾನಗಳಿಗೆ ಧಕ್ಕೆ ತರುವ ಪದ, ಶಬ್ದ
ವಾಕ್ಯಗಳ ಹುಷಾರ್ ಆಗಿ ಫ್ರೂಪ್ ರೀಡಿಂಗ್
ಮಾಡಿ ತೆಗೆದುಬಿಡಿ
ಕವಿತೆಗಳೇ ಯಾವುದೇ ಕಾರಣಕ್ಕೂ ಸಿಕ್ಕಿರುವ
ಸುಂದರ ಬದುಕಿನಿಂದ ರಸಭಂಗವಾಗದಂತೆ
ಜೋಪಾನವಾಗಿ ಬಚ್ಚಿಟ್ಟುಕೊಳ್ಳಿ !!