ಕಲ್ಲು ಗಣಿಗಾರಿಕೆಯಿಂದ ನಾಗಮಂಗಲ ತಾಲ್ಲೂಕಿನಲ್ಲಿ ಕಳೆದ ತಿಂಗಳಲ್ಲಿ ಎರಡು ಕೊಲೆಗಳಾಗಿದ್ದರೂ ಪೋಲಿಸ್ ಅಧಿಕಾರಿಗಳು ಅವರ ವಿರುದ್ಧ ಕ್ರಮಕೈಗೊಂಡಿಲ್ಲ.ಅಕ್ರಮ ಗಣಿಗಾರಿಕೆ ನಡೆಸುತ್ತಿರುವರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಶಾಸಕ ಸುರೇಶ್ ಗೌಡ ಆರೋಪಿಸಿದರು.
ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಚಿಕ್ಕ ಹೊಸಗಾವಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗಮಂಗಲ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿದ್ದು,ಗಣಿಗಾರಿಕೆ ಸಂಬಂಧ ಕೊಲೆಗಳು ಹೆಚ್ಚಾಗುತ್ತಿದೆ.ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ.ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸಿ.ಟಿ.ರವಿ ಅವರ ಪಕ್ಷದ ಕಡೆ ಗಮನಹರಿಸಲಿ
ಜೆಡಿಎಸ್ ಪಕ್ಷಕ್ಕೆ ಬಹುಮತ ಬರುವುದಿಲ್ಲ ಎಂಬ ಸಿ.ಟಿ. ರವಿ ಮಾತಿಗೆ, ಅವರ ಪಕ್ಷದ ಶಾಸಕರು ಎಷ್ಟು ಜನ ಬಿಜೆಪಿ ಪಕ್ಷದಲ್ಲಿ ಉಳಿದುಕೊಳ್ಳುತ್ತಾರೆ. ಅದರ ಬಗ್ಗೆ ಸಿ.ಟಿ.ರವಿ ಗಮನಹರಿಸಲಿ.ಅವರ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತದೆ ಎಂದು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ದೇವೇಗೌಡರು ಕಟ್ಟಿರುವ ಪ್ರಾದೇಶಿಕ ಪಕ್ಷವನ್ನು ಕರ್ನಾಟಕದ ಜನತೆ ಹಾಗೂ ಮತದಾರರು ಮೆಚ್ಚಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಸಮೀಕ್ಷೆಗಳು ಹೇಳಿದ್ದಾವೆಯೇ ಹೊರತು ನಾವುಗಳಲ್ಲ.ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮದ ಮಹಿಳೆಯರು ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯ ಬಿ.ಎಸ್. ಗೌಡ, ಆಶಾ ರಾಣಿ, ಎಪಿಎಂಸಿ ಮಾಜಿ ನಿರ್ದೇಶಕ ಈಶ್ವರ್, ಸೊಸೈಟಿ ನಿರ್ದೇಶಕ ಸುಮನ್, ಅಶೋಕ್, ಅಪ್ಪಾಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.