Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಳೆದ ಮುಂಗಾರು ವೈಫಲ್ಯ: ₹1791 ಕೋಟಿ ಬೆಳೆ ವಿಮೆ ಪರಿಹಾರ

ಕಳೆದ ಸಾಲಿನಲ್ಲಿ ಬರದಿಂದಾಗಿ ಉಂಟಾದ ಬೆಳೆ ಹಾನಿಗೆ ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ 1791 ಕೋಟಿ ಬೆಳೆ ವಿಮೆ ಲೆಕ್ಕಾಚಾರ ಮಾಡಿದ್ದು, ಬಹುತೇಕ ಇತ್ಯರ್ಥ ಪಡಿಸಲಾಗಿದೆ .ಇದೇ ರೀತಿ ಹಿಂಗಾರು ಬೆಳೆ ವಿಮೆ ಪರಿಹಾರ ಹಣ ತಲುಪಿಸಲು ವಿಮಾ ಕಂಪನಿಗಳೊಂದಿಗೆ ಸಮನ್ವಯ ಮಾಡಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಕೃಷಿ , ಜಲಾನಯನ ಇಲಾಖೆಗಳು, ಕರ್ನಾಟಕ ರಾಜ್ಯ ಬೀಜ ನಿಗಮ, ಕೃಷಿಕ ಸಮಾಜದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಸಾಲಿನ ವಿಮೆ ಇತ್ಯರ್ಥದ ಜೊತೆಗೆ ಈ ಮುಂಗಾರಿಗೂ ಬೆಳೆ ವಿಮೆ ನೊಂದಣಿ ಹಾಗೂ ರೈತ ಜಾಗೃತಿಗೆ ಆದ್ಯತೆ ನೀಡಿ ಎಂದು ನಿರ್ದೇಶನ‌ ನೀಡಿದರು.

2023-23ರ ಮುಂಗಾರಿನಲ್ಲಿ 19.14 ಲಕ್ಷ ರೈತರು 15.10 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ವಿಮೆ ನೊಂದಾಯಿಸಿದ್ದರು. ನಿಯಮಾನುಸಾರ ಪರಿಶೀಲಿಸಿ ಅಂತಿಮವಾಗಿ ಬಾಕಿ ಇರುವ 130 ಕೋಟಿ ರೂ ಗಳನ್ನು ಶೀಘ್ರ ವಿತರಣೆ ಮಾಡಿ ಎಂದರು.

2023-24 ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ 5.88 ಲಕ್ಷ ರೈತರು 5.43 ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ನೊಂದಾಯಿಸಿದ್ದರು. ಈವರಗೆ ಪ್ರಿವೆಂಟೆಡ್ ಸೋಯಿಂಗ್, ಸ್ಥಳೀಯ ಪ್ರಕೃತಿ ವಿಕೋಪ ಮತ್ತು ಮಿಡ್ ಸೀಜನ್ ಅಡ್ವರ್ಸಿಟಿ ಅಡಿ 16,053 ರೈತರಿಗೆ 7.93 ರೂ ಕೋಟಿ ಪರಿಹಾರ ಇತ್ಯರ್ಥ ಪಡಿಸಲಾಗಿದೆ. ಉಳಿದ ರೈತರಿಗೆ ವಿಮೆ ಹಣ ತಲುಪಿಸಿ ಎಂದು ನಿರ್ದೇಶಿಸಿದರು.

ಪೂರ್ವ ಮುಂಗಾರು ಉತ್ತಮ

ರಾಜ್ಯಾದ್ಯಂತ ಪೂರ್ವ ಮುಂಗಾರು ಉತ್ತಮವಾಗಿದ್ದು, ಮುಂಗಾರು ಕೂಡ ಆರಂಭವಾಗಿದೆ. ಬಿತ್ತನೆ ಬೀಜ, ರಸಗೊಬ್ಬರ ಬೇಡಿಕೆ ಆಧಾರದಲ್ಲಿ ಪೂರೈಕೆಯಾಗಿದ್ದು ಎಲ್ಲೂ ಕೊರತೆಯಾಗದಂತೆ ಎಚ್ಚರ ವಹಿಸಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.

ಕೃಷಿ ಇಲಾಖೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರಗತಿಯಲ್ಲಿರುವ ಹಾಗೂ ಪ್ರಾರಂಭವಾಗ ಬೇಕಿರುವ ವಿವಿಧ ಕಟ್ಟಡ ಕಾಮಗಾರಿಗಳನ್ನು ಅತ್ಯಂತ ತ್ವರಿತವಾಗಿ ಮುಕ್ತಾಯ ಗೊಳಿಸುವಂತೆ ಸೂಚನೆ ನೀಡಿದರು.

ಕೃಷಿ ಇಲಾಖೆ ಆಯುಕ್ತ ಎ.ವೈ ಪಾಟೀಲ್ ಮಾತನಾಡಿ, ಆರ್ಥಿಕ ಸಾಂಖ್ಯಿಕ ನಿರ್ದೇಶನಾಲಯ ಬೆಳೆ ಕಟಾವು ಪ್ರಯೋಗಗಳ ಇಳುವರಿ ನೀಡಿರುವ ಹಿಂಗಾರು ಹಂಗಾಮಿನ 4,368 ವಿಮಾ ಘಟಕಗಳಿಗೆ 1,03,044 ರೈತರ 152.71 ಕೋಟಿ ಬೆಳೆ ವಿಮೆ ಪರಿಹಾರ ಮೊತ್ತ ಲೆಕ್ಕಾಚಾರ ಮಾಡಿದ್ದು, ವಿಮಾ ಸಂಸ್ಥೆಗಳಿಂದ ಇತ್ಯರ್ಥ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು

ರೈತ ಸಂಪರ್ಕ ಕೇಂದ್ರ, ಗೊದಾಮು, ಮಿಲೆಟ್ ಸರಪಳಿ ಪಾರ್ಕ್ ಮತ್ತಿತರ ಕಟ್ಟಡಗಳನ್ನು ಆದಷ್ಟು ಬೇಗ ಮುಕ್ತಾಯಗೊಳಿಸಬೇಕು ಎಂದು ಅನುಷ್ಠಾನ ಏಜೆನ್ಸಿಗಳಿಗೆ ಸೂಚಿಸಿದರು. ಇನ್ನೂ ಪ್ರಾರಂಭವಾಗದೇ ಇರುವ ಕಾಮಗಾರಿಗಳಿಗೆ ಬೇಗ ಚಾಲನೆ ನೀಡಬೇಕು. ಜಾಗದ ಸಮಸ್ಯೆ ಇರುವ ಕಡೆ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರನ್ನು ಸಂಪರ್ಕಿಸಿ ಸ್ಥಳ ಪಡೆದು ಕೆಲಸ ಪ್ರಾರಂಭಿಸಿ ಎಂದು ತಿಳಿಸಿದರು.

ಜಲಾನಯನ ಇಲಾಖೆ ಆಯುಕ್ತ ಗಿರೀಶ್ ,ಕೃಷಿ ‌ಇಲಾಖೆ ನಿರ್ದೇಶಕ ಡಾ ಪುತ್ರ , ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!