ಇಸ್ರೇಲ್ ಮೇಲೆ ಕಳೆದ ಶನಿವಾರ ಹಮಸ್ ದಾಳಿಯನ್ನು ಪ್ರಾರಂಭಿಸಿದಾಗಿನಿಂದ ಗಾಝಾ ಮೇಲೆ ನಿರಂತರವಾಗಿ ಇಸ್ರೇಲ್ ಬಾಂಬ್ ಸುರಿಯುತ್ತಿರುವುದರಿಂದ ವಿಶ್ವಸಂಸ್ಥೆಯ 11 ಸಿಬ್ಬಂದಿ ಬಲಿಯಾಗಿರುವುದಾಗಿ ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಕನಿಷ್ಠ 11 ಸಿಬ್ಬಂದಿ ಮತ್ತು ವಿಶ್ವಸಂಸ್ಥೆ ನಡೆಸುತ್ತಿದ್ದ ಶಾಲೆಗಳ ಮೇಲೂ ಇಸ್ರೇಲ್ ಬಾಂಬ್ ಸುರಿದ ಪರಿಣಾಮ 30 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ’ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
‘ಹಮಸ್ ದಾಳಿಯ ಬಳಿಕ ಇಸ್ರೇಲ್ ಗಾಝಾದ ಮೇಲೆ ನಿರಂತರವಾಗಿ ಬಾಂಬ್ ಸುರಿಸುತ್ತಿದೆ. ಕಳೆದ ಶನಿವಾರದಿಂದ ಯುಎನ್‌ಡಬ್ಲ್ಯೂಆರ್‌ಎಯ 11 ಮಂದಿ ಮೃತಪಟ್ಟಿದ್ದಾರೆ. ಅವರೆಲ್ಲರೂ ಪ್ಯಾಲೆಸ್ತೀನಿನ ನಿರಾಶ್ರಿತರಿಗಾಗಿ ಸೇವೆ ಸಲ್ಲಿಸುತ್ತಿದ್ದರು. ವಿಶ್ವಸಂಸ್ಥೆಯ ಶಾಲೆಯಲ್ಲಿ ಕಲಿಯುತ್ತಿದ್ದ 30 ವಿದ್ಯಾರ್ಥಿಗಳು ಮೃತಪಟ್ಟರೆ, ಎಂಟು ಮಂದಿ ಗಾಯಗೊಂಡಿದ್ದಾರೆ” ಎಂದು ಯುಎನ್ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದರು.
ಮೃತಪಟ್ಟ 11 ಮಂದಿ ವಿಶ್ವಸಂಸ್ಥೆಯ ಸಿಬ್ಬಂದಿಗಳ ಪೈಕಿ ಐವರು ಶಿಕ್ಷಕರು, ಸ್ತ್ರೀರೋಗ ತಜ್ಞರು, ಎಂಜಿನಿಯರ್, ಸಲಹೆಗಾರರು ಮತ್ತು ಮೂವರು ಸಹಾಯಕ ಸಿಬ್ಬಂದಿ ಸೇರಿದ್ದಾರೆ ಎಂದು ಯುಎನ್‌ಆರ್‌ಡಬ್ಲ್ಯುಎಯ ಉಪ ನಿರ್ದೇಶಕಿ ಜೆನ್ನಿಫರ್ ಆಸ್ಟಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಜನರ ಸೇವೆ ಮಾಡುತ್ತಿದ್ದ ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ನಮ್ಮನ್ನು ತುಂಬಾ ದುಃಖಕ್ಕೀಡು ಮಾಡಿದೆ. ಸಿಬ್ಬಂದಿಗಳ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ. ಇಸ್ರೇಲ್ ಜನವಸತಿ ಇರುವ ಸ್ಥಳಗಳಲ್ಲಿ ಬಾಂಬ್ ಹಾಕುವುದನ್ನು ನಿಲ್ಲಿಸಬೇಕು. ವಿಶ್ವಸಂಸ್ಥೆ ಈ ಬಗ್ಗೆ ತುರ್ತು ಗಮನ ನೀಡಬೇಕು” ಎಂದು ತಿಳಿಸಿದ್ದಾರೆ.
ಹಮಸ್ ಅನ್ನು ಗುರಿಯಾಗಿರಿಸಿಕೊಂಡು ಇಸ್ರೇಲ್ ನಿರಂತರವಾಗಿ ವೈಮಾನಿಕ ದಾಳಿ ನಡೆಸುತ್ತಿದೆ. ಈವರೆಗೆ ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನ್ ನಾಗರಿಕರು ಬಲಿಯಾಗಿದ್ದು, 2500 ಸಾವಿರಕ್ಕೂ ಮಂದಿ ಗಾಯಾಳುಗಳಾಗಿದ್ದಾರೆ. ಸುಮಾರು 2,50,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದು, ನಿರಾಶ್ರಿತರೆಲ್ಲರೂ ವಿಶ್ವಸಂಸ್ಥೆಯ ಏಜೆನ್ಸಿ ನಡೆಸುತ್ತಿರುವ ಶಾಲೆಗಳಲ್ಲಿ ಕಿಕ್ಕಿರಿದಿದ್ದಾರೆ.
ಕೃಪೆ: ಈದಿನ.ಕಾಂ