Wednesday, September 18, 2024

ಪ್ರಾಯೋಗಿಕ ಆವೃತ್ತಿ

ಕೊಡಗು : ಸ್ವಂತ ಸೂರಿಗಾಗಿ 130 ದಿನ ತಲುಪಿದ ಮಾಯಮುಡಿ ಆದಿವಾಸಿಗಳ ಧರಣಿ

ಕೊಡಗು ಜಿಲ್ಲಾದ್ಯಂತ ಭೂಮಾಲಿಕರ ಲೈನ್‌ಮನೆಗಳಲ್ಲಿ ಜೀವನ ದೂಡುತ್ತಿದ್ದ ಆದಿವಾಸಿಗಳು ಶಾಶ್ವತ ಸೂರಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಅಹೋರಾತ್ರಿ ಧರಣಿ, ಪ್ರತಿಭಟನೆ ಹೀಗೆ ಹಲವು ಬಗೆಯಲ್ಲಿ ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದರೂ ಇವರ ಕೂಗಿಗೆ ಸ್ಪಂದನೆ ಸಿಗುತ್ತಿಲ್ಲ. ಹಾಗಾದರೆ ಇವರ ಈ ಪರಿಸ್ಥಿತಿಗೆ ಕಾರಣವೇನು? ಯಾಕೆ ಇವರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ? ಎಂಬ ನಾನಾ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ.

ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳು ಕಾರ್ಮಿಕ ಸಂಘದ ಮೂಲಕ ನಡೆಸುತ್ತಿರುವ ಅಹೋರಾತ್ರಿ ಧರಣಿ ನೂರು ದಿನ ತಲುಪಿದೆ. ಮಾಯಮುಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನ ರಹಿತ ಆದಿವಾಸಿಗಳು ನಡೆಸುತ್ತಿರುವ ಹೋರಾಟ 130 ದಿನಗಳನ್ನು ಪೂರೈಸಿದೆ. ಹೈಸಡ್ಲೂರು ಗ್ರಾಮದ ಜನರು ಭೂ ಹಕ್ಕಿಗಾಗಿ ಭೂಮಾಲೀಕರ ವಿರುದ್ಧ ಸುಮಾರು ಐದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ.  

ನಿರಂತರ ಹೋರಾಟಕ್ಕೂ ಸ್ಪಂದಿಸದ ಸರ್ಕಾರ

ಹೈಸಡ್ಲೂರು ಆದಿವಾಸಿಗಳ ಹೋರಾಟಕ್ಕೆ ಬೆಂಬಲ ನೀಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ವಿಭಾಗೀಯ ಸಂಚಾಲಕ ಕೃಷ್ಣಪ್ಪ ಜೊತೆ ಮಾತನಾಡಿ, “ಕೇವಲ ನೂರು ದಿನ ಅಲ್ಲ, ಹೈಸಡ್ಲೂರು ಗ್ರಾಮದ ಆದಿವಾಸಿಗಳ ಹಕ್ಕಿಗಾಗಿ ನಾವು ಐದು ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ. ಇವತ್ತಿಗೂ ಆ ಗ್ರಾಮದ ಆದಿವಾಸಿ ಕುಟುಂಬಗಳಿಗೆ ನ್ಯಾಯ ಸಿಗಲಿಲ್ಲ. ಅಧಿಕಾರಿಗಳ, ಭೂಮಾಲೀಕರ ತುಳಿತಕ್ಕೆ ಆದಿವಾಸಿಗಳು ಬಲಿಯಾಗುತ್ತಲೇ ಇದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಶಾಶ್ವತ ನೆಲೆಗಾಗಿ ಈ ಜನರು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ದುಡಿದರೆ ಮಾತ್ರ ಅನ್ನ ಎನ್ನುವ ಸ್ಥಿತಿ ಇವರದ್ದು. ಹಾಗಿದ್ದರೂ ಇವರು ಹೋರಾಟವನ್ನು ಬಿಡುತ್ತಿಲ್ಲ. ಕೆಲಸ ಮಾಡಿಕೊಂಡೆ ಹೋರಾಟದಲ್ಲಿ ಭಾಗಿಯಾಗುತ್ತಿದ್ದಾರೆ. ಅಧಿಕಾರಿಗಳು ಇವರ ಕಷ್ಟವನ್ನಾದರೂ ನೋಡಿ ಪರಿಹಾರ ನೀಡಬೇಕಾಗಿತ್ತು” ಎಂದು ಹೇಳಿದರು.

“ಆದಿವಾಸಿಗಳ ಸಮಸ್ಯೆ ಒಂದಲ್ಲ ಎರಡಲ್ಲ. ಅವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಇಲ್ಲಿನ ಹೆಣ್ಣು ಮಕ್ಕಳ ಸ್ಥಿತಿ ನಿಜಕ್ಕೂ ಶೋಚನೀಯ. ಒಂದು ಶೌಚಾಲಯದ ವ್ಯವಸ್ಥೆಯೂ ಇವರಿಗಿಲ್ಲ. ಕೊಡಗು ಜಿಲ್ಲೆಯ ಪರಿಸ್ಥಿತಿ ಪರಿಶಿಷ್ಟ ಪಂಗಡದವರ ಸ್ಥಿತಿ ವಿಭಿನ್ನವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದಿವಾಸಿ ಮುಖಂಡ, ಹೈಸಡ್ಲೂರು ಗ್ರಾಮದ ನಿವಾಸಿ ಗಣೇಶ್‌ ಮಾತನಾಡಿ, ” ಹೈಸಡ್ಲೂರಿನಲ್ಲಿ ಸುಮಾರು 74 ಕುಟುಂಬಗಳು ವಾಸವಾಗಿದ್ದೇವೆ. ಈ ಜಾಗವೂ ಮುಖ್ಯ ಕಾರ್ಯನಿರ್ವಾಧಿಕಾರಿ ಅವರ ಹೆಸರಿನಲ್ಲಿದೆ. ನಮಗೆ ಇಲ್ಲಿ ವಿದ್ಯುತ್‌ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರು ಹೀಗೆ ಯಾವು ಮೂಲಭೂತ ಸೌಕರ್ಯವೂ ಇಲ್ಲ. ಮಕ್ಕಳು ಶಾಲೆಗೆ ಹೋಗಬೇಕಾದರೆ ಆರು ಕೀ.ಮೀ. ನಡೆಯಬೇಕು. ಕುಡಿಯಲು ನೀರು ತರಲು ತುಂಬಾ ದೂರ ಕ್ರಮಿಸಬೇಕಾಗಿದೆ” ಎಂದು ಅಳಲು ತೋಡಿಕೊಂಡರು.

“ಇಲ್ಲಿ ವಾಸವಾಗಿರುವ ಯಾರಿಗೂ ಮತದಾನದ ಗುರುತಿನ ಚೀಟಿ ಇಲ್ಲ. ಲೈನ್‌ಮನೆಯಿಂದ ಇಲ್ಲಿಗೆ ಬರುವಾಗ ಫಾರಂ ನಂಬರ್‌ 8 ಅನ್ನು ತುಂಬಿ ವಿರಾಜಪೇಟೆ ತಾಲೂಕು ಆಫೀಸಿಗೆ ನೀಡಿದ್ದೆವು. ಇಂದಿಗೂ ಕೂಡ ಮತದಾನ ಗುರುತಿನ ಚೀಟಿ ವಿತರಿಸಿಲ್ಲ” ಎಂದು ಹೇಳಿದರು.

ಜೊತೆ  ಮಾತನಾಡಿದ ಆದಿವಾಸಿ ಮಹಿಳೆ ಬ್ಯುಲಾ, ”ನಾವು ಬಂದು ಹಲವು ವರ್ಷಗಳಿಂದ ಈ ಜಾಗದಲ್ಲಿ ನೆಲೆಸಿದ್ದೇವೆ. ಆದರೆ ನಮಗೆ ಶೌಚಾಲಯ, ಕುಡಿಯುವ ನೀರು ಹೀಗೆ ಯಾವ ಮೂಲಭೂತ ಸೌಲಭ್ಯಗಳು ಇಲ್ಲ. ನಮಗೆ ಜಾಗ ಕೊಡಿಸುವಲ್ಲಿಯೂ ಮೀನಾಮೇಷ ಎಣಿಸುತ್ತಿದ್ದಾರೆ. ನಮಗೆ ತುಂಬಾ ಕಷ್ಟವಾಗುತ್ತಿದೆ” ಎಂದರು.

ಜಾಗ ಸಿಗಬೇಕಾದರೆ ಸಮಯಾವಕಾಶ ಹಿಡಿಯುತ್ತದೆ ಎಂದು ಇಓ

ಕಾರ್ಯನಿರ್ವಾಧಿಕಾರಿ(ಇಓ) ಅಪ್ಪಣ್ಣ ಮಾತನಾಡಿ, ”ಆದಿವಾಸಿಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕೆಂಬುವುದು ನಮಗೂ ಗೊತ್ತಿದೆ. ಆದರೆ, ಈಗಲೇ ಎಲ್ಲ ಆಗಬೇಕೆಂದರೆ ಸಾಧ್ಯವಿಲ್ಲ. ಇದಕ್ಕೆ ಒಂದು ವಿಧಾನ ಎನ್ನುವುದು ಇದೆ. ಮೊದಲಿಗೆ ಸರ್ಕಾರಿ ಜಾಗವನ್ನು ಗುರುತಿಸಿ ಅದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಬೇಕು. ಸರ್ಕಾರದಿಂದ ಅನುಮೋದನೆ ದೊರೆತು ನಿವೇಶನಕ್ಕಾಗಿ ಕಾಯ್ದಿರಿಸಿ ನಂತರ ನಿವೇಶನ ರಹಿತರಿಗೆ ಹಂಚಬೇಕು” ಎಂದರು.

ಹಾಗಾದರೆ ಆದಿವಾಸಿಗಳಿಗೆ ಜಾಗ ಸಿಗದಿರಲು ಇರುವ ತೊಡಕುಗಳೇನು? 

ಸರ್ಕಾರಿ ಜಾಗವನ್ನು(ಪೈಸಾರೆ ಜಾಗ) ಅಳತೆ ಮಾಡಿ ನಮ್ಮ ಹೆಸರಿಗೆ ಕೊಡಿ ಎಂದು ಪ್ರತಿಭಟನಾಕಾರರು ಹೇಳುತ್ತಾರೆ. ಆದರೆ, ಹಾಗೆ ಸರ್ಕಾರಿ ಜಾಗವನ್ನು ನೀಡುವ ಯಾವ ನಿಯಮವೂ ಇಲ್ಲ. ಮೊದಲಿಗೆ ಯಾರು ವಸತಿ ರಹಿತರಿರುತ್ತಾರೋ ಅವರು ವಸತಿ ರಹಿತರ ಪಟ್ಟಿಗೆ ಸೇರ್ಪಡೆಗೊಳ್ಳಬೇಕಾಗಿದೆ. ಪ್ರತಿಭಟನೆ ಮಾಡುತ್ತಿರುವ ಹೆಚ್ಚಿನವರು ಈ ಪಟ್ಟಿಯಲ್ಲಿಯೇ ಇಲ್ಲ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಯಾವ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತಾರೋ ಆ ಪಂಚಾಯತ್ ನ ವಸತಿ ರಹಿತರ ಪಟ್ಟಿಯಲ್ಲಿ ಹೆಸರು ಇರಬೇಕು. ಪಂಚಾಯತ್ ಗಳಲ್ಲಿ ವಸತಿರಹಿತರ ಪಟ್ಟಿ ಮತ್ತು ನಿವೇಶನ ರಹಿತರ ಪಟ್ಟಿ(ಮನೆ ಮತ್ತು ಜಾಗವಿಲ್ಲದಿರುವುದು) ಎಂದಿರುತ್ತದೆ. ಇವುಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಒಂದು ವಸತಿ ರಹಿತ ಎಂದು ಇದ್ದರೆ ವಸತಿ ನೀಡಲಾಗುತ್ತದೆ, ಜಾಗ ರಹಿತ ಎಂದಾದರೆ ಜಾಗ ನೀಡಲಾಗುತ್ತದೆ. ವಸತಿ ರಹಿತರಿಗೆ ಗಿರಿಜನ ಇಲಾಖೆಯಿಂದ 3 ಲಕ್ಷದವರೆಗೂ ನೀಡಲಾಗುತ್ತದೆ. ಯಾರರಲ್ಲಿ ದಾಖಲೆಗಳಿರುವುದಿಲ್ಲವೋ ಅವರು ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.

ವಸತಿ ರಹಿತರ ಪಟ್ಟಿ ತಯಾರಾದ ಮೇಲೆ ಆಯಾಯ ಪಂಚಾಯತ್ ವ್ಯಾಪ್ತಿಯಲ್ಲಿ ಬಡಾವಣೆಗಳನ್ನು ಮಾಡಲಾಗುತ್ತದೆ. ಯಾರ ಹೆಸರು ವಸತಿ ರಹಿತರ ಪಟ್ಟಿಯಲ್ಲಿ ಇರುತ್ತದೋ ಅವರು ಈ ಸೌಲಭ್ಯವನ್ನು ಪಡೆಯುತ್ತಾರೆ ಎಂದು ತಿಳಿಸಿದರು.

ಕಳೆದ ಎರಡು ವರ್ಷದ ಹಿಂದೆ ದಿಡ್ಡಳ್ಳಿಯಲ್ಲಿ ಜಾಗ ನೀಡುವಂತೆ ಪ್ರತಿಭಟನೆ ಮಾಡಿದ್ದರು. ರಾಜ್ಯಾದ್ಯಂತ ಈ ಪ್ರಕರಣ ಸುದ್ದಿಯಲ್ಲಿತ್ತು. ಗಲಾಟೆಯೂ ನಡೆದಿತ್ತು. ನಂತರ ಯಾವುದೇ ದಾಖಲಾತಿಗಳನ್ನು ತೆಗೆದುಕೊಳ್ಳದೇ ಸರ್ಕಾರ ಅಲ್ಲಿನ ನಿವಾಸಿಗಳಿಗೆ ಜಾಗ ಮಂಜೂರು ಮಾಡಿತ್ತು. ಈಗ ಪ್ರತಿಭಟನೆ ಮಾಡುವವರು ಅದೇ ರೀತಿ ನಮಗೂ ಜಾಗ ಕೊಡುತ್ತಾರೆ ಎಂಬ ಭ್ರಮೆಯಲ್ಲಿ ಇದ್ದಾರೆ. ಆದರೆ ಸರ್ಕಾರ ಅದಕ್ಕೆ ತಯಾರಿಲ್ಲ. ಅದೊಂದು ವಿಶೇಷ ಪ್ರಕರಣವಾಗಿತ್ತು ಎಂದರು.

ಧರಣಿ ನಡೆಸುತ್ತಿರುವ ಹೆಚ್ಚಿನವರು ಲೈನ್ ಮನೆಯವರು. ಅವರಲ್ಲಿ ಹೆಚ್ಚಿನವರಲ್ಲಿ ಆಧಾರ್ ಕಾರ್ಡ್ ಇಲ್ಲ. ಇದ್ದರೂ ಕಾಫಿ ತೋಟದ ಮಾಲೀಕರಿಗೆ ಕೊಟ್ಟಿರುತ್ತಾರೆ. ಆ ಮಾಲೀಕರ ಹತ್ತಿರ ಕೇಳಿದರೆ ಅವರು ಕೊಡುವುದಿಲ್ಲ. ಹೊಸದಾಗಿ ಮಾಡಲು ಹೋದರೆ `ಆಲ್ರೆಡಿ ಎಗ್ಸಿಟ್ಸ್’ ಎಂದು ಬರುತ್ತದೆ. ಮಾಲೀಕರು ಮನಃಪರಿವರ್ತನೆ ಮಾಡಿಕೊಂಡು ಕೊಟ್ಟರೆ ಮಾತ್ರ ಇವರು ಮುಂದೆ ಹೋಗಬಹುದು ಎಂದರು.

ಮಾಲೀಕರು ಯಾವುದೇ ಕಾರಣಕ್ಕೂ ಇವರ ದಾಖಲೆಗಳನ್ನು ಕೊಡುವುದಿಲ್ಲ. ಕಾರಣ ಅವರಿಗೆ ಈ ಆದಿವಾಸಿಗಳ ಕುಟುಂಬದವರು ತಮ್ಮ ಮನೆಯ ಸೇವೆ ಮಾಡಿಕೊಂಡೆ ಇರಬೇಕೆಂಬ ಬಯಕೆಯಿದೆ. ನಾಗರಿಕತೆ ಬೆಳೆಸಿಕೊಂಡ ಸ್ಪಲ್ಪ ಜನರು ಮಾಲೀಕರ ಕಪಿ ಮುಷ್ಠಿಯಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ. ಧರಣಿ ಮಾಡುತ್ತಿರುವವರಲ್ಲಿ ಹೆಚ್ಚಿನವರು ಅವರೆ ಆಗಿದ್ದಾರೆ ಎಂದು ಹೇಳಿದರು.

ಲೈನ್ ಮನೆಗಳಿಂದ ಹೊರಬಂದ ಸುಮಾರು 74 ಆದಿವಾಸಿ ಕುಟುಂಬಗಳು ಹೈಸಡ್ಲೂರು ಎಂಬಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಾಧಿಕಾರಿ ಹೆಸರಿನಲ್ಲಿದ್ದ ಜಾಗದಲ್ಲಿ(ಸುಮಾರು ಒಂದೂವರೆ ಎಕರೆ ಜಾಗ) ಕುಳಿತುಕೊಂಡಿದ್ದರು. ಮೊದಲು ಇಲ್ಲಿನ ನಿವಾಸಿಗಳಿಗೆ ದಾಖಲೆ ಇರಲಿಲ್ಲ, ತಾಲೂಕು ಪಂಚಾಯತ್ ನವರು ದಾಖಲೆ ಮಾಡಿಸಿಕೊಡಲು ಹಿಂದೇಟು ಹಾಕುತ್ತಿದ್ದರು. ಇತ್ತೀಚೆಗೆ ಕೆಲವರು ದಾಖಲೆ ಮಾಡಿಸಿಕೊಂಡಿದ್ದಾರೆ. ಮುಂದೆ ಇವರ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!