Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕಂದಾಯ ನ್ಯಾಯಾಲಯಗಳಲ್ಲಿ 10,607 ಪ್ರಕರಣಗಳ ಇತ್ಯರ್ಥ: ಚಲುವರಾಯಸ್ವಾಮಿ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ವೇಳೆಗೆ ಮಂಡ್ಯ ಜಿಲ್ಲೆಯ ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 10,607 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಗ್ರಾ.ಪಂ.ಗಳಲ್ಲಿ 27 ಸಾವಿರ ಈ ಸ್ವತ್ತು ಖಾತೆಯನ್ನು ನಿರ್ವಹಣೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 3ನೇ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ರೈತರು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ಸರ್ವೇ ಇಲಾಖೆಗೆ ಪದೇ ಪದೇ ಅಲೆಯುತ್ತಿದ್ದರು. ರೈತರ ಅಲೆದಾಟ ತಪ್ಪಿಸಲು ಕ್ರಮ ವಹಿಸಲಾಗಿದೆ ಎಂದರು.

ಆರ್.ಟಿ.ಸಿ ತಿದ್ದುಪಡಿ, ಪೋಡಿ ನಿರ್ವಹಣೆ, ಖಾತೆ ವರ್ಗಾವಣೆ, ಹದ್ದುಬಸ್ತು ನಿಗದಿ, ಮುಂತಾದ ಕೆಲಸ ಕಾರ್ಯಗಳಿಗಾಗಿ ಅಲೆದಾಟ ನಡೆಸುತ್ತಿದ್ದ ರೈತ ಸಂಕುಲ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 27,000 ಇ ಸ್ವತ್ತು ನೋಂದಣಿ ಮುಗಿಸಿ ಜನ ಸಾಮಾನ್ಯರಿಗೆ ನಾವು ಒಳಿತು ಮಾಡಿದ್ದೇವೆಂದರು.

ಜನ ಸಾಮಾನ್ಯರು ಅನಗತ್ಯವಾಗಿ ಪೊಲೀಸ್ ಠಾಣೆ ಮತ್ತು ಕೋರ್ಟ್ ಗಳಿಗೆ ಎಡತಾಕುವ ಪ್ರವೃತ್ತಿಗೆ ಕಡಿವಾಣ ಹಾಕಿ ಪೊಲೀಸ್ ಠಾಣೆಯಲ್ಲೇ ಸಣ್ಣಪುಟ್ಟ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಸೂಚಿಸಲಾಗಿದೆ ಎಂದರು.

ನಾನು ನಿರ್ವಹಣೆ ಮಾಡುತ್ತಿರುವ ಕೃಷಿ ಖಾತೆಯಲ್ಲಿ ರೈತರಿಗೆ ದೊರೆಯುವ ಪರಿಕರಗಳ ವಿತರಣೆ ಬೀಜ ಗೊಬ್ಬರ ಔಷಧಿ ವಿತರಣೆಗೆ ಯಾವುದೇ ಅಡ್ಡಿ ಮಾಡಿಲ್ಲ, ಕೃಷಿ ಇಲಾಖೆ ವತಿಯಿಂದ ಮಣ್ಣಿನ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ರೈತರನ್ನು ಸಬಲರನ್ನಾಗಿಸಲು ಮುಂದಾಗಿದ್ದೇವೆಂದರು.

ಸ್ಥಳೀಯ ಶಾಸಕ ರವಿಕುಮಾರ್ ಗೌಡ ಅವರು, ಜಿಲ್ಲಾ ಕೇಂದ್ರ ಹಾಗೂ ಕ್ಷೇತ್ರ ವ್ಯಾಪ್ತಿಯ ಹೋಬಳಿ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವ ಇರಾದೆ ಹೊಂದಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜನಸ್ಪಂದನದಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಒಂದು ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದೆಂದು ಉಸ್ತುವಾರಿ ಸಚಿವರು ತಿಳಿಸಿದರು.

ಶಾಸಕ ರವಿಕುಮಾರ್ ಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಫಲವಾಗಿ ಕ್ಷೇತ್ರದಲ್ಲಿ ಮೂರನೇ ಜನಸ್ಪಂದನ ಸಭೆ ಆಯೋಜನೆಗೊಂಡಿದೆ ಎಂದರು.

ಕೆರಗೋಡು ಗ್ರಾಮದಲ್ಲಿ ನೆನೆಗುದಿಗೆ ಬಿದ್ದಿರುವ ಪಂಚಲಿಂಗೇಶ್ವರ ಸಮುದಾಯ ಭವನ, ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಲು ಮುಂದಾಗುತ್ತೇವೆ, ಗ್ರಾಮದ ಕೆರೆ ಅಭಿವೃದ್ದಿಗೆ ಒತ್ತು ನೀಡುವುದು, ಹೋಬಳಿ ಕೇಂದ್ರದಲ್ಲಿ 1 ಎಕರೆ ಜಾಗ ದೊರೆತರೆ ಬಸ್ ನಿಲ್ದಾಣ ಕಾಮಗಾರಿ ಪೂರೈಸಲು ಕ್ರಮ ವಹಿಸುವುದಾಗಿ ತಿಳಿಸಿದರು.

5 ಎಕರೆ ಸರ್ಕಾರಿ ಜಾಗ ಗುರುತಿಸಿ ಈ ಭಾಗದ ಬಡವರಿಗೆ ನಿವೇಶನ ಹಂಚುವ ಹೊಣೆಗಾರಿಕೆ ಹೊರಲು ಮುಂದಾಗುತ್ತೇನೆಂದು ಭರವಸೆ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಜನರು ತಮ್ಮ ಅಹವಾಲು ಸಲ್ಲಿಸಿದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ನಯೀಂ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ.ಸಿಇಓ ಶೇಖ್ ತನ್ವೀರ್ ಆಸೀಫ್, ಎಎಸ್ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ ಹಾಗೂ ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!