Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | 4 ಬಾರಿ ಅಭ್ಯರ್ಥಿ ಮಾಡಿದ್ದಾಗ ಎಷ್ಟು ಹಣ ಕೊಟ್ರಿದ್ರಿ ಅಂತ ಹೇಳಿ?

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಣಕ್ಕೆ ಮಾರಾಟವಾಗಿದೆ ಎಂದು ಆರೋಪಿಸಿರುವ ಶಾಸಕ ಎಂ.ಶ್ರೀನಿವಾಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಮಂಡ್ಯ ನಗರದಲ್ಲಿ ಶುಕ್ರವಾರ ನಡೆದ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ ಅವರೇ, 4 ಬಾರಿ ನಿಮ್ಮನ್ನು ಪಕ್ಷದ ಅಭ್ಯರ್ಥಿ ಮಾಡಿದಾಗ ಯಾರಿಗೆ ಎಷ್ಟೆಷ್ಟು ಹಣ ಕೊಟ್ಟು ಬಿ.ಫಾರಂ ತೆಗೆದುಕೊಂಡು ಹೋಗಿದ್ದೀರಿ ಅಂತ ಜನರೆದರು ಹೇಳಿ ಎಂದು ಪ್ರಶ್ನಿಸಿದರು.

ಶ್ರೀನಿವಾಸ್ ಅವರು ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ. ಅವರ ಆರೋಗ್ಯದ ಪರಿಸ್ಥಿತಿ ನನಗೆ ತಿಳಿದಿತ್ತು. ಹೀಗಾಗಿ ಅವರಿಗೆ ಅಪಮಾನ ಆಗಬಾರದೆಂಬ ಕಾರಣಕ್ಕೆ ಮೊದಲು ಟಿಕೆಟ್ ಘೋಷಣೆ ಮಾಡಲಾಗಿತ್ತು.

ಆದರೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬದಲಾವಣೆಗೆ ಒತ್ತಡ ಹೆಚ್ಚಾದಾಗ ಶ್ರೀನಿವಾಸ್ ಅವರನ್ನು ಹತ್ತು ಬಾರಿ ಕರೆದು ಕೇಳಿದ್ದೇನೆ. ಹೊಸ ಮುಖಕ್ಕೆ ಅವಕಾಶ ಕೊಡುವಂತೆ ಕಾರ್ಯಕರ್ತರಿಂದ ಒತ್ತಡ ಹೆಚ್ಚಾಗಿದ್ದು, ನೀವೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ. ನಿಮ್ಮ ಕೈಗೆ ಬಿ-ಫಾರಂ ಕೊಡುತ್ತೇನೆ ಎಂದಿದ್ದೆ. ಆದರೆ ಅವರು ನನಗೆ ಕೊಡಿ ಅಂದರು.ನಂತರ ತಮ್ಮ ಅಳಿಯನಿಗೆ ಟಿಕೆಟ್ ಕೇಳಿದರು ಎಂದರು.

ಈ ಮಧ್ಯೆ ಯುವನಾಯಕ ವಿಜಯ್ ಆನಂದ್ ಅವರಿಗೂ ವರ್ಷದ ಮೊದಲೇ ನಿನಗೆ ಟಿಕೆಟ್ ಕೊಡುತ್ತೇನೆ. ಕ್ಷೇತ್ರದಲ್ಲಿ ಹೋಗಿ ಜನರ ನಡುವೆ ಕೆಲಸ ಮಾಡು. ಅವರ ಕಷ್ಟ-ಸುಖ ಆಲಿಸಿ, ಪ್ರೀತಿ ಸಂಪಾದಿಸು ಎಂದಿದ್ದೆ. ಆದರೆ, ವಿಜಯ್ ಆನಂದ್ ಈಗಲೇ ನನ್ನ ಹೆಸರು ಹೇಳಬೇಡಿ.ನಾನು ಎಂ.ಶ್ರೀನಿವಾಸ್ ಅವರನ್ನು ಒಲಿಸಿಕೊಂಡು ಅವರ ಬಾಯಿಂದಲೇ ನನ್ನ ಹೆಸರು ಹೇಳಿಸುತ್ತೇನೆ ಎಂದು ಹೇಳಿ ಅಲ್ಲಿಯವರೆಗೂ ನನ್ನ ಹೆಸರು ಘೋಷಣೆ ಮಾಡಿ ಎಂದರು.ಆತನೂ ಜನರ ಮಧ್ಯೆ ಹೋಗಿ ಕೆಲಸ ಮಾಡಲಿಲ್ಲ. ಪಕ್ಷ ಸಂಘಟನೆಯನ್ನೂ ಮಾಡಲಿಲ್ಲ‌.ಇದರಲ್ಲಿ ನನ್ನ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಇದೆಲ್ಲದರ ನಡುವೆ ಚನ್ನಪಟ್ಟಣದಲ್ಲಿ ನನಗೆ ತೊಂದರೆಯಾಗಿದೆ, ಹೀಗಾಗಿ ಮಂಡ್ಯಕ್ಕೆ ಬಂದು ನಿಲ್ಲುತ್ತಾರಂತೆ,ಬ್ಯಾಂಕ್ ಅಕೌಂಟ್ ಮಾಡಿಸಿದ್ದಾರೆಂದೆಲ್ಲ ಕೆಲವರು ಸುದ್ದಿ ಮಾಡಿಸಿದರು. ಆದರೆ, ನಾನು ಇಲ್ಲಿಗೆ ಬಂದು ನಿಲ್ಲುವ ಅನಿವಾರ್ಯ ಪರಿಸ್ಥಿತಿ ಇರಲಿಲ್ಲ‌ ನನ್ನ ತಂದೆ ಗ್ರಾಮ ಪಂಚಾಯಿತಿ ಸದಸ್ಯ, ಸೊಸೈಟಿ ನಿರ್ದೇಶಕ ಸ್ಥಾನದಿಂದ ಪ್ರಧಾನಿ ಹುದ್ದೆಯನ್ನು ಅನುಭವಿಸಿದ್ದಾರೆ. ನಾವು ಎಲ್ಲವನ್ನೂ ನೋಡಿದ್ದೇವೆ.

ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ನಾನು ಯಾರಿಗೂ ಸವಾಲು ಹಾಕಲಿಲ್ಲ‌.ಜನರ ಬದುಕು ಕಟ್ಟಿಕೊಡಲು ರಾಜಕೀಯಕ್ಕೆ ಬಂದಿದ್ದೇನೆಯೇ ಹೊರತು, ಸ್ವಾರ್ಥಕ್ಕೆ ಅಥವಾ ಹಣ ಮಾಡುವ ಹಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಜನರು ಬಿಜೆಪಿ, ಕಾಂಗ್ರೆಸ್ ಕುತಂತ್ರಗಳಿಗೆ ಬಲಿಯಾಗದೆ ಪ್ರೀತಿಗೆ ಬೆಲೆ ಕೊಡುವವರಿದ್ದೀರಿ. ಮಂಡ್ಯ ಕ್ಷೇತ್ರದ ಅಭ್ಯರ್ಥಿ ಬಿ.ಆರ್.ರಾಮಚಂದ್ರ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.

ಗುಲಾಬಿ ಹೂ-ಹಣ ನೀಡಿದ ಬಾಲಕರು
ವೇದಿಕೆಯಿಂದ ನಿರ್ಗಮಿಸುವಾಗ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಸ್ಲಿಂ ಬಾಲಕನೊಬ್ಬ ಗುಲಾಬಿ ಹೂ ನೀಡಿ ಶುಭ ಕೋರಿದನು. ಹಾಗೆಯೇ ಹನುಮನ ವೇಷಧಾರಿ ಬಾಲಕನೊಬ್ಬ ಕುಮಾರಸ್ವಾಮಿಗೆ ತಾನು ಹಣ ಸಂಗ್ರಹಿಸಿದ್ದ ಗೋಲಕ ನೀಡಿದನು. ಇಬ್ಬರೂ ಮಕ್ಕಳನ್ನು ಕುಮಾರಸ್ವಾಮಿ ಸಂತೋಷದಿಂದ ಕೈಕುಲುಕಿ ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!