ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಅಧಿಕೃತವಾಗಿ ಪ್ರಕಟಿಸಿರುವಂತೆ, ಎನ್ಈಪಿ-2020ರ ಭಾಗವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಿದ್ದ ನಾಲ್ಕು ವರ್ಷದ ಪದವಿಯನ್ನು ಹಿಂಪಡೆಯಲು ರಾಜ್ಯ ಸರ್ಕಾರವು ನಿರ್ಧರಿಸಿರುವುದು ಜನ ಹೋರಾಟಕ್ಕೆ ಸಂದ ಜಯವೆಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಬಣ್ಣಿಸಿದೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಂದ ವ್ಯಕ್ತವಾದ ಅಪಾರ ಪ್ರತಿರೋಧದ ಪ್ರತಿಫಲವಾಗಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ರಾಜ್ಯವ್ಯಾಪಿ ಎಐಡಿಎಸ್ಓ ನಡೆಸಿದ ಸಮೀಕ್ಷೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು 4 ವರ್ಷದ ಪದವಿಯನ್ನು ವಿರೋಧಿಸಿದ್ದರು. ಇದು ರಾಜ್ಯದಲ್ಲಿ ನಡೆದ ಐತಿಹಾಸಿಕ ಜನ ಹೋರಾಟಕ್ಕೆ ಸಂದಿರುವ ಐತಿಹಾಸಿಕ ಜಯವಾಗಿದೆ. ವಿದ್ಯಾರ್ಥಿಗಳು ಹಾಗೂ ಜನಸಮೂಹವು ಹೋರಾಟದ ಮೇಲೆ ಹೊಂದಿರುವ ಭರವಸೆಯನ್ನು ಇದು ಬಲಪಡಿಸಿದೆ ಎಂದು ಎಐಡಿಎಸ್ಓ ಮಂಡ್ಯ ಜಿಲ್ಲಾ ಕಾರ್ಯದರ್ಶಿ ಚಂದ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರವು, ಯಾವುದೇ ಸಮಾಲೋಚನೆ ನಡೆಸದೆ, ಅತ್ಯಂತ ಅಪ್ರಜಾತಾಂತ್ರಿಕವಾಗಿ 4 ವರ್ಷದ ಪದವಿಯನ್ನು ಹೇರಿಕೆ ಮಾಡಿತ್ತು. ಎನ್ಈಪಿ-2020ನ್ನು ಸಂಪೂರ್ಣವಾಗಿ ಹಿಂಪಡೆದು, ಕರ್ನಾಟಕದಲ್ಲಿ ಒಂದು ಜನಪರ ಶಿಕ್ಷಣ ನೀತಿಯು ಜಾರಿಯಾಗುವ ವರೆಗೂ ನಮ್ಮ ಹೋರಾಟವು ಮುಂದುವರೆಯುತ್ತದೆ. ಈ ನಿಟ್ಟಿಲ್ಲಿ 4 ವರ್ಷದ ಪದವಿ ಹೇರಿಕೆಯನ್ನು ಹಿಮ್ಮೆಟ್ಟಿಸಿರುವುದು ರಾಜ್ಯದ ವಿದ್ಯಾರ್ಥಿ ಚಳುವಳಿಯ ಐತಿಹಾಸಿಕ ಜಯವಾಗಿದೆ. ಇದಕ್ಕಾಗಿ ಐಕ್ಯ ಹೋರಾಟ ನಡೆಸಿದ ರಾಜ್ಯದ ವಿದ್ಯಾರ್ಥಿ ಸಮೂಹವನ್ನು ಎಐಡಿಎಸ್ಓ ಅಭಿನಂದಿಸುತ್ತದೆ ಎಂದು ಅವರು ತಿಳಿಸಿದರು.




