Thursday, September 19, 2024

ಪ್ರಾಯೋಗಿಕ ಆವೃತ್ತಿ

59 ವಿಧಾನಸಭಾ ಕ್ಷೇತ್ರಗಳ ಪೈಕಿ 40ರಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲ್ಲಿಸುವ ಗುರಿ: ಎಂ.ಜಿ.ಮಹೇಶ್

2023ರ ಚುನಾವಣೆಯನ್ನು ಬಿಜೆಪಿ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಹಳೇ ಮೈಸೂರು ಭಾಗದಲ್ಲಿರುವ 59 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಗುರಿ ಇಟ್ಟುಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ. ಜಿ. ಮಹೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ 57,500 ಬೂತ್ ಗಳನ್ನು ಗುರಿಯಾಗಿಟ್ಟುಕೊಂಡು ಬೂತ್ ವಿಜಯ ಅಭಿಯಾನ ನಡೆಸುತ್ತಿದ್ದೇವೆ. ಮೈಸೂರು, ಮಂಡ್ಯ,ಹಾಸನ, ಚಾಮರಾಜನಗರ ನಾಲ್ಕು ಜಿಲ್ಲೆಗಳಲ್ಲಿ 6,783 ಬೂತ್ ಗಳಲ್ಲಿ ಅಭಿಯಾನ ನಡೆಯುತ್ತಿದ್ದು, ಪ್ರತಿ ಬೂತ್ ಗಳಲ್ಲಿ 25 ಕಡೆ ಬಿಜೆಪಿ ಧ್ವಜಗಳನ್ನು ಹಾರಿಸಿದ್ದೇವೆ.

20 ಮತದಾರರಿಗೆ ಒಬ್ಬ ಪೇಜ್ ಪ್ರಮುಖ್ ಮಾಡಲಾಗಿದೆ.ಮಂಡ್ಯ ಕ್ಷೇತ್ರದಲ್ಲಿ 1801ಬೂತ್ ಗಳ ಪೈಕಿ 936 ಬೂತ್ ಗಳಲ್ಲಿ ಬಿಜೆಪಿ ಪ್ರವೇಶ ಮಾಡಿದೆ.ಈಗಾಗಲೇ ಸುಮಾರು 23,000 ಧ್ವಜಗಳನ್ನು ಮನೆಗಳ ಮೇಲೆ ಹಾರಿಸಿದ್ದೇವೆ. ಮೈಸೂರು ವಿಭಾಗದಲ್ಲಿ 1.54 ಲಕ್ಷ ಹಾರಿಸಿದ್ದೇವೆ ಎಂದು ತಿಳಿಸಿದರು.

ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲುವು ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ.ಈ ಹಿಂದೆ ಯಾವ ಪದ್ಧತಿ ಇತ್ತೋ ಅದನ್ನು ಬದಲಾವಣೆ ಮಾಡಬೇಕೆನ್ನುವ ಉದ್ದೇಶದಿಂದ ನಾಯಕರೆಲ್ಲ ಒಂದಾಗಿ ಸಂಘಟಿತವಾಗಿ ಪ್ರಯತ್ನ ಮಾಡುತ್ತಿದ್ದೇವೆ. ಪ್ರತಿ ಬೂತ್ ಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ವಿಚಾರಗಳನ್ನು ಕೇಳಿಸುವ ವ್ಯವಸ್ಥೆ ಕೂಡ ಮಾಡಿದ್ದೇವೆ. ಬಿಜೆಪಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರಿಗೆ ನೇರವಾಗಿ ಒದಗಿಸುವುದು, ಸರ್ಕಾರದ ಸವಲತ್ತುಗಳು ಪ್ರತಿ ಕುಟುಂಬಕ್ಕೂ ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಬಿಜೆಪಿಯಲ್ಲಿ ಎಷ್ಟೇ ದೊಡ್ಡ ನಾಯಕರಿದ್ದರೂ, ಅವರನ್ನು ಒಂದು ಬೂತಿಗೆ ಸೀಮಿತ ಮಾಡಲಾಗಿದೆ. ಮೋದಿಯವರ ಸರ್ಕಾರ ಸಬ್ ಸಾಥ್,ಸಬಾ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಘೋಷಣೆಯಂತೆ ದೇಶದ ಜನರ ಅಭಿವೃದ್ಧಿಗೆ ಮುಂದಾಗಿದೆ ಎಂದರು.

ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ವೀಕ್ಷಣೆ ಮಾಡಿದ್ದು, ಅಲ್ಲಿರುವ ಲೋಪದೋಷಗಳನ್ನು ಕೆಲವೇ ದಿನಗಳಲ್ಲಿ ಸರಿಪಡಿಸಿ, ರಾಜ್ಯದ ಜನರಿಗೆ ಅತ್ಯುತ್ತಮ ಹೆದ್ದಾರಿಯನ್ನು ನೀಡುವ ಕೆಲಸ ಮಾಡಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಇನ್ನು ಕೆಲವೇ ದಿನಗಳಲ್ಲಿ ಈ ರಸ್ತೆ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಮೈಸೂರು-ಬೆಂಗಳೂರು ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವ ಬದಲು ಕಾವೇರಿ ಹೆಸರಿಡುವಂತೆ ಹೇಳಿದ್ದಾರೆ. ಬಿಜೆಪಿ ಪಕ್ಷ ನಾಲ್ವಡಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯುತ್ತಿದ್ದು, ಅವರ ಕನಸು ನನಸು ಮಾಡುವುದು ಪ್ರಧಾನಿ ಮೋದಿ ಅವರಿಂದ ಮಾತ್ರ ಸಾಧ್ಯ ಎಂದರು.

ಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಬಿಜೆಪಿ ಮುಖಂಡರಾದ ಅಶೋಕ್ ಜಯರಾಂ, ಚಂದಗಾಲು ಶಿವಣ್ಣ, ಮಾಧ್ಯಮ ಸಂಚಾಲಕ ನಾಗಾನಂದ, ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್, ನಗರ ಅಧ್ಯಕ್ಷ ಟಿ.ಎಸ್.ವಿವೇಕ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!