Tuesday, November 24, 2026

ಪ್ರಾಯೋಗಿಕ ಆವೃತ್ತಿ

ಸಾಹಿತ್ಯ ಸಮ್ಮೇಳನ ಮಂಡ್ಯನಗರದಲ್ಲೇ ನಡೆಯಲಿ; ಪ್ರಗತಿಪರ ಸಂಘಟನೆಗಳ ಹಕ್ಕೊತ್ತಾಯ

87ನೇ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯಕ್ಕೆ ಲಭಿಸಿರುವುದು ಸಂಭ್ರಮದ ವಿಷಯ. ಅತಿಥಿಗಳು, ಆತಿಥ್ಯ ವಹಿಸುವವರ ಮರ್ಜಿಯಲ್ಲಿ ಇರಬೇಕಾದ್ದು ಅಗತ್ಯ ಮತ್ತು ಅನಿವಾರ್ಯ. ಆಂದಾಕ್ಷಣ ಅತಿಥೇಯರು ಅಧಿಪತ್ಯ ಸಾಧಿಸಬೇಕೆಂದೆನೂಯಿಲ್ಲ. ವಾಸ್ತವ ಏನಾಗಿದೆಯೆಂದರೆ, ಅತಿಥೇಯರೇ ಸವಾರಿ ಮಾಡುತ್ತಿರುವುದಕ್ಕೆ ಹಲವು ನಿದರ್ಶನಗಳಿವೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಮಂಡ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಸಮ್ಮೇಳನವನ್ನು ಮಂಡ್ಯ ಕೇಂದ್ರ ಸ್ಥಾನದಲ್ಲಿಯೇ ನಡೆಸಬೇಕೆಂಬುದು ಸೇರಿದಂತೆ ಒಟ್ಟು 8 ಹಕ್ಕೊತ್ತಾಯಗಳನ್ನು ಮಂಡ್ಯ ಜಿಲ್ಲಾಡಳಿತದ ಮುಂದಿಟ್ಟಿವೆ.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಮೊನ್ನೆಯಷ್ಟೇ ನಡೆದ ಸಭಾ ನಡಾವಳಿಯ ಹಕ್ಕೊತ್ತಾಯ ಪತ್ರವನ್ನು ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

ಹಕ್ಕೊತ್ತಾಯ ಪತ್ರದಲ್ಲೇನಿದೆ… ?

1. ಸಮ್ಮೇಳನ ಮಂಡ್ಯ ನಗರದಲ್ಲೇ ನಡೆಯಬೇಕು

ಸಮ್ಮೇಳನವನ್ನು ಮಂಡ್ಯ ನಗರದ ಹೊರವಲಯದಲ್ಲಿ ನಡೆಸುವುದು ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಸಭೆಯು ಬಂತು. ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ತಮ್ಮ ಆಸಕ್ತಿ ಧೋರಣೆಗೆ ಸೂಕ್ತವಾದ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಾರೆ. ದಿನಕ್ಕೆ ನಾಲ್ಕಾರು ಸಾರಿ ಇದು ಪುನರಾವರ್ತನೆಯಾಗುತ್ತದೆ. ಹೊರ ವಲಯದಲ್ಲಿ ಆದರೆ ಇದು ಸಾಧ್ಯವಾಗದು. ನಗರದಲ್ಲಿ ಆದರೆ ಇಡೀ ನಗರವೇ ಸಮ್ಮೇಳನಕ್ಕೆ ಅಣಿಗೊಳ್ಳುತ್ತದೆ. ಈ ಎಲ್ಲವನ್ನು ಚರ್ಚಿಸಿ ಮಂಡ್ಯದ ಕ್ರೀಡಾಂಗಣದಲ್ಲಿ ಸಮ್ಮೇಳನವನ್ನು ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು. ಊಟಕ್ಕೆ ಸಂಬಂಧ ಪಟ್ಟಂತೆ 3-4 ಸ್ಥಳಗಳಲ್ಲಿ ಏರ್ಪಡಿಸಿದರೆ ಜನಜಂಗುಳಿಯನ್ನು ನಿಯಂತ್ರಿಸಬಹುದು ಹಾಗೂ ಆಪ್ತವಾಗಿ ಆತಿಥ್ಯ ನೀಡಬಹುದು.

2. ಸಮ್ಮೇಳನದ ಅಧ್ಯಕ್ಷರು ಸಾಹಿತಿಗಳೇ ಆಗಬೇಕು

ಇದು ಚರ್ಚೆಗೆ ಅರ್ಹವಾದ ವಿಷಯವೇ ಅಲ್ಲ, ಇದು ಸಾಹಿತ್ಯ ಸಮ್ಮೇಳನ ಆದ್ದರಿಂದ ಸಾಹಿತಿಯೇ ಸರ್ವಾಧ್ಯಕ್ಷರಾಗಬೇಕೆಂಬುದು ನಿರ್ವಿವಾದ. ಇಂತಿದ್ದರು ಇದು ನಾಡಿನೆಲ್ಲೆಡೆ ಚರ್ಚೆಯಾಗುತ್ತಿದೆ. ಸಮ್ಮೇಳನಾಧ್ಯಕ್ಷರ ಆಯ್ಕೆ ಕೇಂದ್ರ ಸಾಹಿತ್ಯ ಪರಿಷತ್ತಿನ ಅಧಿಕಾರಕ್ಕೆ ಒಳಪಟ್ಟಿದ್ದು. ಮಂಡ್ಯ ಅತಿಥೇಯರಾಗಿ ಸಾಹಿತಿಯೇ ಸಮ್ಮೇಳನಾಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದೆ. ಇದು ಸಾಧ್ಯವಾಗದೆ ಹೋದರೆ ಅತಿಥೇಯರಾದ ನಾವು ಮನ:ಪೂರ್ವಕವಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಸಮ್ಮೇಳನದ ಸ್ವಾಗತ ಸಮಿತಿ ಈ ದಿಶೆಯಲ್ಲಿ ಪರಿಷತ್ತಿಗೆ ಮಂಡ್ಯದ ಈ ಅಭಿಪ್ರಾಯವನ್ನು ತಲುಪಿಸಿ, ಒತ್ತಡ ತರಬೇಕು.

3 ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಆದ್ಯತೆ ಸಿಗಬೇಕು

ಸಮ್ಮೇಳನವು ರಾಷ್ಟ್ರೀಯ ನೆಲೆಯಲ್ಲಿ ಅಷ್ಟೇ ಏಕೆ ಜಾಗತಿಕ ನೆಲೆಯಲ್ಲಿ ನಡೆಯುತ್ತಿದೆ ಎಂಬ ಅರಿವು ಎಚ್ಚರಿಕೆಯ ನಡುವೆಯೂ, ಕಾರ್ಯಕ್ರಮದಲ್ಲಿ ಸ್ಥಳೀಯರಿಗೆ ಆದತೆ ಸಿಗುವಂತಾಗಬೇಕು, ರಾಜ್ಯ ರಾಷ್ಟ್ರ ಜಗತ್ತಿಗೆ ಪ್ರಾತಿನಿಧ್ಯ ಕೊಡುತ್ತೇವೆಂದು ಸ್ಥಳೀಯತೆಯನ್ನು ಕಡೆಗಣಿಸಬಾರದು. ಸಮ್ಮೇಳನದಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ಕ್ಷೇತ್ರಗಳ ಬಗ್ಗೆ ಗೋಷ್ಠಿ ಇರುವಂತೆ ರೂಪಿಸಬೇಕಿದೆ. ಶಿಕ್ಷಣ-ಭಾಷಾಮಾಧ್ಯಮ-ಪಠ್ಯಪುಸ್ತಕಗಳು ಇತ್ತೀಚಿನ ದಿನಮಾನಗಳಲ್ಲಿ ಬಹು ಚರ್ಚಿತವಾಗುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆಯೂ ಸಮ್ಮೇಳನದಲ್ಲಿ ಸ್ಥಾನ ಕಲ್ಪಿಸಬೇಕಿದೆ ಪಠ್ಯಪುಸ್ತಕಗಳ ರಚನಾ ಸಮಿತಿ ಸ್ವಯತ್ತವಾಗಬೇಕು. ಎಂಬುದು ನಮ್ಮ ಹಕ್ಕೋತ್ತಾಯ ಆಗಬೇಕು. ಹೆಣ್ಣು ಭ್ರೂಣಹತ್ಯೆ ಹಾಗೂ ಸ್ತ್ರೀ ಸಂವೇದನೆಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ವಿಷಯಗಳು ಸಮ್ಮೇಳನದಲ್ಲಿ ಚರ್ಚಿತವಾಗಬೇಕು.

4. ಪಾಲ್ಗೊಳ್ಳುವ ಕಲಾವಿದರನ್ನು, ಹೊರಗಿನ ಕಲಾವಿದರಂತೆಯೇ ಪರಿಗಣಿಸಬೇಕು

ಸಾಹಿತ್ಯ ಸಮ್ಮೇಳನ ಒಂದು ತೆರನಾಗಿ ಜಾನಪದ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದು ಸಂತಸದ ವಿಷಯ. ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕಲಾವಿದರನ್ನು ಗಾಯಕರನ್ನು ಏಕತೆರನಾಗಿ ಪರಿಗಣಿಸುವುದಿಲ್ಲ. ಹೊರಗಿನಿಂದ ಬಂದ ಕಲಾವಿದರಿಗೆ ಅಪಾರ ಸಂಭಾವನೆಯನ್ನು ನೀಡಿ, ಸ್ಥಳೀಯರನ್ನು ನಿರ್ಲಕ್ಷಿಸಲಾಗುತ್ತದೆ. ಎಲ್ಲಾ ಕಲಾವಿದರನ್ನು ಏಕತೆರನಾಗಿ ನೋಡಿಕೊಳ್ಳಬೇಕು. ಗೌರವ ಸಂಭಾವನೆ ಹಾಗೂ ಆತಿಥ್ಯಕ್ಕೆ ಸಂಬಂಧಿಸಿದಂತೆ ಇದು ಸಾಧ್ಯವಾಗಬೇಕು.

5. ಸಮ್ಮೇಳನಕ್ಕೆ ಮುನ್ನ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಹಾಗೂ ಅಂಬೇಡ್ಕರ್ ಭವನ ಸುಸಜ್ಜಿತವಾಗಬೇಕು

ಸಮ್ಮೇಳನವು ಪ್ರಧಾನ ವೇದಿಕೆಯಲ್ಲಿ ವೈಭವಯುತವಾಗಿ ನಡೆಯುತ್ತದೆ. ವಿವಿಧ ವಿಷಯಗಳ ಚರ್ಚೆಗಾಗಿ ಸಮಾನಾಂತರ ಗೋಷ್ಠಿಗಳನ್ನು ಏರ್ಪಡಿಸುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರ ಹಾಗೂ ಅಂಬೇಡ್ಕರ್ ಭವನಗಳನ್ನು ತ್ವರಿತವಾಗಿ ಸುಸಜ್ಜಿತಗೊಳಿಸಬೇಕು. ಅಂಬೇಡ್ಕರ ಭವನಕ್ಕೆ ಸೌರ ವಿದ್ಯುತ್ ಸಂಪರ್ಕ ಕಲ್ಪಿಸಿದರೆ ನಿರ್ವಹಣೆ ಸುಲಭವಾಗುತ್ತದೆ. ಎರಡು ಕಡೆ ಧ್ವನಿವರ್ಧಕ ಹಾಗೂ ಲೈಟಿಂಗ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ಕೆಲಸವನ್ನು ಜರೂರಾಗಿ ಮಾಡಿ ಮುಗಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ. ಈ ಎರಡು ಮಂದಿರಗಳು ನಗರದ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ತಾಣಗಳಾಗಿವೆ. ಸಮ್ಮೇಳನಕ್ಕೆ ಮುನ್ನ ಇವುಗಳ ದುರಸ್ಥಿಯಾಗಬೇಕು. ಇದು ಸಾಧ್ಯವಾಗದೇ ಹೋದರೆ ಸಂಘಟನಾತ್ಮಕ ಹೋರಾಟಕ್ಕೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ.

6. ಮಂಡ್ಯ ನಗರದ ರಸ್ತೆಗಳು ಕಾಮಗಾರಿಯಾಗಬೇಕು

ಸಮ್ಮೇಳನವು ಮಂಡ್ಯ ನಗರದಲ್ಲಿ ನಡೆಯುವುದರಿರದ ನಗರದ ಎಲ್ಲಾ ರಸ್ತೆಗಳನ್ನು ತ್ವರಿತವಾಗಿ ಕಾಮಗಾರಿ ಮಾಡಿ ಸುಸಜ್ಜಿತಗೊಳಿಸಬೇಕು.

7.ದುಂದುಗಾರಿಕೆಗೆ ಆಸ್ಪದ ನೀಡದೆ ಹಣವನ್ನು ಉಳಿಸಿ ಸಮ್ಮೇಳನ ಹೆಸರಿನಲ್ಲಿ ಸ್ಮಾರಕ ಭವನವೊಂದನ್ನು ನಿರ್ಮಿಸಬೇಕು

ಕಳೆದ ಸಮ್ಮೇಳನಲ್ಲಿ ಹಣ ಉಳಿತಾಯ ಮಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರಕ್ಕೆ, ರೈತ ಸಭಾಂಗಣದ ಮುಂಭಾಗದಲ್ಲಿ ಇರುವ ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಹಣ ನೀಡಿದ್ದಲ್ಲದೆ, ಬಂದೀಗೌಡ ಬಡಾವಣೆಯಲ್ಲಿ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಲಾಯಿತು. ಇದರ ಜೊತೆಗೆ ರಾಮನಗರದಲ್ಲಿರುವ ಜಾನಪದ ಲೋಕಕ್ಕೂ ಆರ್ಥಿಕ ನೆರವು ನೀಡದನ್ನು ಸಭೆಯು ಸ್ಮರಿಸಿಕೊಂಡಿತು. ಇದೇ ರೀತಿ ಈ ಸಮ್ಮೇಳನದಲ್ಲೂ ಒಂದಷ್ಟು ಹಣವನ್ನು ಉಳಿಸಿ ಸುವರ್ಣ ಕರ್ನಾಟಕ ಸಾಹಿತ್ಯ ಭವನವನ್ನು ನಿರ್ಮಿಸಬೇಕು.

8. ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸುವುದು

ನಾಲ್ವಡಿ ಅವರ ಪ್ರತಿಮೆಯ ವಿಷಯ ಕಳೆದ ಒಂದರೆಡು ದಶಕಗಳಿಂದಲೂ ಚರ್ಚಿತವಾಗುತ್ತದೆ. ಇದಕ್ಕೊಂದು ತಾರ್ಕಿಕ ಅಂತ್ಯವನ್ನು ನೀಡಬೇಕಿದೆ. ಸಮ್ಮೇಳನದ ಸಂದರ್ಭದಲ್ಲಾದರೂ ಇದನ್ನು ಸಾಧ್ಯ ಮಾಡಿದ್ದಾದರೆ ಮಂಡ್ಯ ಜಿಲ್ಲಾ ಜನತೆಯ ಬಹುವರ್ಷಗಳ ಕನಸು ನನಸಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ಸಾಧ್ಯ ಮಾಡಬೇಕೆಂದು ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಸಭೆಯು ಒತ್ತಾಯಿಸುತ್ತದೆ.

ಈ ವಿಷಯಗಳ ಜೊತೆ ಇನ್ನೂ ಹಲವು ವಿಷಯಗಳು ಚರ್ಚೆಗೆ ಒಳಪಟ್ಟವು, ಪೂರ್ಣಕುಂಭ ಸ್ವಾಗತದಲ್ಲಿ ಮಹಿಳೆಯರು ಇರುವಂತೆಯೇ ಪುರುಷರು ಇರುವಂತಾಗಬೇಕೆಂದು ಸಭೆಯು ಅಭಿಪ್ರಾಯಪಟ್ಟಿತು. ಈ ಮೂಲಕ ಗಂಡು ಹೆಣ್ಣಿನ ಬೇಧವನ್ನು ನಿರಾಕರಿಸಬಹುದೆಂದು ಅಭಿಪ್ರಾಯಪಡಲಾಯಿತು. ಕನ್ನಡದ ಮೊದಲ ಶಾಸನವೆಂದೇ ಗುರುತಿಸಲ್ಪಟ್ಟಿರುವ ಹಬ್ಸಿಡಿ ಶಾಸನದ ಪ್ರತಿರೂಪವನ್ನು ಸ್ಥಾಪಿಸಲು ಹೊರಟಿರುವುದು ಸ್ತುತ್ಯಾರ್ಹ. ಇದರ ಜೊತೆಗೆ ಮಂಡ್ಯ ಜಿಲ್ಲೆಯ ಅತ್ಯಂತ ಪ್ರಾಚೀನ ಶಾಸನವಾದ ಆತಗೂರು ಶಾಸನವನ್ನು ಇದರ ಜೊತೆ ಸ್ಥಾಪಿಸಬೇಕೆಂದು ಸಭೆಯು ಒತ್ತಾಯಿಸುತ್ತದೆ. ಆತಗೂರು ಶಾಸನವು ನಮ್ಮ ಜಿಲ್ಲೆಯ ಆಸ್ಥಿತೆಯ ಭಾಗ. ಒಂದು ನಾಯಿಗೆ ಸಂಬಂಧಿಸಿದಂತ ಶಾಸನವಿದು. ಕೃಷಿಕರ ಪ್ರಾಣಿ ಪ್ರೀತಿಗೆ ಸಾಕ್ಷಿ ಒದಗಿಸುತ್ತದೆ. ಕನ್ನಡದ ಆಸ್ಥಿತೆಯ ಭಾಗವಾದ ಹಲ್ಮಡಿ ಶಾಸನ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಜಿಲ್ಲೆಯ ಆಸ್ಥಿತೆಯ ಸಾಕ್ಷಿಯಾದ ಆತಗೂರು ಶಾಸನ ಸಮ್ಮೇಳನದ ಸ್ವಾಗತ ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಭೆಯು ಹಕ್ಕೊತ್ತಾಯ ಮಾಡುತ್ತದೆ.

ಈ ಸಂದರ್ಭದಲ್ಲಿ ಸಿಐಟಿಯು ಕುಮಾರಿ, ಎಸ್.ಬಿ.ಶಂಕರೇಗೌಡ, ನಗರಸಭಾ ಸದಸ್ಯ ಶ್ರೀಧರ್, ಹುರುಗಲವಾಡಿ ರಾಮಯ್ಯ, ಕೋ.ಪು.ಗುಣಶೇಖರ್, ಮಂಜುಳಮ್ಮ, ನವೀನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ