Tuesday, September 17, 2024

ಪ್ರಾಯೋಗಿಕ ಆವೃತ್ತಿ

ಬಿಹಾರ| ಮತ್ತೆ 3 ಸೇತುವೆ ಕುಸಿತ; 15 ದಿನಗಳಲ್ಲಿ 9ನೇ ಪ್ರಕರಣ

ಬಿಹಾರದಲ್ಲಿ ಕಳೆದ 15 ದಿನಗಳಲ್ಲಿಯೇ ಸುಮಾರು ಒಂಬತ್ತು ಸೇತುವೆ ಕುಸಿತ ಘಟನೆಗಳು ನಡೆದಿದೆ. ಭಾರೀ ಮಳೆಯ ನಡುವೆ ಸಿವಾನ್ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮೂರು ಸೇತುವೆಗಳು ಕುಸಿದು ಬಿದ್ದಿದ್ದು, ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಒಂಬತ್ತನೇ ಘಟನೆಯಾಗಿದೆ.

ಇತ್ತೀಚಿನ ಸೇತುವೆ ಕುಸಿತ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ. ಸೇತುವೆ ಕುಸಿದ ಬಳಿಕ ಸಿವಾನ್‌ನ ಗಂಡಕ್ ಮತ್ತು ಧಾಮ್ಹಿ ನದಿಗಳ ಉದ್ದಕ್ಕೂ ಇರುವ ವಿವಿಧ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳು ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ.

ಸಿವಾನ್ ಜಿಲ್ಲೆಯ ಪಟೇರಾ, ಧಮಾಯಿ ಗ್ರಾಮಗಳಲ್ಲಿ, ಜಿಲ್ಲೆಯ ತೆವ್ಟಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ಕುಸಿದ ಘಟನೆಗಳು ನಡೆದಿದೆ. ಜಿಲ್ಲೆಯ ಮಹಾರಾಜ್‌ಗಂಜ್ ಉಪವಿಭಾಗದ ಪತೇರಾ ಗ್ರಾಮದ ದೇವರಿಯಾದಲ್ಲಿ ಮೊದಲ ಘಟನೆ ವರದಿಯಾಗಿದೆ.

ಇನ್ನು ಗಂಡಕ್ ನದಿಗೆ ನಿರ್ಮಿಸಲಾದ ಸೇತುವೆಯ ಒಂದು ಭಾಗವು ಬುಧವಾರ ಕುಸಿದಿದೆ. 36-40 ವರ್ಷಗಳ ಹಿಂದೆ ನಿರ್ಮಿಸಿದ ಸೇತುವೆ ಇದುವರೆಗೆ ದುರಸ್ತಿ ಕಂಡಿಲ್ಲ ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಈ ಸೇತುವೆಯ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಸೇತುವೆಯು ಗ್ರಾಮಸ್ಥರಿಗೆ ಏಕೈಕ ಸಾರಿಗೆ ಸಾಧನವಾಗಿತ್ತು.

ಅದೇ ರೀತಿ ಮಹಾರಾಜ್‌ಗಂಜ್ ಬ್ಲಾಕ್‌ನ ತೆವ್ತಾ ಪಂಚಾಯತ್‌ನಲ್ಲಿ ನೌತಾನ್ ಮತ್ತು ಸಿಕಂದರ್‌ಪುರವನ್ನು ಸಂಪರ್ಕಿಸುವ ಸೇತುವೆ ಕುಸಿದಿದೆ. ಧಮಾಯಿ ಗ್ರಾಮದಲ್ಲಿಯೂ ಸೇತುವೆ ಕುಸಿದಿದೆ. ಗಂಡಕ್ ನದಿಗೆ ಸೇತುವೆ ನಿರ್ಮಿಸಲಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ದುರಸ್ತಿ ಮಾಡಲಾಗಿದೆ. ಬಲವಾದ ನೀರಿನ ಹರಿವಿನಿಂದಾಗಿ ಸೇತುವೆ ಕುಸಿದಿದೆ.

ಕಳೆದ ಹದಿನೈದು ದಿನಗಳಲ್ಲಿ ನಡೆದ ಸೇತುವೆ ಕುಸಿತ ಘಟನೆಗಳ ಹಿಂದೆ ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ನಡೆದಿರುವ ಅಕ್ರಮಗಳೇ ಈ ಎಲ್ಲ ಸೇತುವೆಗಳ ಕುಸಿತಕ್ಕೆ ಕಾರಣ ಎಂದು ಆರೋಪ ಮಾಡಲಾಗಿದೆ.

“ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವ ರಾಜಕಾರಣಿಗಳು ದುರ್ಬಲ ಸೇತುವೆಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ” ಎಂದು ಎ ಎನ್ ಸಿನ್ಹಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸ್ಟಡಿ ಮಾಜಿ ನಿರ್ದೇಶಕ ಪ್ರೊ.ಎಸ್ ನಾರಾಯಣ್ ದೂರಿದ್ದಾರೆ.

“ಗುತ್ತಿಗೆದಾರರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ನಂಟು ಮುಖ್ಯವಾಗಿ ರಾಜ್ಯದಲ್ಲಿ ಸೇತುವೆ ಕುಸಿತಕ್ಕೆ ಕಾರಣವಾಗಿದೆ. ರಾಜಕೀಯ ನಿಧಿಯ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ” ಎಂದು ಹೇಳಿದ್ದಾರೆ.

ಇನ್ನು ಎನ್‌ಡಿಎ ಒಕ್ಕೂಟದ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಈ ನಡುವೆ ಸೇತುವೆ ಕುಸಿತದ ಬಗ್ಗೆ ತನಿಖೆ ನಡೆಸಲು ಬಿಹಾರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಕುಸಿದಿರುವ ಬಹುತೇಕ ಸೇತುವೆಗಳನ್ನು ಗ್ರಾಮೀಣ ಕಾಮಗಾರಿ ಇಲಾಖೆಯಿಂದ ನಿರ್ಮಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!