ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಬುಂಡಕಟ್ಟೆ ಬಳಿ ಕೃಷಿ ಕೂಲಿಕಾರರೊಂದಿಗೆ ಸಂವಾದ
ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ವಿಫಲ
ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಕೃಷಿ ಕೂಲಿಕಾರರಿಗೆ 100 ದಿನ ಕೆಲಸ ಕೊಡದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಛೀಮಾರಿ ಹಾಕಿದರು.
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನ ಬಳಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಬುಂಡಕಟ್ಟೆ ಬಳಿ ಕೃಷಿ ಕೂಲಿಕಾರರೊಂದಿಗೆ ಸಂವಾದ ನಡೆಸಿದರು.
ಸಂಸತ್ತಿನಲ್ಲಿ ಬಹಳ ಸಂಘರ್ಷ ಮಾಡಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದೆವು. ಗ್ರಾಮೀಣ ಪ್ರದೇಶದ ಜನರಿಗೆ ವರ್ಷಕ್ಕೆ ಕನಿಷ್ಠ ನೂರು ದಿನಗಳು ಉದ್ಯೋಗ ನೀಡಬೇಕೆಂಬುದು ಈ ಯೋಜನೆಯ ಉದ್ದೇಶ. ಆದರೆ ಕೃಷಿ ಕಾರ್ಮಿಕರ ಹೇಳಿಕೆಯಂತೆ ರಾಜ್ಯದಲ್ಲಿ 100 ದಿನಗಳ ಬದಲು 20- 24 ದಿನ ಕೆಲಸ ನೀಡಲಾಗಿದೆ. ರಾಜ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ವಿಫಲವಾಗಿದ್ದು,100 ದಿನದ ಕೆಲಸಕ್ಕೆ 75 ದಿನ ಕಡಿತ ಮಾಡಿರುವ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಉದ್ಯೋಗ ಖಾತ್ರಿಯಲ್ಲಿ ನೂರು ದಿನಗಳ ಕೆಲಸ ನೀಡದಿರುವ ಸರ್ಕಾರದ ವಿರುದ್ಧ ನ್ಯಾಯ ಪಡೆಯಲು ಕಾನೂನು ಹೋರಾಟ ನಡೆಸಲು ನಮ್ಮ ಪಕ್ಷ ಸಿದ್ಧವಿದೆ. ನ್ಯಾಯಾಲಯದಲ್ಲಿ ಕೃಷಿ ಕೂಲಿಕಾರರ ಪರವಾಗಿ ನ್ಯಾಯ ಕೊಡಿಸುತ್ತೇವೆ ಎಂದರು.
ದಿನದಲ್ಲಿ ಇಂತಿಷ್ಟೇ ಕೆಲಸ ಮಾಡಬೇಕು, ಇಲ್ಲದಿದ್ದರೆ ಕೂಲಿ ಸಿಗುವುದಿಲ್ಲ ಎಂದು ಪಂಚಾಯಿತಿ ಅಧಿಕಾರಿ ಹೇಳುತ್ತಾರೆ. ಮಹಿಳೆಯರು ಪುರುಷರಂತೆಯೇ ಹಾರೆ, ಗುದ್ದಲಿ ಹಿಡಿದು ಕೆಲಸ ಮಾಡಿದರೂ ಕಡಿಮೆ ಕೂಲಿ ನೀಡುತ್ತಾರೆ. ನಾವು ಕೂಡ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಆದರೂ ಸರಿಯಾಗಿ ಕೂಲಿ ಹಣ ನೀಡುವುದಿಲ್ಲ ಎಂದು ಮಹಿಳಾ ಕೂಲಿಕಾರರು ದೂರಿದರು.
ಬಂಡೂರು ಕೆರೆಯನ್ನು 43 ಜನ 25 ದಿನದಲ್ಲಿ ನಿರ್ಮಾಣ ಮಾಡಿದೆವು ಎಂಬುದನ್ನು ಕೇಳಿದ ಬೃಂದಾ ಕಾರಟ್, ಇಷ್ಟು ಕಡಿಮೆ ದಿನದಲ್ಲಿ ಇಂತಹ ಕೆರೆಯನ್ನು ನಿರ್ಮಾಣ ಮಾಡಲು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯ ಚಕಿತರಾದರು.
ಪಂಚಾಯಿತಿ ಅಧಿಕಾರಿಗಳು 25 ದಿನದಲ್ಲಿ ಕೆಲಸ ಮಾಡಬೇಕು, ಇಲ್ಲದಿದ್ದರೆ ಕೂಲಿ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು .ಹಾಗಾಗಿ ಬೇಗ ಕೆಲಸ ಮುಗಿಸಿದೆವು ಎಂದು ತಿಳಿಸಿದರು.
ನಿರ್ಮಾಣದ ಸಮಯದಲ್ಲಿ ನಾಲ್ಕರಿಂದ ಐದು ದಿವಸ ಹುಷಾರಿಲ್ಲದೆ ಮಲಗಿದ್ದೇವೆ ಎಂದಾಗ,ಬೃಂದಾ ಕಾರಟ್ ಆಗ ನಿಮಗೆ ಚಿಕಿತ್ಸೆ ಕೊಡಿಸಿದ್ದರೆ ಎಂದು ಪ್ರಶ್ನಿಸಿದರು. ಅದಕ್ಕೆ ಕೂಲಿಕಾರರು ಜ್ವರ, ಮೈ-ಕೈ ನೋವುಗಳಿಗೆಲ್ಲ ನಾವೇ ಚಿಕಿತ್ಸೆ ಪಡೆಯಬೇಕಿತ್ತು. ಆದರೆ ಇಲ್ಲಿ ಮಹಿಳೆಯೊಬ್ಬರಿಗೆ ಸಾಕಷ್ಟು ಪೆಟ್ಟಾಗಿದ್ದರಿಂದ ಅವರಿಗೆ 2000 ರೂ. ಕೊಟ್ಟು ಚಿಕಿತ್ಸೆ ಮಾಡಿಸಿದರು ಎಂದರು.
ಮಹದೇವಮ್ಮ ಎಂಬ ಕೃಷಿ ಕೂಲಿ ಕಾರ್ಮಿಕರೊಬ್ಬರು ಉದ್ಯೋಗ ಖಾತ್ರಿ ಅಂತಾರೆ ನಮ್ಮ ಜೀವ ತಿಂತಾರೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಬೃಂದಾ ಕಾರಟ್ ನರೇಗಾ ಯೋಜನೆ ಅಡಿ ಕೆಲಸದ ಸಮಯದಲ್ಲಿ ಗಾಯಗೊಂಡರೆ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ,ಚಿಕಿತ್ಸೆ ಎಲ್ಲವನ್ನು ಪಂಚಾಯಿತಿ ಅಧಿಕಾರಿಗಳೇ ಮಾಡಿಸಬೇಕು ಎಂಬ ಕಾನೂನು ಇದೆ. ಇಲ್ಲಿ ಅದ್ಯಾವುದೂ ನಡೆಯುತ್ತಿಲ್ಲ, ಅಧಿಕಾರಿಗಳು ನರೇಗಾ ಯೋಜನೆಯನ್ನು ವಿಫಲಗೊಳಿಸಲು ನಿಂತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಮೀನಾಕ್ಷಿ ಸುಂದರಂ. ಸಿ. ಕುಮಾರಿ, ದೇವಿ, ಗೌರಮ್ಮ, ಎಂ.ಪುಟ್ಟಮಾದು. ಬಿ.ಎಂ ಶಿವಮಲ್ಲಯ್ಯ, ಎನ್ಎಲ್ ಭರತ್ರಾಜ್, ಕೃಷ್ಣೇಗೌಡ, ಮಂಜುಳಾ ಹನುಮೇಗೌಡ, ಶಿವಕುಮಾರ್, ಸುನೀತಾ, ಆನಂದ್ ಸೇರಿದಂತೆ ನೂರಾರು ಕೃಷಿ ಕೂಲಿಕಾರರು ಉಪಸ್ಥಿತರಿದ್ದರು.




