ಭಾರತೀಯ ಜನತಾ ಪಾರ್ಟಿಯಲ್ಲ, ಬುಲ್ಡೋಜರ್ ಪಾರ್ಟಿ
ಟೇಬಲ್ ಕೆಳಗಡೆ ಎಷ್ಟು ಪಡೆಯುತ್ತಿದ್ದಾರೆ ಎನ್ನುವುದು ನಮಗೆ ಕಾಣುತ್ತಿಲ್ಲ
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲ
ಈ ದೇಶದ ರೈತರು,ಕಾರ್ಮಿಕರು, ಮಹಿಳೆಯರು,ಯುವಜನತೆಯ ಹಕ್ಕುಗಳನ್ನು ನಾಶ ಮಾಡುತ್ತಿರುವ ಬಿಜೆಪಿ ಎಂದರೆ ಭಾರತೀಯ ಜನತಾ ಪಾರ್ಟಿಯಲ್ಲ, ಬುಲ್ಡೋಜರ್ ಪಾರ್ಟಿ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ವ್ಯಂಗ್ಯವಾಡಿದರು.
ಮಳವಳ್ಳಿ ತಾಲ್ಲೂಕಿನ ಬಂಡೂರು ಗ್ರಾಮದ ಬಸವೇಶ್ವರಸ್ವಾಮಿ ದೇವಸ್ಥಾನ ಬಳಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಿರುವ ಬುಂಡಕಟ್ಟೆ ಬಳಿ ಕೂಲಿಕಾರರೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು,ಬಿಜೆಪಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸದಿದ್ದರೆ ದೇಶ ಅವನತಿ ಹೊಂದಲಿದೆ ಎಂದರು.
40 % ಗಿಂತ ಹೆಚ್ಚು ರಾಜ್ಯ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರವೆಂದು ಅಂದಾಜಿಸುವುದು ಬಹಳ ತಪ್ಪು.ಅದಕ್ಕಿಂತಲೂ ಹೆಚ್ಚಿನ ಕಮಿಷನ್ ಪಡೆಯುತ್ತಿದೆ. ಪ್ರಧಾನಿ ಮೋದಿ ಅವರ ಸರ್ಕಾರ ಐದಾರು ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು 900ರಿಂದ 1000 ಕೋಟಿ ರೂ.ಹಣವನ್ನು ವ್ಯಯಿಸಿದೆ. ಅಲ್ಲದೇ ಚುನಾವಣಾ ಬಾಂಡ್‌ಗಳ ಹೆಸರಿನಲ್ಲಿ ಸುಮಾರು 5 ಸಾವಿರ ಕೋಟಿ ರೂ.ಸಂಗ್ರಹಿಸಲಾಗಿದೆ. ಇದೆಲ್ಲವೂ ನಮ್ಮ ಕಣ್ಣಿನ ಮುಂದೆ ಕಾಣುವಂತೆ ಮಾಡುತ್ತಿರುವುದು. ಇನ್ನೂ ಟೇಬಲ್ ಕೆಳಗಡೆ ಎಷ್ಟು ಪಡೆಯುತ್ತಿದ್ದಾರೆ ಎನ್ನುವುದು ನಮಗೆ ಕಾಣುತ್ತಿಲ್ಲ. 40 ಪರ್ಸೆಂಟ್ ಗಿಂತಲೂ ಹೆಚ್ಚಿನ ಕಮಿಷನ್ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಸಂಸತ್ತಿನ ಮುಂದೆ ಪ್ರತಿಭಟನೆ ಬಿಜೆಪಿ ಸರ್ಕಾರದ ದುರಾಡಳಿತದಿಂದ ರೈತರು,ಕಾರ್ಮಿಕರು,ನರೇಗಾ ಕೂಲಿ ಕಾರ್ಮಿಕರು ಸೇರಿದಂತೆ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ.ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಸಂಸತ್ತಿನ ಮುಂದೆ ಬೃಹತ್ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.
ನರೇಗಾ ಅನುದಾನ ಕಡಿತ
ನರೇಗಾ ಕಾಯ್ದೆಗೆ ಸಾಕಷ್ಟು ಬದಲಾವಣೆ ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನರೇಗಾ ಯೋಜನೆಯ ಅನುದಾನವನ್ನು ಕಡಿತ ಮಾಡಿ ಅನ್ಯಾಯ ಮಾಡುತ್ತಿದೆ.ಇದರಿಂದ ಕೂಲಿಕಾರರು ಸಂಕಷ್ಟವನ್ನು
ಎದುರಿಸುವಂತಾಗಿದೆ ಎಂದು ಕಿಡಿಕಾರಿದರು.
ನೂರು ದಿನಗಳ ಕೂಲಿ ನೀಡಬೇಕು ಎನ್ನುವ ನಿಯಮವಿದ್ದರೂ ಈಗಿನ ಸರ್ಕಾರಗಳು ಕನಿಷ್ಟ ಕೂಲಿ ಮತ್ತು ವೇತನ ನೀಡಿಲ್ಲ, ಉದ್ಯೋಗಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಸಮರ್ಪಕ ಕೂಲಿ ನೀಡದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು, ನರೇಗಾ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಠ ಕೂಲಿ ಇಲ್ಲದೇ ಬಡ ಕುಟುಂಬಗಳು ಜೀವನ ಮಾಡಲು ಕಷ್ಟ ಪಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಿಗೆ ಕನಿಷ್ಠ ಕೂಲಿ ಮತ್ತು ವೇತನ ನೀಡದಿರುವುದು ಅವರಿಗೆ ಮಾಡುತ್ತಿರುವ ಅವಮಾನವಾಗಿದೆ. ಬಡವರ ಹಕ್ಕುನ್ನು ದೊರಕಿಸಿಕೊಡಲು ಕೆಂಪು ಬಾವುಟದ ಹೋರಾಟ ನಿರಂತರವಾಗಿ ನಡೆಯುತ್ತದೆ. ಗ್ರಾಮ ಪಂಚಾಯಿತಿಗಳು ಸಮರ್ಪಕ ಕೂಲಿ ನೀಡದಿದ್ದರೇ ಕಾನೂನು ಹೋರಾಟದ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕೆಂದು ಕರೆ ನೀಡಿದರು.
ಕೃಷಿ ಕೂಲಿಕಾರರ ಸಂಘ, ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತ ಸಂಘ ಸೇರಿದಂತೆ ಪ್ರಗತಿಪರ ಸಂಘಟನೆಗಳು ಜೊತೆಗೂಡಿ ರೈತರು, ಕೂಲಿಕಾರರು ಮತ್ತು ಕಾರ್ಮಿಕರ ಪರವಾಗಿ ಹೋರಾಟ ಮಾಡಿ ಸರ್ಕಾರದ ಸೌಲಭ್ಯವನ್ನು ದೊರಕಿಸಿಕೊಡಲು ಪ್ರಮಾಣಿಕ ಪ್ರಯತ್ನ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡರಾದ ಮೀನಾಕ್ಷಿ ಸುಂದರಂ ಸಿ.ಕುಮಾರಿ, ದೇವಿ, ಗೌರಮ್ಮ, ಎಂ.ಪುಟ್ಟಮಾದು, ಬಿ,ಎಂ ಶಿವಮಲ್ಲಯ್ಯ, ಎನ್‌ಎಲ್ ಭರತ್‌ರಾಜ್, ಕೃಷ್ಣೇಗೌಡ, ಮಂಜುಳಾ ಹನುಮೇಗೌಡ, ಶಿವಕುಮಾರ್, ಸುನೀತಾ, ಆನಂದ್ ಸೇರಿದಂತೆ ಇತರರಿದ್ದರು.




