Friday, September 20, 2024

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ದೇವೇಗೌಡರ ಹೆಸರು ಕಡೆಗಣಿಸಿದ್ದೇಕೆ?

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರನ್ನು ಸರ್ಕಾರವೇ ಸೂಚಿಸಿ, ಕೊನೆ ಗಳಿಗೆಯಲ್ಲಿ ಅವರ ಹೆಸರು ಕಡೆಗಣಿಸಿದ್ದೇಕೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದರು.

ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದ ಮುಂದೆ ನಿರ್ಮಿಸಲಾಗಿರುವ ದಸರಾ ವೇದಿಕೆ ಸಿದ್ದತೆ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ದಸರಾ ಉದ್ಘಾಟಿಸುವ ಬಗ್ಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಗಿತ್ತು.

ಆದರೆ, ಕೊನೆ ಘಳಿಗೆಯಲ್ಲಿ ಬದಲಾವಣೆ ಮಾಡಿದ್ದೇಕೆ? ಈ ಬಗ್ಗೆ ಸಚಿವರಾದ ಕೆ.ಗೋಪಾಲಯ್ಯ ಹಾಗೂ ಕೆ.ಸಿ.ನಾರಾಯಣಗೌಡ ಅವರು ಸ್ಪಷ್ಟನೆ ಕೊಡಬೇಕು ಎಂದು ತಾಕೀತು ಮಾಡಿದರು.

ಶ್ರೀರಂಗಪಟ್ಟಣ ದಸರಾ ಉದ್ಘಾಟನೆಗೆ ದೇವೇಗೌಡರ ಆಹ್ವಾನಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ್ದೆ. ಅವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದೇವೇಗೌಡರ ಆರೋಗ್ಯ ಸುಧಾರಿಸಿದೆ ಗೌಡರಿಂದಲೇ ದಸರಾಗೆ ಚಾಲನೆ ನೀಡೋಣ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಸಚಿವರು ಏಕಾಏಕಿ ದೇವೇಗೌಡರನ್ನು ಕೈಬಿಟ್ಟಿರುವುದೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಸರಾಗೆ ಅಡ್ಡಿ

ಒಕ್ಕಲಿಗರ ಸಂಘದ ಸದಸ್ಯರಾದ ಗಂಜಾಂ ಯೋಗೇಶ್ ಹಾಗೂ ಮರಳಗಾಲ ಗುರು ಕೂಡ ದೇವೇಗೌಡರ ಹೆಸರನ್ನು ಸರ್ಕಾರವೇ ಪ್ರಸ್ತಾಪಿಸಿ, ಕೊನೆ ಗಳಿಗೆಯಲ್ಲಿ ಕೈಬಿಟ್ಟಿರುವುದರಿಂದ ಅವರಿಗೆ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ದಸರಾ ವೇಳೆ ಒಕ್ಕಲಿಗರ ಸಂಘದ ವತಿಯಿಂದ ದಸರಾಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮಧ್ಯೆ ಪ್ರವೇಶಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ಇದು ನಾಡದೇವತೆಯ ಹಬ್ಬ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆಚರಣೆ ಮಾಡುತ್ತಿದ್ದೇವೆ. ದಸರಾಗೆ ಯಾರು ಅಡ್ಡಿಪಡಿಸಬೇಡಿ. ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆಯೋಣ. ನನಗೂ ಈವರೆಗೂ ದೇವೇಗೌಡರನ್ನು ಕೈಬಿಟ್ಟಿರುವ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ ಎಂದು ಸಮಾಧಾನ ಪಡಿಸಿದರು.

ಸೆ.28 ರಂದು ಕಿರಂಗೂರು ಬನ್ನಿಮಂಟಪದಿಂದ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ದಸರಾಗೆ ಮೂರು ಆನೆಗಳನ್ನು ಕರೆಸಲಾಗುತ್ತಿದೆ. ಯುವ ದಸರಾ, ಮಹಿಳಾ ದಸರಾ, ದಸರಾ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಅಗತ್ಯ ಸಿದ್ದತೆ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಯತೀಶ್, ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಶೀಲ್ದಾರ್ ಶ್ವೇತಾ ರವೀಂದ್ರ, ಡಿವೈಎಸ್ಪಿ ಸಂದೇಶ್ ಕುಮಾರ್, ಪುರಸಭೆ ಉಪಾಧ್ಯಕ್ಷ ಕೃಷ್ಣಪ್ಪ, ಡಿಸಿಎಫ್ ರುತ್ರನ್, ತಾಪಂ ಇಒ ವೇಣು ಸೇರಿದಂತೆ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!