ಕರ್ನಾಟಕ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 7 ನೇ ವೇತನ ಆಯೋಗ ರಚನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಧರಣಿ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಸರ್ಕಾರಿ ನೌಕರರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಇತ್ಯಾದಿ ಸೌಲಭ್ಯಗಳ ವೆಚ್ಚ ದಿನೇ ದಿನೇ ಗಗನಕ್ಕೇರುತ್ತಿದ್ದು, ಸರ್ಕಾರಿ ನೌಕರರ ಬೆಲೆ ಏರಿಕೆ ಪ್ರಹಾರಕ್ಕೆ ಸಿಲುಕಿದ್ದಾರೆ. ಕೇರಳ, ತಮಿಳುನಾಡು, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನವು ಕೇಂದ್ರ ಸರ್ಕಾರಿ ನೌಕರರಿಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದೆ, ಆದರೆ ಕರ್ನಾಟಕದಲ್ಲಿ ಕಾಲ ಕಾಲಕ್ಕೆ ವೇತನ ಆಯೋಗ ರಚನೆ ಆಗದೆ ಇರುವುದರಿಂದ ನೌಕರರು ಈಗಾಗಲೇ 2 ವೇತನ ಪರಿಷ್ಕರಣೆಯನ್ನು ಕಳೆದುಕೊಂಡಿದ್ಧಾರೆ ಎಂದು ದೂರಿದರು.
ನಿವೃತ್ತ ಹೈಕೋರ್ಟ್ ನ್ಯಾಯಾಮೂರ್ತಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಹಾಗೂ ಹೈಕೋರ್ಟ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಲು 7ನೇ ವೇತನ ಆಯೋಗ ರಚನೆ ಮಾಡಬೇಕು. ಕೋವಿಡ್ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ನೌಕರರ ಮತ್ತು ಪಿಂಚಣಿದಾರ 18 ತಿಂಗಳ ಬಾಕಿ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದರು.
2022ರ ಜುಲೈನಿಂದ ಜಾರಿಗೆ ಬರುವಂತೆ ಶೇ.25ರಷ್ಟು ಮಧ್ಯಂತರ ಪರಿಹಾರವನ್ನು ಕೂಡಲೇ ಘೋಷಿಸಬೇಕು. ನೂತನ ಪಿಂಚಣಿ ಯೋಜನೆ (NPS) ರದ್ದುಪಡಿಸಿ, ನಿಶ್ಚಿತ ಪಿಂಚಣಿ ಪದ್ಧತಿ ಮರುಸ್ಥಾಪಿಸಬೇಕು. 2ನೇ ಆಡಳಿತ ಸುಧಾರಣಾ ಆಯೋಗದ ನೌಕರ ವಿರೋಧಿ ಶಿಫಾರಸ್ಸುಗಳನ್ನು ಕೈಬಿಟ್ಟು ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಒಕ್ಕೂಟದ ಜಿಲ್ಲಾ ಸಂಚಾಲಕ ಕೆ.ಪಿ.ರಾಜು, ಸಂಚಾಲನ ಸಮಿತಿ ಸದಸ್ಯೆ ಶೈಲಜಾ ಎಂ.ಎಸ್., ಪದಾಧಿಕಾರಿಗಳಾದ ಮಹದೇವ, ಪಾಪಣ್ಣ ಹೆಚ್.ಎಂ., ಜಿ.ವಿ.ಶಿವಕುಮಾರ್, ಸಿದ್ದರಾಜು, ರೇಣುಕಾ ಮತ್ತು ರೂಪ ಬಿ.ಆರ್. ಭಾಗವಹಿಸಿದ್ದರು.




