ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಟೆನಿಸ್ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಮಂಡ್ಯ ಜಿಲ್ಲೆಯ ಅಪರೂಪದ ಟೆನ್ನಿಸ್ ಪ್ರತಿಭೆ ಕಶ್ವಿ ಸುನಿಲ್ ಅವರಿಗೆ ಮತ್ತಷ್ಟು ಆರ್ಥಿಕ ಪ್ರೋತ್ಸಾಹ ದೊರೆತರೆ ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿ ಆಗುವ ಎಲ್ಲಾ ಸಾಧ್ಯತೆಗಳಿವೆ. ರಾಷ್ಟ್ರೀಯ ಮಟ್ಟದಲ್ಲಿ 36 ನೇ ಶ್ರೇಯಾಂಕ, ರಾಜ್ಯದಲ್ಲಿ 3 ನೇ ಶ್ರೇಯಾಂಕದ ಆಟಗಾರ್ತಿಯಾಗಿರುವ ಕಶ್ವಿ ಸುನಿಲ್ ಹಲವಾರು ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನ,ಬೆಳ್ಳಿ, ಹಾಗೂ ಕಂಚಿನ ಪದಕಗಳನ್ನು ಪಡೆದಿರುವ ಕಶ್ಮಿ ಸುನಿಲ್ ಅವರ ಮುಂದಿನ ಕ್ರೀಡಾ ಭವಿಷ್ಯಕ್ಕಾಗಿ ರಾಷ್ಟ್ರೀಯ,ಬಹುರಾಷ್ಟ್ರೀಯ ಕಂಪನಿಗಳು ಹಾಗೂ ದಾನಿಗಳು ಪ್ರಾಯೋಜಕತ್ವ ನೀಡಬೇಕಿದೆ.
ಪ್ರಾಯೋಜಕರು ಸಿಕ್ಕರೆ ಈಕೆ ಮುಂದೊಂದು ದಿನ ಭಾರತದ ಬಾವುಟವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಕ್ಕೆ ಆಕೆ ಭಾಗವಹಿಸಿ ಗೆದ್ದ ಪದಕಗಳೇ ಸಾಕ್ಷಿಯಾಗಿದೆ. ಮಂಡ್ಯದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಶ್ವಿ ಅವರ ತಂದೆ ಸುನಿಲ್ ದೇಶಾದ್ಯಂತ ನಡೆಯುವ ಟೆನಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ವಾರ್ಷಿಕ 8ರಿಂದ 10 ಲಕ್ಷದವರೆಗೂ ಆರ್ಥಿಕ ಹೊರೆ ಬೀಳುತ್ತಿದೆ. ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾಗವಹಿಸಬೇಕಾದರೆ ವಾರ್ಷಿಕ 20 ಲಕ್ಷಕ್ಕೂ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತದೆ.ಇದನ್ನು ಭರಿಸುವ ಸಾಮರ್ಥ್ಯ ಇಲ್ಲದ ಕಾರಣ ಪ್ರಾಯೋಜಕತ್ವದ ಮೊರೆ ಹೋಗಿದ್ದೇವೆ.ಪ್ರಾಯೋಜಕರು ಮುಂದೆ ಬಂದರೆ ನನ್ನ ಮಗಳು ಹೆಚ್ಚಿನ ಸಾಧನೆ ಖಂಡಿತ ಮಾಡಲಿದ್ದಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
11 ವರ್ಷದ ಬಾಲಕಿಯಾಗಿದ್ದಾಗಲೇ 2022ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ 14 ವರ್ಷದೊಳಗಿನ ಬಾಲಕ- ಬಾಲಕಿಯರ ಭಾರತದ ಪ್ರಪ್ರಥಮ ಮಿನಿ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಹಾಗೂ 2022ರ ಮೇ ನಲ್ಲಿ ನಡೆದ 2ನೇ ಮಿನಿ ಒಲಂಪಿಕ್ಸ್ನಲ್ಲಿ ಎರಡು ಬೆಳ್ಳಿ, ಒಂದು ಕಂಚಿನ ಪದಕ ಮತ್ತು 2021ನೇ ಸಾಲಿನ ರಾಜ್ಯ ಮಟ್ಟದ ಡಾ.ಚ್.ಡಿ.ಚೌಡಯ್ಯ ಕ್ರೀಡಾ ಪ್ರಶಸ್ತಿ ಪಡೆದಿರುವ ಆಟಗಾರ್ತಿ ಕಶ್ವಿ ಸುನಿಲ್ ಮಂಡ್ಯ ಜಿಲ್ಲೆಯ ಪ್ರಥಮ ಮತ್ತು ಏಕೈಕ ಹ್ಯಾಟ್ರಿಕ್ ಚಾಂಪಿಯನ್ ಎಂಬ ಹೆಗ್ಗಳಿಕೆಯೊಂದಿಗೆ ಅಖಿಲ ಭಾರತ ಟೆನಿಸ್ ಅಸೋಷಿಯೇಷನ್ ರಾಷ್ಟ್ರೀಯ ಶ್ರೇಯಾಂಕದ ಆಟಗಾರ್ತಿಯಾಗಿದ್ದಾಳೆ ಎಂದರು.
ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರು ಮತ್ತು ಮೈಸೂರಿನ ಸ್ಥಳೀಯ ಪಂದ್ಯಾವಳಿಗಳು ಸೇರಿದಂತೆ ಹೈದರಾಬಾದ್, ಕೊಯಮತ್ತೂರ್, ತಿರುವನಂತಪುರ, ಗುವಾಹತಿ, ಹರಿಯಾಣದ ಸೋನಿಪಟ್, ಜಜ್ಜಾರ್ ಮತ್ತು ಕರ್ನಾಲ್‌ನ ಹಲವಾರು ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಚಾಂಪಿಯನ್ ವಿನ್ನರ್ ಪಟ್ಟವನ್ನು ಪಡೆದು ಶಾಲೆಗೆ, ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ ಎಂದರು.
2023ರ ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಕಠಿಣ ತರಬೇತಿ ಪಡೆಯುತ್ತಿದ್ದು, ಅಪರೂಪದ ಕ್ರೀಡಾ ಪ್ರತಿಭೆಯಾದ ನಮ್ಮ ಮಗಳ ಕ್ರೀಡಾ ಭವಿಷ್ಯಕ್ಕೆ ಸಹಕಾರ ನೀಡಿದಲ್ಲಿ ಪೋಷಕನಾದ ನನಗೆ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಹಾಯವಾಗಲಿದೆ. ಪ್ರಾಯೋಜಕರ ಸಹಕಾರದೊಂದಿಗೆ ಕಶ್ವಿ ಸುನಿಲ್‌ರವರನ್ನು ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯಾಗಿ ರೂಪಿಸಿ ಸಂಸ್ಥೆಗೆ, ಜಿಲ್ಲೆಗೆ, ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರಲು ಕ್ರೀಡಾ ಪ್ರೇಮಿಗಳ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಕಶ್ವಿ ಸುನಿಲ್, ಕ್ರೀಡಾ ತರಬೇತುದಾರ ಮಂಜುನಾಥ್, ತಾಯಿ ಅನಿತಾ ಉಪಸ್ಥಿತರಿದ್ದರು.