Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಶಾಲೆಯಲ್ಲಿ ಮೊಟ್ಟೆ ಬೇಯಿಸುವುದಕ್ಕೆ ಗ್ರಾಮಸ್ಥರ ತಕರಾರು

ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಕ್ಕಳಿಗೆ ನೀಡುವುದಕ್ಕಾಗಿ ಮೊಟ್ಟೆ ಬೇಯಿಸುವುದನ್ನು ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಗ್ರಾಮಸ್ಥರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಮೊಟ್ಟೆ ಬೇಯಿಸುವುದು ನಮ್ಮ ಧಾರ್ಮಿಕ ರೂಢಿಗಳನ್ನು ಉಲ್ಲಂಘಿಸುತ್ತದೆ. ಶಾಲೆಯು ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಇರುವುದರಿಂದ, ಸುತ್ತಮುತ್ತ ಮೊಟ್ಟೆಗಳನ್ನು ಬೇಯಿಸುವುದು ನಮ್ಮ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಗ್ರಾಮಸ್ಥರು ವಾದಿಸುತ್ತಾರೆ.

ಶಾಲೆಯ 120 ವಿದ್ಯಾರ್ಥಿಗಳಲ್ಲಿ, 80 ವಿದ್ಯಾರ್ಥಿಗಳು ಈಗ ಮೊಟ್ಟೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಶಾಲಾ ಆವರಣದಲ್ಲಿ ಮೊಟ್ಟೆ ಬೇಯಿಸುವುದನ್ನು ಮುಂದುವರಿಸಿದರೆ, ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುವುದಾಗಿ ಪೋಷಕರು ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಹಲವರು ಈಗಾಗಲೇ ವರ್ಗಾವಣೆ ಪ್ರಮಾಣಪತ್ರಗಳನ್ನು (ಟಿಸಿ) ಕೋರಿದ್ದಾರೆ ಎಂದು ತಿಳಿದುಬಂದಿದೆ.

“ಶಾಲಾ ಆವರಣದಲ್ಲಿ ಮೊಟ್ಟೆಗಳನ್ನು ಬೇಯಿಸಲಾಗುತ್ತಿರುವುದರಿಂದ ನಾವು ನಮ್ಮ ಮಕ್ಕಳ ವರ್ಗಾವಣೆ ಪತ್ರ ಕೇಳಿದ್ದೇವೆ, ಮೊಟ್ಟೆ ನೀಡುವುದು ನಮ್ಮ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ, ಬದಲಿಗೆ ಬಾಳೆಹಣ್ಣು ನೀಡುವಂತೆ ನಾವು ಶಾಲೆಯಲ್ಲಿ ವಿನಂತಿಸಿದ್ದೇವೆ” ಎಂದು ಪೋಷಕರಲ್ಲಿ ಒಬ್ಬರು ತಿಳಿಸಿದ್ದಾರೆ.

ನಾವು ಮೊಟ್ಟೆ ವಿತರಣೆಯನ್ನು ವಿರೋಧಿಸುತ್ತಿಲ್ಲ, ಬದಲಾಗಿ ಶಾಲೆಯಲ್ಲಿ ಬೇಯಿಸುವುದನ್ನು ಮಾತ್ರ ವಿರೋಧಿಸುತ್ತಿದ್ದೇವೆ ಎಂದು ಪೋಷಕರು ಹೇಳಿದ್ದಾರೆ. ವರ್ಷಗಳಿಂದ ಪರಸ್ಪರ ಒಪ್ಪಂದದಿಂದ ಮೊಟ್ಟೆಗಳನ್ನು ತಿನ್ನದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡಿ, ಮೊಟ್ಟೆಗಳನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಇತ್ತೀಚೆಗೆ ನಮ್ಮನ್ನು ಕೇಳದೆ ಶಾಲೆಯು ಆವರಣದಲ್ಲಿ ಮೊಟ್ಟೆ ಬೇಯಿಸುವುದನ್ನು ಪುನರಾರಂಭಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಾಲೆಯು ಸರ್ಕಾರಿ ನೀತಿಯನ್ನು ಮಾತ್ರ ಅನುಸರಿಸುತ್ತಿದೆ ಎಂದು ಹೇಳುವ ಮೂಲಕ ಪ್ರಾಂಶುಪಾಲರು ಪೋಷಕರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. “ಓರ್ವ ವಿದ್ಯಾರ್ಥಿ ಮೊಟ್ಟೆ ಕೇಳಿದರೂ, ನಾವು ಅವುಗಳನ್ನು ಒದಗಿಸಬೇಕಾಗುತ್ತದೆ. ದಯವಿಟ್ಟು ಮೊಟ್ಟೆ ಮತ್ತು ಬಾಳೆಹಣ್ಣುಗಳಿಗಿಂತ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ” ಎಂದು ಪ್ರಾಂಶುಪಾಲರು ಮನವಿ ಮಾಡಿದ್ದಾರೆ.

ಶಿಕ್ಷಣ ಇಲಾಖೆ ಈಗ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸುತ್ತಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯ ಸ್ವಾಮಿ, “ನಾವು ಶಿಕ್ಷಣ ಇಲಾಖೆ, ಶಾಲಾ ಮುಖ್ಯಸ್ಥರು ಮತ್ತು ಪೋಷಕರೊಂದಿಗೆ ಸಭೆಗೆ ಕರೆದಿದ್ದೇವೆ. ಸಮಸ್ಯೆಯನ್ನು ಚರ್ಚಿಸಿ ಪರಿಹರಿಸುತ್ತೇವೆ” ಎಂದು ತಿಳಿಸಿದ್ದಾರೆ.

ಕೃಪೆ : ನಾನು ಗೌರಿ.ಕಾಂ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ