ಕುಡಿಯುವ ನೀರಿನ ಕೆಲಸ ಮಾಡುತ್ತಿದ್ದರೆ ಅದಕ್ಕೆ ತೊಂದರೆ ನೀಡುವುದು ಬೇಡ, ಹಾಗೇ ತೊಂದರೆ ನೀಡುವವರನ್ನು ಜನರೇ ವಿರೋಧಿಸಬೇಕು, ಎಲ್ಲರಿಗೂ ಸಮಾಜದಲ್ಲಿ ಬದುಕುವ ಸಮಾನವಾದ ಹಕ್ಕಿದೆ, ಇಲ್ಲಿ ನೀರಿನ ವಿಚಾರ ಇಷ್ಟುಕೊಂಡು ರಾಜಕೀಯ ಮಾಡಬಾರದು ಎಂದು ಸಮಾಜ ಸೇವಕ ಫೈಟರ್ ರವಿ ಹೇಳಿದರು.
ನಾಗಮಂಗಲ ಪಟ್ಟಣದ ಬಸವೇಶ್ವರ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಸ್ಥರು ಸ್ವಲ್ಪ ಎಚ್ಚರ ವಹಿಸಬೇಕಾದ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ಜನರ ಆರೋಗ್ಯ ಪ್ರಮುಖವಾಗಿದ್ದು, ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ನಡೆಸುತ್ತೇನೆ. ಅದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು. ಜನರು ಆರೋಗ್ಯ ಸಮಸ್ಯೆಯನ್ನು ಮುಚ್ಚಿಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಗ್ರಾಮದ ಮುಖಂಡ ಸ್ವಾಮಿ ಮಾತನಾಡಿ, ನಮ್ಮ ಗ್ರಾಮದ ಸಮಸ್ಯೆಯನ್ನು ಅರಿತು ಪುಟ್ಟ ಗ್ರಾಮವಾದರೂ ಅದಕ್ಕೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಿರುವ ಫೈಟರ್ ರವಿ ಅವರನ್ನು ಅಭಿನಂದಿಸುತ್ತೇವೆ. ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೋರಾಟ ಮಾಡಬೇಕೇ ಹೊರತು ಇಲ್ಲಸಲ್ಲದ ರಾಜಕೀಯ ಮಾಡುವುದು ಸರಿಯಲ್ಲ. ಅಭಿವೃದ್ಧಿ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಹಾಗೆ ಮಾಡಿದಾಗ ಮಾತ್ರವೇ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಗ್ರಾಮಸ್ಥರು ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಎಲ್ಲರಿಗೂ ಸಿಹಿ ಹಂಚಿದರು. ನಂತರ ಗ್ರಾಮಸ್ಥರು ಸಮಾಜ ಸೇವಕ ಫೈಟರ್ ರವಿ ಅವರನ್ನು ಸನ್ಮಾನಿಸಿದರು. ಇದೇ ಸಂದರ್ಭ ಬಸವಣ್ಣನ ದೇವಾಲಯ ಅಭಿವೃದ್ಧಿ ಗೆ ಗ್ರಾಮಸ್ಥರು ಮನವಿ ಮಾಡಿದಾಗ ಫೈಟರ್ ರವಿ ಅವರು ದೇವಾಲಯಕ್ಕೆ 25 ಸಾವಿರ ಸಹಾಯ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ವಸಂತಲಕ್ಷ್ಮೀ ಅಶೋಕ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್, ಗ್ರಾಮಸ್ಥರಾದ ರಾಜಮುಡಿ, ಜಯರಾಮ್, ಕೃಷ್ಣಪ್ಪ, ತಿರುಮಲಯ್ಯ, ಅಶೋಕ್, ಪ್ರಸಾದ್, ರಮೇಶ್, ಸಾಗರ್, ಗಿರೀಶ್ ಮುಖಂಡರಾದ ನರಸಿಂಹ, ಅರ್ಜುನ್, ಪವನ್ ಮತ್ತು ದರ್ಶನ್ ಭಾಗಹಿಸಿದ್ದರು.




