ಗೃಹಲಕ್ಷ್ಮಿ ಯೋಜನೆಯಡಿ ಮಂಡ್ಯ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಜನವರಿ 2024 ರಿಂದ ಜನವರಿ 2025 ರವರೆಗೆ ರೂ 1099.09 ಕೋಟಿ ಅನುದಾನ ನೀಡಲಾಗಿದೆ ಎಂದು ಮಂಡ್ಯ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಒಟ್ಟು 4,48,769 ಅರ್ಹ ಫಲಾನುಭವಿಗಳಿದ್ದು , ಜನವರಿ ಮಾಹೆಯ ಗೃಹಲಕ್ಷಿ ಹಣವನ್ನು ಡಿ.ಬಿ.ಟಿ. ಮೂಲಕ ಪಾವತಿಸಲಾಗುತ್ತಿದೆ ಎಂದರು.
ಜನವರಿ ಮಾಹೆಯಲ್ಲಿ ರೂ 30.73 ಕೋಟಿ ಹಣವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದ್ದು, ಬಾಕಿ ಹಣವನ್ನು ಶೀಘ್ರವೇ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು, 1278 ಫಲಾನುಭವಿಗಳು ಐ.ಟಿ/ಜಿ.ಎಸ್.ಟಿ ತೆರಿಗೆದಾರರಲ್ಲವೆಂದು ಗೂಗಲ್ ಶೀಟ್ ಮೂಲಕ ಕೇಂದ್ರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಒಟ್ಟು 4,47,166 ಫಲಾನುಭವಿಗಳು
ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 4,47,166 ಫಲಾನುಭವಿಗಳಿದ್ದು, ಡಿಸೆಂಬರ್ ಮಾಹೆಯಲ್ಲಿ ರೂ 23.35 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, 5 ಕೆ.ಜಿ ಪಡಿತರದ ಬದಲು ಹಣ ನೀಡುವ ಯೋಜನೆ ಜಾರಿಗೊಳಿಸದಾಗಿನಿಂದ ರೂ 402.06 ಕೋಟಿ ಅನುದಾನವನ್ನು ಜಿಲ್ಲೆಯ ಅರ್ಹ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
2025 ಫೆಬ್ರವರಿ ಮಾಹೆಯಿಂದ ನೇರ ನಗದು ಬದಲು ಅಕ್ಕಿ ವಿತರಿಸಲಾಗುವುದು, ಫೆಬ್ರವರಿ ಮಾಹೆಯ ಹೆಚ್ಚುವರಿ ಅಕ್ಕಿಯನ್ನು ಮಾರ್ಚ್ ಮಾಹೆಯಲ್ಲಿ ವಿತರಿಸಲಾಗುವುದು ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ರೂ.19.69 ಕೋಟಿ
ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 2025 ಮಾರ್ಚ್ ಮಾಹೆಯಲ್ಲಿ ಒಟ್ಟು 64.19 ಲಕ್ಷ ಟಿಕೇಟ್ ಪಡೆದು ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ. ಇದರಿಂದ ರೂ 19.69 ಕೋಟಿ ರೂ ವೆಚ್ಚವಾಗಿದೆ., ಶೇ 67.28 ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 5,21,781 ಅರ್ಹ ಗ್ರಾಹಕರಿದ್ದು ಮಾರ್ಚ್ ಮಾಹೆಯಲ್ಲಿ 1.70 ಕೋಟಿ ವಿದ್ಯುತ್ ಯುನಿಟ್ ಬಳೆಕೆಯಾಗಿದೆ, ಇದಕ್ಕಾಗಿ ಸರ್ಕಾರ ರೂ 14.89 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ, ಜಿಲ್ಲೆಯಲ್ಲಿ ಶೇ 97.05 ಜನರು ಗೃಹಜ್ಯೋತಿ ವಿದ್ಯುತ್ ಬಳಸಿಕೊಳ್ಳುತ್ತಿದ್ದಾರೆ ಎಂದರು
ಯುವ ನಿಧಿ ಯೋಜನೆಯಡಿ 4702 ಫಲಾನುಭವಿಗಳಿದ್ದು, ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ರೂ 7.12 ಕೋಟಿ ಹಣವನ್ನು ಡಿ.ಬಿ.ಟಿ ಯ ಮೂಲಕ ಹಣವನ್ನು ನೀಡಲಾಗಿದೆ, ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಶೇ 75.41 ರಷ್ಟು ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿ
ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ ಮಾತನಾಡಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿಯಾದಂತೆ, ಅಧಿಕಾರಿಗಳು ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಎಲ್ಲಾ ಕಾರ್ಯಗಳನ್ನು ಕೈಗೊಂಡಿದ್ದಾರೆ ಎಂದರು.
ನ್ಯಾಯಬೆಲೆ ಅಂಗಡಿಯ ಮಾಲೀಕರು ಪಡಿತರ ವಿತರಿಸುವ ಸಂದರ್ಭದಲ್ಲಿ ಸಾರ್ವಜನಿಕರ ಬಳಿ ಯಾವುದೇ ಹಣ ಪಡೆಯದೆ ಪಂಡಿತರವನ್ನು ನೀಡಬೇಕು, ವ್ಯವಸ್ಥೆಯನ್ನು ಸರಿ ಮಾಡಬೇಕಾಗಿದೆ, ಜಿಲ್ಲೆಯಾ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಪಡೆಯುತ್ತಿದ್ದರೆ ಸಾರ್ವಜನಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಧನುಷ್, ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಪ್ರಶಾಂತ್ ಬಾಬು ಕೆ.ಸಿ ಮತ್ತು ರಾಜೇಂದ್ರ ಎಸ್.ಹೆಚ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯರುಗಳಾದ ರುದ್ರಪ್ಪ, ವೀಣಾ, ಬಸವರಾಜು, ಮೊಹಮ್ಮದ್ ಅನ್ಸರ್, ಅನ್ಸರ್ ಪಾಷಾ, ರಮೇಶ್, ಪಿ ಮಾದೇಶ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು




