ಪಾಂಡವಪುರ ತಾಲ್ಲೂಕಿನ ಬೆಳ್ಳಾಳೆಯಿಂದ ಪ್ರಾರಂಭವಾದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕಾಂಗ್ರೆಸ್ ವರಿಷ್ಟೆ ಸೋನಿಯಾ ಗಾಂಧಿ ಭಾಗಿಯಾಗಿ ಮಗನ ಜೊತೆ ಹೆಜ್ಜೆ ಹಾಕಿದರು.
ಪಾಂಡವಪುರದಿಂದ ನಾಗಮಂಗಲದೆಡೆಗೆ ಪಾದಯಾತ್ರೆ ಸಾಗುತ್ತಿರುವಾಗ ದಾರಿ ಮಧ್ಯೆ ಸೋನಿಯಾ ಗಾಂಧಿ ಅವರ ಶೂ ಲೇಸ್ ಬಿಚ್ಚಿಕೊಂಡಿತು. ಕೂಡಲೇ ರಾಹುಲ್ ಗಾಂಧಿ ಅವರು ರಸ್ತೆ ಮಧ್ಯೆ ಕುಳಿತು, ತನ್ನ ತಾಯಿಯ ಶೂ ಲೇಸ್ ಅನ್ನು ಕಟ್ಟಿ ತಾಯಿಯೊಂದಿಗೆ ಮುಂದೆ ಸಾಗಿದರು.
ತಾಯಿಯ ಶೂ ಲೇಸ್ ಕಟ್ಟಿದ ರಾಹುಲ್ ಗಾಂಧಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಲ್ಲಿ ದೊಡ್ಡ ಮಟ್ಟದಲ್ಲಿ ಶೇರ್ ಆಗಿ ವೈರಲ್ ಆಗುತ್ತಿದೆ. ಈ ಫೋಟೋವನ್ನು ಕಾಂಗ್ರೆಸ್ ಪಕ್ಷ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಅಮ್ಮಎಂಬ ವಿವರಣೆ ನೀಡಿ, ಜೊತೆಯಲ್ಲೇ ಲವ್ ಸಿಂಬಲ್ ಕೂಡಾ ಹಾಕಿದೆ.
ಮುಂದುವರೆದು ಮತ್ತೊಂದು ಟ್ವಿಟ್ನಲ್ಲಿ “ತಾಯಿಯನ್ನು ಗೌರವಿಸುವವರು, ಕಾಳಜಿಯನ್ನು ತೋರುವವರು ಮಾತ್ರ ತಾಯ್ನೆಲವನ್ನೂ ಗೌರವಿಸಬಲ್ಲರು’ ಎಂದು ಬರೆದುಕೊಂಡಿದೆ.
ಬಾಲಕಿಯ ಮೈದಡವಿದ ಸೋನಿಯಾ ಗಾಂಧಿ
ಪಾದಯಾತ್ರೆಯ ವೇಳೆ ಕಾಲು ತೊಡರಿಕೊಂಡು ಬಿದ್ದ ಬಾಲಕಿ ಹತ್ತಿರ ತೆರಳಿದ ಸೋನಿಯಾ ಗಾಂಧಿ ಅವರು, ಬಾಲಕಿಯ ಬೆನ್ನು ಸವರಿ ಮಾತನಾಡಿಸಿದರು. ರಾಹುಲ್ ಗಾಂಧಿ ಕೂಡ ಬಾಲಕಿಯನ್ನು ಪ್ರೀತಿಯಿಂದ ಮಾತನಾಡಿಸಿ, ಬಾಲಕಿಗೆ ಚಾಕೊಲೇಟ್ ಕೊಟ್ಟು ಕಳುಹಿಸಿದರು.
ವಿಶೇಷ ಚೇತನರು ಭಾಗಿ

ಐದನೇ ದಿನದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜತೆಗೆ ವಿಶೇಷಚೇತನರು ಭಾಗವಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಾಜಿ ಸಚಿವೆ ಉಮಾಶ್ರೀ ಅವರು ವಿಶೇಷ ಚೇತನರು ವೀಲ್ ಚೇರ್ಗಳನ್ನು ತಳ್ಳಿಕೊಂಡು ರಾಹುಲ್ ಜತೆಗೆ ನಡೆದರು. ಈ ಸಂದರ್ಭದಲ್ಲಿ ವೀಲ್ ಚೇರ್ನಲ್ಲಿ ಕುಳಿತಿದ್ದವರ ಕೈ ಹಿಡಿದುಕೊಂಡೇ ರಾಹುಲ್ ಸುಮಾರು ದೂರ ನಡೆಯುತ್ತಾ ಕುಶಲೋಪರಿ ವಿಚಾರಿಸಿದರು.
ಸೋನಿಯಾ ಗಾಂಧಿ ದಹಲಿಗೆ
ಬೆಳಿಗ್ಗೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಸೋನಿಯಾ ಗಾಂಧಿ ಅವರು ಅಮೃತಿ ಗ್ರಾಮದಿಂದ ಖರಡ್ಯ ಕೆರೆಯವರೆಗೆ ನಡೆದರು. ಭೋಜನ ವಿರಾಮ ಮುಗಿಸಿ ಮೈಸೂರಿಗೆ ತೆರಳಿದ ಸೋನಿಯಾ ಗಾಂಧಿ ಅವರು, ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು.




