Thursday, May 16, 2024

ಪ್ರಾಯೋಗಿಕ ಆವೃತ್ತಿ

ಮಾಧ್ಯಮದವರ ಮೇಲೆ ಹಲ್ಲೆ : ಕ್ರಮ ಕೈಗೊಳ್ಳುವೆ ಎಂದ ಎಸ್ಪಿ ಯತೀಶ್

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸಣ್ಣ ಕಾರಣಕ್ಕೆ ಮಾಧ್ಯಮದ ಇಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಎಸ್ಪಿ ಯತೀಶ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆಯಿತು.

ಪಾಂಡವಪುರ ತಾಲ್ಲೂಕಿನ ಜಕ್ಕನಹಳ್ಳಿಯ ಬಳಿ ಭಾರತ ಜೋಡೋ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಮಾಧ್ಯಮದ ಇಬ್ಬರಿಗೆ ಪೊಲೀಸರು ಚೆನ್ನಾಗಿ ಥಳಿಸಿ ಅವರ ತಲೆ ಮತ್ತು ಕುತ್ತಿಗೆಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಪೊಲೀಸರ ಹಲ್ಲೆಯಿಂದ ಸಿಟ್ಟಾದ ಪತ್ರಕರ್ತರು ಪಾದಯಾತ್ರೆ ಬಹಿಷ್ಕರಿಸುವುದಾಗಿ ತಿಳಿಸಿ ವಾಹನವನ್ನು ಮಧ್ಯದಲ್ಲಿಯೇ ನಿಲ್ಲಿಸಿದರು. ಈ ವಿಚಾರ ತಿಳಿದ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಂ.ರೇವಣ್ಣ, ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಮೊದಲಾದವರು ಮಾಧ್ಯಮದವರ ಸಿಟ್ಟನ್ನು ಶಮನಗೊಳಿಸಿ ರಾಹುಲ್ ಗಾಂಧಿಯವರ ಪಾದಯಾತ್ರೆ ಸ್ಥಳಕ್ಕೆ ಕರೆತಂದರು.

ಈ ವಿಷಯ ತಿಳಿದ ಡಿ.ಕೆ.ಶಿವಕುಮಾರ್ ಮಾಧ್ಯಮ ಮಿತ್ರರ ಬಳಿ ಬಂದು ಅವರ ಅಹವಾಲು ಆಲಿಸಿ ಸ್ಥಳಕ್ಕೆ ಎಸ್ಪಿ ಯತೀಶ್ ಅವರನ್ನು ಕರೆಸಿದರು. ಸ್ಥಳಕ್ಕೆ ಬಂದ ಎಸ್ಪಿ ಯತೀಶ್ ಅವರನ್ನು ಪತ್ರಕರ್ತರು ತರಾಟೆಗೆ ತೆಗೆದುಕೊಂಡರು. ಆಗ ಎಸ್ಪಿ ಯತೀಶ್ ಮಾತನಾಡಿ, ಪಾದಯಾತ್ರೆ ಸಾಗುತ್ತಿದ್ದ ಸಂದರ್ಭದಲ್ಲಿ ನಮ್ಮ ಇಲಾಖೆಯ ಸಿಬ್ಬಂದಿಯವರಿಗೂ ಮಾಧ್ಯಮದವರಿಗೂ ಒಂದು ಸಣ್ಣ ಜಟಾಪಟಿ ನಡೆದಿದೆ. ಈ ಸಂದರ್ಭದಲ್ಲಿ ನಾನು ನಮ್ಮ ಸಿಬ್ಬಂದಿ ಕೆಳಕ್ಕೆ ಬಿದ್ದಾಗ ನಮ್ಮ ಇಲಾಖೆಯವರು ಒಂದಿಬ್ಬರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ದೃಶ್ಯ ಮಾಧ್ಯಮದಿಂದ ಮಾಹಿತಿ ಪಡೆದು ಹಲ್ಲೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ನಾವು ಮಾಧ್ಯಮದವರ ವಿರುದ್ಧ ಇಲ್ಲ, ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ನಾವು ಬೇಕೆಂದು ಹಲ್ಲೆ ಮಾಡಿಲ್ಲ, ಸ್ವಲ್ಪ ಹೊಂದಾಣಿಕೆಯ ಕೊರತೆಯಿಂದಾಗಿ ಈ ಘಟನೆ ನಡೆದಿದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದರು. ಇದಕ್ಕೆ ಪತ್ರಕರ್ತರು ಮುಂದೆ ಈ ರೀತಿಯ ಘಟನೆ ನಡೆದರೆ ಏನು ಮಾಡುತ್ತೀರಿ. ನಿಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಸಾರ್ವಜನಿಕರೊಂದಿಗೆ ಯಾವ ರೀತಿ ವರ್ತನೆ ಮಾಡಬೇಕು ಎಂಬುದನ್ನು ಮೊದಲು ತಿಳಿಸಿಕೊಡಿ. ಪೊಲೀಸರು ಏಕಾಏಕಿ ಹೊಡೆಯುತ್ತಾರೆ ಎಂದರೆ ಅವರೇನೋ ಸರ್ವಾಧಿಕಾರಿಗಳೇ? ವಯಸ್ಸಾದವರು, ಅಂಗವಿಕಲರನ್ನು ನೋಡದೆ ತಳ್ಳುವ ನಿಮ್ಮ ಇಲಾಖೆಯ ಸಿಬ್ಬಂದಿ ಮೊದಲು ಜನರ ಜೊತೆ ಸೌಜನ್ಯದಿಂದ ವರ್ತಿಸುವುದನ್ನು ಹೇಗೆಂದು ಕಲಿಯಲಿ ಎಂದೆಲ್ಲ ಕ್ಲಾಸ್ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಶಾಸಕ ಪ್ರಿಯಾಂಕ ಖರ್ಗೆ, ಶಾಸಕ ದಿನೇಶ್ ಗೂಳಿಗೌಡ, ಮಾಜಿ ಮೇಯರ್ ರಾಮಚಂದ್ರಪ್ಪ, ಮಂಡ್ಯ ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!