Thursday, September 19, 2024

ಪ್ರಾಯೋಗಿಕ ಆವೃತ್ತಿ

ಜೆಪಿ ಸ್ವಾತಂತ್ರ‍್ಯೋತ್ತರ ಭಾರತದ ಮಹತ್ವದ ಸಮಾಜವಾದಿ : ಮಾಯಿಗೌಡ

ಜಯಪ್ರಕಾಶ ನಾರಾಯಣ ಅವರು ಸ್ವಾತಂತ್ರ‍್ಯೋತ್ತರ ಭಾರತದಲ್ಲಿ ಮಹತ್ವದ ಪಾತ್ರವಹಿಸಿದ ಸಮಾಜವಾದಿ ಎಂದು ವಿಚಾರವಾದಿ ಕೆ.ಮಾಯಿಗೌಡ ತಿಳಿಸಿದರು.

ಮಂಡ್ಯನಗರದ ಕಲಾಮಂದಿರದ ಪಕ್ಕದಲ್ಲಿರುವ ಜೆ.ಪಿ.ಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಲೋಕನಾಯಕ ಜಯಪ್ರಕಾಶ ನಾರಾಯಣ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಜೆ.ಪಿ. ಅವರು ಮಹಾತ್ಮರ ಸಾಲಿಗೆ ಸೇರುತ್ತಾರೆ, ಗಾಂಧೀಜಿ ಅವರಿಗಿಂತ ಉದಾತ್ತ ಭಾವನೆ ಇಟ್ಟುಕೊಂಡದ್ದವರು ಜಯಪ್ರಕಾಶ ನಾರಾಯಣ ಎಂದು ಹೇಳಿದರು.

ದೇಶದಲ್ಲಿ ಇಂದಿರಾಗಾಂಧಿ ಅವರಿಂದ ಹೇರಲ್ಪಟ್ಟ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾಗಾಂಧಿ ಅವರ ಬಿಗಿಮುಷ್ಟಿಯಿಂದ ಭಾರತವನ್ನು ಕಾಪಾಡಿದವರು. ಕೇಂದ್ರದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ತರುವಲ್ಲಿ ಜಯಪ್ರಕಾಶ ನಾರಾಯಣರ ಪಾತ್ರ ಬಹಳ ದೊಡ್ಡದಿದೆ. ಈ ಎಲ್ಲಾ ಕಾರಣದಿಂದ ಅವರಿಗೆ ಜನಸಾಗರವೇ ಲೋಕನಾಯಕ ಎನ್ನುವ ಬಿರುದು ಕೊಟ್ಟಿದೆ ಎಂದು ಹೇಳಿದರು.

ಜೆಪಿ ಸ್ಮಾರಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೌಡ್ಲೆ ಚೆನ್ನಪ್ಪ ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಗೆ ಸವಾಲಾಗಿದ್ದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ,ದುರಾಡಳಿತಗಳ ವಿರುದ್ಧ ಜೆ.ಪಿ.ಯವರು ದೇಶದಾದ್ಯಂತ ಚಳುವಳಿಗೆ ಕರೆಕೊಟ್ಟು ಸಂಪೂರ್ಣ ಕ್ರಾಂತಿಯನ್ನು ಹುಟ್ಟು ಹಾಕಿದರು. ದೇಶದಾದ್ಯಂತ ನಡೆದ ಈ ಚಳುವಳಿಯ ಕರೆಗೆ ಓಗೊಟ್ಟು ಜನತೆ ಜೆಪಿ.ಮನದಾಳವನ್ನು ಅರಿತು ಚಳುವಳಿಗೆ ಧುಮಿಕಿದರು ಎಂದು ಹೇಳಿದರು.

ಇದರ ವಿರುದ್ಧವಾಗಿ ಅಂದಿನ ಕೇಂದ್ರ ಸರಕಾರ ತುರ್ತು ಪರಿಸ್ಥಿತಿ ಜಾರಿಗೆ ತಂದಿತು. ಸಾವಿರಾರು ಜನ ಮುಖಂಡರುಗಳ ಜೊತೆಗೆ ದೇಶಪ್ರೇಮಿಗಳು ಮತ್ತು ಪ್ರಜಾತಂತ್ರ ಪ್ರೇಮಿಗಳು ಸೆರೆಮನೆ ವಾಸವನ್ನು ಅನುಭವಿಸಿದ್ದಲ್ಲದೇ ಸುಮಾರು ಒಂದೂವರೆ ವರ್ಷಗಳ ಕಾಲ ಇವರು ಜೈಲಿನಲ್ಲಿರಬೇಕಾಯಿತು. ಜೈಲಿನಿಂದಲೇ ಎಲ್ಲಾ ದೇಶಭಕ್ತರು, ರಾಜಕೀಯ ಪಕ್ಷಗಳನ್ನು ಒಂದುಗೂಡಿಸಿದ್ದರಿಂದ ಜನತಾ ಪಕ್ಷ ರಚನೆಯಾಗಲು ಕಾರಣವಾಯಿತು. ತುರ್ತು ಪರಿಸ್ಥಿತಿಯ ನಂತರ ನಡೆದ ಮಹಾ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಸೋಲನ್ನು ಅನುಭವಿಸಿತು ಎಂದು ಹೇಳಿದರು.

1970ರ ದಶಕದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ಮಂಡ್ಯಕ್ಕೆ ಬಂದು ಭಾಷಣ ಮಾಡಿದ ಜೆಪಿ ವಿದ್ಯಾಸಂಸ್ಥೆಯ ಸ್ಥಳವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಮಾರಕ ಮಾಡುವಂತೆ ಪ್ರಯತ್ನ ಮಾಡಿ ಪತ್ರ ವ್ಯವಹಾರ ಮಾಡಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೆಪಿಯವರ ಸಂಪೂರ್ಣ ಕ್ರಾಂತಿಯ ಸಮಯದಲ್ಲಿ ಸಂಚಾಲಕರಾಗಿ ಕೆಲಸ ನಿರ್ವಹಿಸಿದ ಡಾ.ಟಿ.ಎಲ್.ಲಿಂಗಯ್ಯ ಅವರಿಗೆ ಅನಾರೋಗ್ಯ ನಿಮಿತ್ತ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು.

ಜೆಪಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಹೆಚ್.ನಾರಾಯಣ್, ವೈ.ಎಸ್.ಸಿದ್ದರಾಜು, ಬಿ.ವಿವೇಕಾನಂದ, ಪ್ರಜಾಸತ್ಯ ದಿನಪತ್ರಿಕೆ ಸಂಪಾದಕ ದಳವಾಯಿ ಕೋಡಹಳ್ಳಿ ಚಂದ್ರಶೇಖರ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!