ಮಂಡ್ಯ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪೋಟೋವನ್ನು ಸಭಾಂಗಣದ ಮೂಲೆಯಲ್ಲಿ ಕಾಫಿ,ಟೀ ಕಪ್ ಇಡುವ ಜಾಗದಲ್ಲಿಟ್ಟು ಅಗೌರವ ತೋರಿದ ಘಟನೆ ನಡೆದಿದೆ.
ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಇಂದು ಸಚಿವರಾದ ಕೆ. ಗೋಪಾಲಯ್ಯ ಹಾಗೂ ಕೆ. ಸಿ.ನಾರಾಯಣಗೌಡ ಅವರು ಕೆ.ಆರ್. ಪೇಟೆಯಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಬಗ್ಗೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಭಾಂಗಣದ ಗೋಡೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮಾತ್ರ ಇತ್ತು. ಆದರೆ ಅಂಬೇಡ್ಕರ್ ಅವರ ಫೋಟೋ ಗೋಡೆಯಲ್ಲಿ ಇರದೆ ಕಾಫಿ, ಟೀ ಇಡುವ ಟೇಬಲ್ ಮೇಲೆ ಮೂಲೆಯೊಂದರಲ್ಲಿ ಇಡಲಾಗಿತ್ತು.ಅಂಬೇಡ್ಕರ್ ಪೋಟೋದ ಸುತ್ತಲೂ ಕಾಫಿ,ಟೀ ಕಪ್ ಗಳನ್ನು ಇಡಲಾಗಿತ್ತು.
ಪತ್ರಿಕಾಗೋಷ್ಠಿ ಪ್ರಾರಂಭವಾಗಿ ಸ್ವಲ್ಪ ಹೊತ್ತಿನ ನಂತರ ಇದನ್ನು ಗಮನಿಸಿದ ಪತ್ರಕರ್ತರು ಸಚಿವರನ್ನು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಚಿವರಾದ ಗೋಪಾಲಯ್ಯ ಹಾಗೂ ನಾರಾಯಣ ಗೌಡರು ಒಂದು ಕ್ಷಣ ತಬ್ಬಿಬ್ಬಾದರು.
ಜಿಲ್ಲಾ ಪಂಚಾಯತ್ ಅಧಿಕಾರಿಗಳು ವಾಲ್ಮೀಕಿ ಜಯಂತಿಯ ಹಿನ್ನೆಲೆಯಲ್ಲಿ ಅಂಬೇಡ್ಕರ್ ರವರ ಫೋಟೋವನ್ನು ಗೋಡೆಯಿಂದ ತೆಗೆಯಲಾಗಿತ್ತು. ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ ಎಂದು ಸಮಜಾಯಿಷಿ ನೀಡಲು ಮುಂದಾದರು. ಆದರೆ ಇದನ್ನು ಒಪ್ಪದಾ ಪತ್ರಕರ್ತರು ಇನ್ನೊಮ್ಮೆ ಹೀಗೆ ಮಾಡಿದರೆ ಸುಮ್ಮನಿರಲ್ಲ ಎಂದರು.
ಕೂಡಲೇ ಅಂಬೇಡ್ಕರ್ ಅವರ ಫೋಟೋವನ್ನು ಸಿಬ್ಬಂದಿಗಳು ಗೋಡೆಗೆ ನೇತು ಹಾಕಿದರು. ನಂತರ ಪತ್ರಿಕಾ ಗೋಷ್ಠಿ ಮುಂದುವರೆಯಿತು




