Wednesday, October 23, 2024

ಪ್ರಾಯೋಗಿಕ ಆವೃತ್ತಿ

ಸೌಹಾರ್ದತೆಗೆ ಬೆಂಕಿ ಹಚ್ಚಲು ಬಂದಿರುವ ಕಿಡಿಗೇಡಿಗಳ ಬಗ್ಗೆ ಎಚ್ವರವಿರಲಿ:ಹೆಚ್ಡಿಕೆ

ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಅಧಿಕಾರಕ್ಕಾಗಿ ಸೌಹಾರ್ದತೆಗೆ ಬೆಂಕಿ ಹಚ್ಚಲು ಬಂದಿರುವ ಕಿಡಿಗೇಡಿಗಳ ವಿರುದ್ಧ ನಾಡಿನ ಜನತೆ ಎಚ್ಚರಗೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕರೆ ನೀಡಿದರು.

ಪಟ್ಟಣದ ಕನಕದಾಸ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಅವರ 131ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಧರ್ಮದ ಉಳಿವಿಗಾಗಿ ಮತ್ತೊಂದು ಧರ್ಮವನ್ನು ನಾಶ ಮಾಡುವ ಹುನ್ನಾರದ ಮೂಲಕ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚಲು ಕೆಲವು ಕೋಮುವಾದಿಗಳು ಹೊರಟಿದ್ದು, ಅವರ ವಿರುದ್ಧ ನಾಡಿನ ಜನತೆ ಒಂದಾಗುವ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವನ್ನು ಉಳಿಸಿಕೊಳ್ಳಬೇಕಿದೆ ಎಂದರು.

ಕೆಲವು ಮತಾಂಧರು ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ದೇಶದಲ್ಲಿ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿದ್ದಾರೆ. ಇಂತಹ ದುಷ್ಟ ಶಕ್ತಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಿ ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದ ಶಕ್ತಿಯನ್ನು ಬಳಸಿಕೊಂಡು ಸಮಾಜವನ್ನು ಹಾಳು ಮಾಡುವ ವ್ಯಕ್ತಿಗಳನ್ನು ಬಹಿಷ್ಕರಿಸಬೇಕೆಂದು ತಿಳಿಸಿದರು.

ದೇಶದಲ್ಲಿ ಅತಿಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ೨ನೇ ಸ್ಥಾನದಲ್ಲಿದೆ. ಆದರೆ ಆಳುವ ಸರ್ಕಾರಗಳು ಬಡವರು ಅವರ ಬದುಕನ್ನು ಉತ್ತಮವಾಗಿ ನಡೆಸುವಂತೆ ಆರ್ಥಿಕ ಶಕ್ತಿ ತುಂಬವಲ್ಲಿ ವಿಫಲವಾಗಿದೆ. ಇನ್ನೊಬ್ಬರನ್ನು ಅವಲಂಬಿಸಿಕೊಂಡು ಜೀವನ ನಡೆಸುವ, ವ್ಯವಸ್ಥೆಯನ್ನು ನಾಶ ಮಾಡುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂಬ ವಿಚಾರವನ್ನು ಅಂಬೇಡ್ಕರ್ ಅವರ ಜಯಂತಿಯ ಸಂದರ್ಭದಲ್ಲಿ ಹೇಳಲು ಬಹಳ ನೋವಾಗುತ್ತದೆ ಎಂದರು.

ಎಸ್‌ಸಿಪಿ, ಟಿಎಸ್‌ಪಿ ಅನುದಾನ ಬಂದ ನಂತರ ದಲಿತರ ಕೇರಿಯ ರಸ್ತೆಗಳು ಕಾಂಕ್ರೀಟ್ ಕಂಡಿವೆ. ಆದರೆ ಅವರ ಆರ್ಥಿಕ ಶಕ್ತಿಯನ್ನು ವೃದ್ಧಿಸಿ ಬಡತನವನ್ನು ಹೋಗಲಾಡಿಸುವಲ್ಲಿ ಯಶಸ್ಸು ಕಂಡಿಲ್ಲ, ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಸಮರ್ಪಕವಾಗಿ ಬಳಸಿಕೊಂಡು ಆರೋಗ್ಯ ಶಿಕ್ಷಣ ಉದ್ಯೋಗ ನೀಡಬೇಕೆಂದು ತಿಳಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಜ್ಞಾನ ಭಂಡಾರದ ಮೂಲಕ ಮಾದರಿ ಸಂವಿಧಾನಕ್ಕೆ ಬುನಾದಿ ಹಾಕಿದ್ದರು. ಪ್ರಜಾಪ್ರಭುತ್ವ ಹೊಂದಿರುವ ನಾಡಿನಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಲಿ ಮತ್ತು ಸಕಲ ಸೌಲಭ್ಯಗಳು ಸಿಗುವಂತಹ ರೀತಿಯಲ್ಲಿ ಸಂವಿಧಾನ ಬರೆದಿದ್ದಾರೆ, ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಬದುಕನ್ನು ರೂಡಿಸಿಕೊಂಡು ಸಮಾಜದಲ್ಲಿರುವ ತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ್ದಾರೆಂದು ಸ್ಮರಿಸಿದರು.

ಪ್ರತಿಯೊಂದು ವರ್ಗದ ಧ್ವನಿಯಾಗಿ ಸಂವಿಧಾನದಲ್ಲಿ ಶಕ್ತಿ ತುಂಬಿದ್ದಾರೆ. ಅಸ್ಪೃಶ್ಯತೆ ಹೋಗಲಾಡಿಸಬೇಕೆಂದು ಅಂಬೇಡ್ಕರ್ ಅವರು ಹೋರಾಟ ಮಾಡಿದ್ದರೂ ಕೂಡ ಇಂದಿಗೂ ಅಸ್ಪೃಶ್ಯತೆ ಯನ್ನು ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ಸಮಾನರೆಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಇಂದು ಜಾತಿ ಹೆಸರಿನಲ್ಲಿ ನಾಯಕನನ್ನು ಬೆಳೆಸುವ ಪ್ರಯತ್ನಗಳು ನಡೆಯುತ್ತಿವೆ.ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೇ ಬಡತನದಲ್ಲಿಯೇ ಬದುಕುತ್ತಿರುವುದನ್ನು ಕಾಣುತ್ತಿದ್ದೇವೆಂದು ವಿಷಾದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದ ಎದುರು ಡಾ. ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಂಕುಸ್ಥಾಪನೆ ನೆರೆವೇರಿಸಿದರು. ಮಳವಳ್ಳಿ- ಕೊಳ್ಳೇಗಾಲದ ರಸ್ತೆಗೆ “ಅಂಬೇಡ್ಕರ್ ರಸ್ತೆ” ಎಂಬ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ರಾಧ ನಾಗರಾಜು, ಉಪಧ್ಯಕ್ಷ ನಂದಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟಸ್ವಾಮಿ, ತಹಶಿಲ್ದಾರ್ ವಿಜಯಣ್ಣ, ಕೆ.ಎಂಎಪ್ ನಿಧೆ೯ಶಕ ವಿಶ್ವನಾಥ್, ಪುರಸಭೆ ಸದಸ್ಯರಾದ ಸಿದ್ದರಾಜು,ಜಯಸಿಂಹ, ನೂರುಲ್ಲಾ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರವಿ ಕಂಸಾಗರ, ಪುರಸಭೆ ಮಾಜಿ ಅಧ್ಯಕ್ಷ ದೊಡ್ದಯ್ಯ. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮಲ್ಲೇಗೌಡ, ಎಸ್‌ಸಿ ವಿಭಾಗ ತಾಲ್ಲೂಕು ಅಧ್ಯಕ್ಷ ನಂಜುಂಡಸ್ವಾಮಿ, ಬಿಜೆಪಿ ಮುಖಂಡ ಯಮದೂರು ಸಿದ್ದರಾಜು,ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚೇತನ್ ಕುಮಾರ್ ನಾಗರಾಜು ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!