Friday, September 20, 2024

ಪ್ರಾಯೋಗಿಕ ಆವೃತ್ತಿ

ಪುಟ್ಟ ಹೆಣ್ಣು ಮಕ್ಕಳ ಅತ್ಯಾಚಾರದ ಸಾವಿನಲ್ಲೂ ನಿಲ್ಲದ ರಾಜಕೀಯ

  •    ✍️ ಪೂರ್ಣಿಮಾ ಜಿ.
  • ಸಾಮಾಜಿಕ ಹೋರಾಟಗಾರರು, ಮಹಿಳಾ ಮುನ್ನಡೆ.

ಮಳವಳ್ಳಿಯಲ್ಲಿ ಪುಟ್ಟ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ, ನಾಗರೀಕ ಸಮಾಜವೆ ತಲೆ ತಗ್ಗಿಸುವಂತದ್ದು, ಇದಕ್ಕೆ ಇಡೀ ಸಮಾಜ ಹಾಗೂ ಸಂಘಟನೆಗಳು ಬೀದಿಗಿಳಿದು ವ್ಯಾಪಕ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿವೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕು, ಅದರಲ್ಲೂ ಗಲ್ಲು ಶಿಕ್ಷೆಯೇ ಆಗಬೇಕೆಂಬ ಕೂಗು ಪ್ರತಿಧ್ವನಿಸುತ್ತಿದೆ.

ಹೌದು ಮಳವಳ್ಳಿಯ ಪುಟ್ಟ ಕಂದ ಸಾಯುವ ಮುಂಚೆ ಅನುಭವಿಸಿರುವ ನೋವು ನರಕ ಯಾತನೆ ನೆನೆಸಿಕೊಂಡರೆ, ಎಂತಹ ಕ್ರೂರಿಗಳ ಕಣ್ಣಿನಲ್ಲಿಯೂ ನೀರು ತರಿಸುತ್ತದೆ.  ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂಬುದು ಮಹಿಳಾ ಮುನ್ನಡೆ ಸಂಘಟನೆಯ ಆಗ್ರಹ ಪೂರ್ವಕ ಒತ್ತಾಯವಾಗಿದೆ.

ಅದರಂತೆ ಈ ವಿಚಾರವನ್ನು ಇನ್ನೊಂದು ಆಯಾಮದಲ್ಲಿ ನೋಡುವ ಅಗತ್ಯವಿದೆ, ಆ ಮಗುವಿನ ಸಾವಿಗೆ ಅತ್ಯಾಚಾರಿ ಕಾಂತರಾಜು ಮಾತ್ರ ಕಾರಣವಲ್ಲ, ಜೊತೆಗೆ ಬೇಜಾಬ್ದಾರಿ ರಾಜಕಾರಣಿಗಳು, ಆಳುತ್ತಿರುವ ಸರ್ಕಾರ, ದುರ್ಬಲಗೊಂಡಿರುವ ಕಾನೂನು ಇವೆಲ್ಲವನ್ನೂ ಪ್ರಶ್ನಿಸುವ ಅಗತ್ಯವಿದೆ. ಅವರ ಜವಾಬ್ದಾರಿಗಳನ್ನು ನೆನಪಿಸುವ ಸಂದರ್ಭ ಇದಾಗಿದೆ.

ಇದೆ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯ 75 ರ ಸಂಭ್ರಮೊತ್ಸೋವದ ಸಂದರ್ಭದಲ್ಲಿ, ಆಡಳಿತದಲ್ಲಿರುವ  BJP ಸರ್ಕಾರ ಬಿಲ್ಕಿಸ್ ಭಾನು ಎಂಬ 5 ತಿಂಗಳ ಗರ್ಭಿಣಿ ಹೆಣ್ಣು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿತ್ತು. ಆ ಸಂದರ್ಭದಲ್ಲಿಯೂ ಸಮಾಜ ಮತ್ತು ಸಂಘಟನೆಗಳಿಂದ ದೊಡ್ಡ ಮಟ್ಟದ ಧ್ವನಿ, ಕೂಗು, ಪ್ರತಿರೋಧ ಎಲ್ಲವೂ ಮೂಡಿಬಂದ ಕಾರಣ, ಇದು ಮತ್ತೆ ಸುಪ್ರೀಂಕೋರ್ಟಿನ ವಿಚಾರಣೆಗೆ ಬಂದಿದೆ.

ಆದರೆ, ಒಬ್ಬ ಹೆಣ್ಣು ಮಗಳನ್ನು ಕ್ರೂರವಾಗಿ ಅತ್ಯಾಚಾರ ಮಾಡಿದ ಅದರಲ್ಲೂ ಹೊಟ್ಟೆಯೊಳಗೆ ಮತ್ತೊಂದು ಜೀವ ಇರಬೇಕಾದರೆ ನಡೆದ ಇಂತಹ ಹೀನಾಯ ಕೃತ್ಯ ಬರೀ ಬಿಲ್ಕಿಸ್ ಮೇಲೆ ಮಾತ್ರವಲ್ಲದೆ ಜಗತ್ತಿಗೆ ಇನ್ನೂ ಕಣ್ಣು ಬಿಡದ ಕಂದನ ಮೇಲೂ ನಡೆದ ಅತ್ಯಾಚಾರ ಮತ್ತು ಕ್ರೌರ್ಯವೇ ಆಗಿದೆ. ಇಂತದ್ದನ್ನು ಪ್ರೋತ್ಸಾಹಿಸುವ ಮತ್ತು ಅಪರಾಧಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದ್ದಲ್ಲದೆ, ಅತ್ಯಾಚಾರಿಗಳನ್ನು ಹಾರ ತುರಾಯಿಗಳ ಮೂಲಕ ಸ್ವಾಗತಿಸಿ, ಸಿಹಿ ತಿನಿಸು ತಿನಿಸಿದ್ದು, ನಾಚಿಕೆ ಗೇಡಿನ ಸಂಗತಿ, ಅಯೋಗ್ಯತನದ ಪರಮಾವಧಿಗೆ ಹಿಡಿದ ಕನ್ನಡಿಯಂತಿದೆ.


  • 2021 ರಲ್ಲಿ ಭಾರತದಾದ್ಯಂತ ಅತ್ಯಾಚಾರಗಳಲ್ಲಿ ಸುಮಾರು 20% ಹೆಚ್ಚಳ, ರಾಜಸ್ಥಾನವು ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ ಎಂದು NCRB ವರದಿ ತಿಳಿಸಿದೆ.

  • 2021 ರಲ್ಲಿ ಭಾರತದಲ್ಲಿ ಒಟ್ಟು 31,677 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ – ಅಲ್ಲದೇ ಪ್ರತಿದಿನ ಸರಾಸರಿ 87 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ.
  • ರಾಜಸ್ಥಾನದಲ್ಲಿ ದೇಶದಲ್ಲೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿವೆ.
  • ದೇಶದಲ್ಲಿ ಮಹಿಳೆಯರ ಮೇಲೆ ನಡೆದ 4,28,278 ಅಪರಾಧಗಳು ದಾಖಲಾಗಿವೆ.
  • ಭಾರತದಾದ್ಯಂತ 96.5% ಅತ್ಯಾಚಾರ ಪ್ರಕರಣಗಳಲ್ಲಿ, ಅಪರಾಧಿ ಮಹಿಳೆಗೆ ಪರಿಚಿತನೇ ಆಗಿರುತ್ತಾನೆ ಎಂದು ಅಂಕಿ-ಅಂಶ ಹೇಳುತ್ತದೆ. 
  • ಒಟ್ಟು 31,677 ಅತ್ಯಾಚಾರ ಪ್ರಕರಣಗಳಲ್ಲಿ 28,147 ಅಥವಾ ಸುಮಾರು 89% ಅತ್ಯಾಚಾರಗಳನ್ನು ಸ್ನೇಹಿತರು ( ಸಮೂಹ ಮಾಧ್ಯಮಗಳ ಸ್ನೇಹಿತರು ) ಸೇರಿದಂತೆ ಮದುವೆಯ ನೆಪದಲ್ಲಿ ಮೋಸ ಮಾಡುವವರು, ಬೇರ್ಪಟ್ಟ ಗಂಡಂದಿರು ಅಥವಾ ಕುಟುಂಬದ ಸ್ನೇಹಿತರು, ಉದ್ಯೋಗದಾತರು ಹಾಗೂ  ಇತರ ತಿಳಿದಿರುವ ವ್ಯಕ್ತಿಗಳು ಮಾಡಿದ್ದಾರೆ.
  • ದೇಶಾದ್ಯಂತ ಅಪ್ರಾಪ್ತ ಬಾಲಕಿಯರ ಮೇಲೆ ನಡೆದ 3,038 ಅತ್ಯಾಚಾರ ಪ್ರಕರಣಗಳಲ್ಲಿ ಹಾಗೂ ಒಟ್ಟಾರೆ ಪ್ರಕರಣಗಳಲ್ಲಿ ಸುಮಾರು 10% ರಷ್ಟು ಬಾಲಕಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಸುಮಾರು 64% ಅತ್ಯಾಚಾರ ಪ್ರಕರಣಗಳು 18 ರಿಂದ 30ರ ವಯಸ್ಸಿನ ಮಹಿಳೆಯರ ಮೇಲೆ ನಡೆದಿವೆ.

 

ಇದರ ಬೆನ್ನಲ್ಲೆ ಮುರುಘಾ ಮಠದ ಸ್ವಾಮಿ ಎಂದು ಹೆಸರು ಮಾಡಿ, ಸರ್ಕಾರದ ಹಣದಲ್ಲಿ ದೇಣಿಗೆ ಪಡೆದು ಐಷಾರಾಮಿ ಜೀವನದ ಜೊತೆಗೆ, ಕಳ್ಳಸ್ವಾಮಿಯಂತೆ ವೇಷ ಹಾಕಿ, ಮೈನೆರೆಯದ ಪುಟ್ಟ ಮಕ್ಕಳನ್ನು ಬಿಡದೆ ಅತ್ಯಾಚಾರ ಮಾಡಿ ತನ್ನ ಕಾಮತೃಷೆಗೆ ಹಲವಾರು ಹೆಣ್ಣು ಮಕ್ಕಳ ಬದುಕನ್ನು ಬಲಿಕೊಟ್ಟ ಕಾಮುಕ ಮುರುಘಾನ ವಿರುದ್ಧ, ಅಲ್ಲಿಯ ಹೆಣ್ಣು ಮಕ್ಕಳು ಧೈರ್ಯ ಮಾಡಿ ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಪ್ರಕರಣ ದಾಖಲು ಮಾಡಿದಾಗಲೂ, ಸಮಾಜ ಸಂಘಟನೆಗಳು ದೊಡ್ಡ ಪ್ರತಿರೋಧ ತೋರಿ ಸ್ವಾಮೀಜಿ ವೇಷ ತೊಟ್ಟ ಮುರಘಾನಿಗೆ ಛೀಮಾರಿ ಹಾಕಿದವು.

ಆದರೆ, ಆಗಲೂ ಇದೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಅವನನ್ನು ರಕ್ಷಿಸುವ ಪಣ ತೊಟ್ಟು ನಿಂತವು. ಪ್ರಕರಣ ದಾಖಲಾಗಿ ಆರೇಳು ದಿನ ಕಳೆದರೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲು ಸಿದ್ದವಿರಲಿಲ್ಲ. ಸರ್ಕಾರ, ಕಾನೂನು, ಆಸ್ಪತ್ರೆ ಸಿಬ್ಬಂದಿ ಎಲ್ಲರೂ ಆ ಕಾಮುಕನ ರಕ್ಷಣೆಗೆ ಟೊಂಕ ಕಟ್ಟಿ ನಿಂತದ್ದು, ತನಿಖಾ ಹಂತವನ್ನು ಗಮನಿಸಿದ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಾಗಲಿ ಯಾವ ರಾಜಕಾರಣಿಗಳಾಗಲಿ, ಸೆಲೆಬ್ರಿಟಿಗಳಾಗಲಿ ಬಾಯಿ ಬಿಚ್ಚಿ ಪ್ರತಿರೋಧ ತೋರದೆ ನಾಲಿಗೆ ಸತ್ತ ಮೂಗರಂತೆ, ಕಿವಿಕೇಳದ ಕಿವುಡರಂತೆ, ಕಣ್ಣು ಕಾಣದ ಕುರುಡರಂತೆ ವರ್ತಿಸಿದರು.

ಇತ್ತೀಚ್ಚಿಗೆ ಮಳವಳ್ಳಿಯಲ್ಲಿ ಅತ್ಯಾಚಾರವಾದ ಮಗುವಿನ ಕುಟುಂಬಕ್ಕೆ ಪೈಪೋಟಿ ಎಂಬಂತೆ ಬಿಜೆಪಿ, ಕಾಂಗ್ರೆಸ್‌, ಮತ್ತು ಜೆಡಿಎಸ್ ಪಕ್ಷದ ನಾಯಕರು ಭೇಟಿ ನೀಡಿ, ನ್ಯಾಯ ದೊರಕಿಸುವ ಮಾತಾನಾಡುತ್ತಿರುವುದು ಸ್ವಾಗತಾರ್ಹ. ಆದರೆ ಅತ್ಯಾಚಾರಿಗಳನ್ನು ಬಿಡುಗಡೆ ಮಾಡುವ ಸರ್ಕಾರದ ವಿರುದ್ದ, ಕಾಮುಕ ಸ್ವಾಮಿಗೆ ರಕ್ಷಣೆ ನೀಡುವ ಸರ್ಕಾರದ ವಿರುದ್ದ, ಧ್ವನಿ ಎತ್ತಿ ಪ್ರಶ್ನೆ ಮಾಡಿ ಶಿಕ್ಷೆಯಾಗುವಂತೆ ಹೇಳಿಕೆ ಕೊಡಲು ಸಾಧ್ಯವಾಗುತ್ತಿಲ್ಲವೇಕೆ ?

ಆತನ ಪ್ರಾಬಲ್ಯಗಳಿಗೆ ಹೆದರಿ ಬಾಯಿಬಿಚ್ಚದ ವಿರೋಧ ಪಕ್ಷಗಳ ಹೇಡಿತನ ಮತ್ತು ತಾಕತ್ ಇಲ್ಲದ ನಾಯಕರು ಈ ದಿನ ಮಳವಳ್ಳಿ ಮಗುವಿಗೆ ನ್ಯಾಯ ಕೊಡಿಸುವ ಮಾತನಾಡುತ್ತಿರುವುದು ಹೇಡಿಯ ಸಂಗತಿ ಅಲ್ಲವೇ?. ಬಿಲ್ಕಿಸ್ ಭಾನುವಿನ ನೋವಿಗೆ ಯಾಕೆ ನ್ಯಾಯ ನೀಡದೆ ಅತ್ಯಾಚಾರಿಗಳ ಪರನಿಂತರು ? ಮುರುಘಾ ಮಠದ ಕಾಮುಕ ಸ್ವಾಮಿಯ ವಿಚಾರಕ್ಕೆ ಯಾಕೆ ಯಾರು ಒಂದೇ ಒಂದು ಹೇಳಿಕೆ ನೀಡಲಿಲ್ಲ ?  ಆ ಅಪ್ರಾಪ್ತ ಹೆಣ್ಣು ಮಕ್ಕಳ ನೋವು, ಕೂಗು ಕೇಳಲಿಲ್ಲವೇ ಅಥವಾ ಅವನನ್ನು ಪ್ರತಿರೋಧಿಸುವ ತಾಕತ್ತು ಯಾರಿಗೂ ಇರಲಿಲ್ಲವೇ ಎಂಬುದು ಪ್ರಶ್ನೆ…?

ಈ ದಿನ ಆಳುತ್ತಿರುವ ಸರ್ಕಾರಗಳಲ್ಲೂ, ವಿರೋಧ ಪಕ್ಷಗಳಲ್ಲೂ, ಶಾಸಕರು, ಸಂಸದರನ್ನು ಒಳಗೊಂಡಂತೆ  ಕೆಲ ರಾಜಕಾರಣಿಗಳು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಲೈಂಗಿಕ ಕಿರುಕುಳ ನೀಡಿ, ಜೈಲಿಗೆ ಹೋಗಿ ಬಂದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ. ಇವರ ಕಾಮ ಪೂರಾಣದ ಸಿಡಿಗಳು, ವಾಯ್ಸ್ ರೆಕಾರ್ಡ್‌ ನ ಆಡಿಯೋಗಳು ಎಲ್ಲಾ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ. ಒಟ್ಟಾರೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಮಾಡುವವರು ಮತ್ತು ದೌರ್ಜನ್ಯ ಮಾಡುವವರನ್ನು ರಕ್ಷಣೆ ಮಾಡುವವರು. ನೊಂದ ಮಗುವಿನ ಕುಟುಂಬಕ್ಕೆ ನ್ಯಾಯ ಕೊಡಿಸುವ ನಾಟಕವಾಡುತ್ತಿರುವುದು, ಭೂತದ ಬಾಯಲ್ಲಿ ಭಗವದ್ಗೀತೆ ಎಂಬ ಗಾದೆ ಮಾತಿನಂತಾಗಿದೆ.

ಆದರೆ ಇದೆಲ್ಲ ಬರೀ ತಂತ್ರಗಾರಿಕೆ, ಸತ್ತ ಮಗುವಿನ ಸಾವಿನ ಮನೆಯನ್ನು ರಾಜಕೀಯ ಕ್ಷೇತ್ರವನ್ನಾಗಿಸಿ ತಾ ಮುಂದು.. ನಾ ಮುಂದು.. ಎಂದು ಎಲ್ಲಾ ಪಕ್ಷದವರು ನಾಟಕದ ಮಾತುಗಳನ್ನಾಡಿ ಲಕ್ಷಗಟ್ಟಲೆ ಪರಿಹಾರ ಕೊಟ್ಟರೆ ಮಗುವಿನ ಸಾವಿಗೆ ನ್ಯಾಯ ಸಿಗುವುದಿಲ್ಲ. ಬದಲಿಗೆ ಕಾನೂನನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಸತ್ ನಲ್ಲಿ ಚರ್ಚಿಸಿ ಸರಿಯಾದ ರೀತಿಯಲ್ಲಿ ಜಾರಿ ಮಾಡುವ ಯೋಗ್ಯತೆ ಇರಬೇಕು.

ಇದೆ ಮಂಡ್ಯದ ನೆಲದಲ್ಲಿ 2012 ಮತ್ತು 2013 ರ ಸಾಲಿನಲ್ಲಿ ಸರಣಿಯಂತೆ ಪುಟ್ಟ ಮಕ್ಕಳ ಮೇಲಿನ ಅತ್ಯಾಚಾರ ಕೊಲೆಗಳು ನಡೆದವು. ಮಂಡ್ಯದ ಪ್ರಗತಿಪರ ಸಂಘಟನೆಗಳು, ನಾಗರೀಕ ಸಮಾಜ ಬೀದಿಗಿಳಿದು ದೊಡ್ಡ ಹೋರಾಟವನ್ನೆ ನಡೆಸಿ ಪೋಕ್ಸೊ ಕಾಯ್ದೆಯಡಿ ಅಪರಾಧಿಗೆ ಶಿಕ್ಷೆಯಾಗಬೇಕೆಂದು ಜಿಲ್ಲಾಡಳಿತದ ಮೇಲೂ ಒತ್ತಡವನ್ನು ತರುವಂತ ಕೆಲಸವನ್ನು ಮಾಡಿದವು. ಅದರಲ್ಲಿ ನುಗ್ಗಳ್ಳಿ ಮಗುವಿನ ಪ್ರಕರಣವು ಒಂದಾಗಿತ್ತು.

ಕೋರ್ಟ್ ಹಂತದಲ್ಲಿ ಬೇಗನೆ ಪ್ರಕರಣದ ತನಿಖೆ ಮತ್ತು ಸಾಕ್ಷಿಗಳ ಹೇಳಿಕೆ ಎಲ್ಲವೂ ಪ್ರಾರಂಭವಾಯಿತು. ಈ ಪ್ರಕರಣಕ್ಕೆ ನ್ಯಾಯ ದೊರಕಿಸಬೇಕೆಂದು ಕುಟುಂಬದ ಜೊತೆಗೆ ಮಹಿಳಾ ಮುನ್ನಡೆ ಸಂಘಟನೆಯೂ ನಿರಂತರವಾಗಿ 5 ರಿಂದ 6 ವರ್ಷಗಳ ಕಾಲ ಅವರೊಟ್ಟಿಗೆ ಸಂಪರ್ಕಲ್ಲಿದ್ದು ನ್ಯಾಯದ ನಿರೀಕ್ಷೆಯಲ್ಲಿತ್ತು. ನೂರಕ್ಕೆ ನೂರರಷ್ಟು ನ್ಯಾಯ ಸಿಗಬೇಕಾದ ಪ್ರಕರಣಕ್ಕೆ ದುರಂತದ ತೀರ್ಪನ್ನು ನ್ಯಾಯಲಯ ನೀಡಿತ್ತು.

ಅಪರಾಧಿಯ ದೇಹದಿಂದ ಸಂಗ್ರಹಿಸಿದ್ದ ಸ್ಯಾಂಪಲ್, ಮಗುವಿನ ಬಟ್ಟೆಯ ಮೇಲಿದ್ದ ಸ್ಯಾಂಪಲ್ ಹೊಂದಾಣಿಕೆ ಯಾಗುತ್ತಿಲ್ಲ ಎಂಬ ಕಾರಣ ನೀಡಿ, ಅಪರಾಧಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಅಪರಾಧಿ ಅಪರಾಧವನ್ನು ಒಪ್ಪಿಕೊಂಡಿದ್ದು, ಸಾಕ್ಷಿಗಳ ಹೇಳಿಕೆಗಳೇಲ್ಲವೂ ಹೊಂದಾಣಿಕೆಯಾಗಿದ್ದಾಗಿಯೂ ಮಗುವಿಗೆ ನ್ಯಾಯ ಸಿಗಲಿಲ್ಲ, ವೈದ್ಯರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದ ಕ್ರೂರವಾಗಿ ಅತ್ಯಾಚಾರ ಮತ್ತು ಕೊಲೆಗೆ ಬಲಿಯಾದ ನುಗ್ಗಳ್ಳಿಯ ಪುಟ್ಟ ಕಂದನ ಸಾವಿಗೆ ನ್ಯಾಯ ಸಿಗಲಿಲ್ಲ.

ಈ ರೀತಿಯಾಗಿ ನ್ಯಾಯ ಸಿಗದ ಅದೆಷ್ಟೋ ಪ್ರಕರಣಗಳಿಂದಾಗಿ ಇವತ್ತಿನ ಸಮಾಜ ಮತ್ತು ನಾಗರೀಕರು ಕಾನೂನಿನ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಭಾವನಾತ್ಮಕವಾಗಿ ಮರಣ ದಂಡನೆ ವಿಧಿಸಿ, ಎನ್ ಕೌಂಟರ್ ಮಾಡಿ, ಗಲ್ಲಿಗೇರಿಸಿ ನಡುರಸ್ತೆಯಲ್ಲಿ ಜನರಿಂದ ಹೊಡೆದು ನೇಣಿಗೇರಿಸಿ ಎಂಬ ಉದ್ರೇಕದ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ಆಂಧ್ರದಲ್ಲಿ ವೈದ್ಯಯ ಮೇಲೆ ಅತ್ಯಾಚಾರವಾಗಿ ಕೊಲೆಯಾದಾಗ ಆರೋಪಿಗಳನ್ನುಎನ್ ಕೌಂಟರ್ ಮಾಡಲಾಯಿತು. ಆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳ ಪೂರವೇ ಹರಿಯಿತು. ಆದರೆ ಅದೇ ರೀತಿಯ ನ್ಯಾಯದಾನ ಹಲವು ಪ್ರಕರಣಗಳಿಗೆ ಆಗಲೇ ಇಲ್ಲ !

ಬಿಲ್ಕಿಸ್ ಭಾನುವಿನ ಅತ್ಯಾಚಾರಿಗಳು, ಮುರುಘಾ ಮಠದ ಕಳ್ಳಸ್ವಾಮಿ ರಾಜಕೀಯ ಪಕ್ಷಗಳ ಸಂಪರ್ಕದಲ್ಲಿದ್ದಾರೆ. ಎಲ್ಲಾ ಘಟನುಘಟಿ ರಾಜಕಾರಣಿಗಳು ಅವರ ಕಾಲಿಗೆ ಬಿದ್ದು ನಮಸ್ಕರಿಸುತ್ತಿತ್ತಾರೆ. ಈ ಕಾರಣಕ್ಕಾಗಿ ಅವರ ಮೇಲೆ ಸರ್ಕಾರವಾಗಲಿ, ರಾಜಕೀಯ ಪಕ್ಷಗಳಾಗಿ ಕಠಿಣ ಕ್ರಮಕ್ಕೆ ಒತ್ತಾಯಿಸಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ.  ಆಗಾದರೆ ಬಲಾಢ್ಯರಿಗೆ ನಮ್ಮ ದೇಶದಲ್ಲಿ ಪತ್ಯೇಕ ಕಾನೂನು ಇದೆಯೇ ?  ಕಾನೂನು ಎಲ್ಲರಿಗೂ ಸಮಾನವಾಗಿರಬೇಕಲ್ಲವೇ…? ನ್ಯಾಯ ಎಂಬುದು ಜಾತಿ, ಧರ್ಮ, ವರ್ಗ ಹಾಗೂ ಹಣ, ಅಧಿಕಾರದ ಮೇಲೆ ನಿರ್ಧಾರವಾಗಬಾರದು ಅಲ್ಲವೇ ?

ಮಂಡ್ಯದ ಜಿಲ್ಲಾಡಳಿತವು ಕೂಡಾ ಅತ್ಯಾಚಾರವಾದ ಕುಟುಂಬಕ್ಕೆ ಸಾಂತ್ವನ ಹೇಳುವ, ಸರಿಯಾದ ಕ್ರಮ ಜರುಗಿಸುವ ಹಾಗೂ ಅತ್ಯಾಚಾರಗಳು ನಡೆಯದಂತೆ ತಡೆಗಟ್ಟುವ ಕೆಲಸಕ್ಕೆ ಒತ್ತು ಕೊಡುವ ಬದಲು ಕುಂಭ ಮೇಳದಲ್ಲಿ ಮುಳುಗಿ ಹೋಗಿತ್ತು. ಜಿಲ್ಲಾಡಳಿತದ ಮೊದಲ ಆದ್ಯತೆ ಕುಂಭಮೇಳವಾಗಿತ್ತು. ಆನಂತರ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಗುವಿನ ಕುಟುಂಬವನ್ನು ಭೇಟಿ ಮಾಡಲಾಯಿತು. ಆದರೆ ಯಾವುದೇ ಆಡಳಿತಕ್ಕಾಗಲಿ, ಸರ್ಕಾರಕ್ಕಾಗಲಿ, ಹೆಣ್ಣು ಮಕ್ಕಳ ರಕ್ಷಣೆ ಹಾಗೂ ದೌರ್ಜನ್ಯ ತಡೆಗಟ್ಟುವುದು ಮುಖ್ಯವಾಗಬೇಕಲ್ಲವೇ ?

ಹಾಗೆಯೇ ನುಗ್ಗಳ್ಳಿ ಮಗುವಿನ ಅತ್ಯಾಚಾರ ಪ್ರಕರಣದಂತೆ ಮಳವಳ್ಳಿಯ ಮಗುವಿನ ಪ್ರಕರಣವಾಗಬಾರದು, ಅತ್ಯಾಚಾರ ಮಾಡಿದ ಕಾಂತರಾಜುವಿಗೆ ಶಿಕ್ಷೆಯಾಗಲೇಬೇಕು. ಅದೇ ದೃಷ್ಟಿಕೋನದಲ್ಲಿ ಮುರುಘ ಮಠದ ಕಾಮಿ ಸ್ವಾಮಿಗೂ ಶಿಕ್ಷೆಯಾಗಬೇಕು. ಅಲ್ಲಿಯೂ ನೊಂದಿರುವುದು ಪುಟ್ಟ ಅಪ್ರಾಪ್ತ ಹೆಣ್ಣು ಮಕ್ಕಳು, ಹಾಗೂ ಬಿಲ್ಕಿಸ್ ಭಾನುವಿಗೂ ನ್ಯಾಯ ಸಿಗಬೇಕು.

ಈಗ ಬೆಳಗಾವಿಯಲ್ಲಿ ಮತ್ತೊಂದು ಅಪ್ರಾಪ್ತ ಹೆಣ್ಣು ಮಗುವಿನ ಮೇಲೂ ಅತ್ಯಾಚಾರವಾಗಿದೆ, ಅಲ್ಲದೆ ಅದೇ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ದಲಿತ ಬಾಲಕಿ ಮೇಲೆ ಅತ್ಯಾಚಾರವಾಗಿದೆ, ರಾಜಕೀಯ ಪಕ್ಷಗಳು ಅಲ್ಲಿನ ಮಕ್ಕಳ ಕುಟುಂಬಗಳನ್ನು ಭೇಟಿ ಮಾಡಿ ಪರಿಹಾರವನ್ನು ಕಲ್ಪಿಸಬೇಕು. ಆ ಮಕ್ಕಳ ಪ್ರಕರಣಕ್ಕೂ ಧ್ವನಿ ಎತ್ತಬೇಕು. ಎಷ್ಟು ಜನ ರಾಜಕಾರಣಿಗಳು ಅಲ್ಲಿಗೂ ಭೇಟಿ ನೀಡುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಗಳು ಓಟಿನ ದಾಳವಾಗಬಾರದು. ಸಾವಿನ ಸೂತಕದ ಮನೆ, ರಾಜಕೀಯ ಕ್ಷೇತ್ರದ ರಣರಂಗವಾಗಬಾರದು. ಮಳವಳ್ಳಿಯ ಮಗುವಿಗೆ ನ್ಯಾಯ ಸಿಗುವುದು ಯಾವಾಗ ಎಂದರೆ, ಹಿಂದೆ ನಡೆದ ಘಟನೆಗಳಿಗೂ ನ್ಯಾಯ ಸಿಕ್ಕಾಗ. ನ್ಯಾಯವೆಂಬುದು ಸರ್ವರಿಗೂ ಸಮಾನವಾದಾಗ ಮಾತ್ರ, ಮಳವಳ್ಳಿಯ ಮಗುವಿಗೂ ನ್ಯಾಯ ದೊರಕಿಸಿದಂತಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!