Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿವೇಶನ ರಹಿತರಿಗೆ ಮಂಜೂರಾದ ಭೂಮಿ ನೀಡಲು ಪಟ್ಟಭದ್ರರ ಅಡ್ಡಿ

ಮಂಡ್ಯ ತಾಲೂಕಿನ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ವೇ ನಂ.190ರಲ್ಲಿ ಗ್ರಾಮ ನಿವೇಶನ ರಹಿತ ಬಡವರಿಗೆ ಮಂಜೂರಾಗಿರುವ ಭೂಮಿ ನೀಡಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಿಪಡಿಸುತ್ತಿವೆ ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರು ವರದಿ ಮಾಡಿದಂತೆ 11.30 ಗುಂಟೆ ಅನಧಿಕೃತ ಭೂಮಿ ಇದೆ, ಅದರಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿರುವ 2 ಎಕರೆ ಖುಷ್ಕಿ ಭೂಮಿಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಲು ಅಧಿಕಾರಸ್ಥರು ಹಾಗೂ ಹಣವಂತರು ಇನ್ನಿಲ್ಲದ  ಲಾಭಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಕೆಲವು ಪಟ್ಟಭದ್ರರು ನಿತ್ಯ ಅಧಿಕಾರಿಗಳಿಗೆ ಒತ್ತಡ, ಆಮಿಷ ಒಡ್ಡುತ್ತಿದ್ಧಾರೆಂದು ತಿಳಿದು ಬಂದಿದೆ, ಸರ್ವೇ ನಂ.190ರಲ್ಲಿನ ಭೂಮಿಗೆ ನಕಲಿ ತಹಶೀಲ್ದಾರ್, ಹೆಸರು ಸಹಿ (ಪೋರ್ಜರಿ) ಬಳಸಿ 35 ಗುಂಟೆ ಭೂಮಿ ಕೆಲವರು ಅನುಭೋಗಿಸುತ್ತಿದ್ದಾರೆ, ಆ ಕುರಿತು ನ್ಯಾಯಾಲಯದಲ್ಲಿ ಅನುಭೋಗದಾರನೇ ದಾವೆ ಹೂಡಿ ಬೆತ್ತಲಾಗಿದ್ದಾರೆ. ಆ ಪ್ರಕರಣದಲ್ಲಿ ಆಗಿನ ತಹಶೀಲ್ದಾರ್ ಪೋರ್ಜರಿ ಆಗಿರುವ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್‌ ಹಾಕಿದ್ದಾರೆ. ಹಾಗಾಗಿ ನ್ಯಾಯಾಲಯದಲ್ಲಿ ಅದು ಸರ್ಕಾರಿ ಭೂಮಿಯಾಗಿ ಉಳಿಯಲಿದೆ, ಜೊತೆಗೆ ಖಾತೆಯನ್ನು ರದ್ದುಪಡಿಸುವಂತೆ ಅಪರ ಜಿಲ್ಲಾಧಿಕಾರಿ ಮೌಖಿಕವಾಗಿ ತಿಳಿಸಿದ್ದರೂ ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇನ್ನೂ ಗ್ರಾಮದ ಸರ್ವೆ ನಂ.190 ಸರ್ಕಾರಿ ಗೋಮಾಳವಾಗಿದೆ, ದಿನಾಂಕ: 24-3-2022ರಂದು ಹೈಕೋರ್ಟ್‌ ನಿರ್ದೇಶನದಂತೆ ಕುಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಸುತ್ತೋಲೆಯಂತ ನಿವೇಶನರಹಿತರಿಗೆ ಜಿಲ್ಲಾಧಿಕಾರಿಗಳ ವಿವೇಚನೆ ಮೇರೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಶಾಸಕ ಎಂ.ಶ್ರೀನಿವಾಸ್‌ ಅವರು ಗ್ರಾಮದ ಸವೇ ನಂ.349ರಲ್ಲಿ 15 ಎಕರೆ ಗೋಮಾಳವಿದ್ದು ಅದನ್ನು ಅಳತ ಹದ್ದುಬಸ್ತ್ ಮಾಡಿ ಸಾರ್ವಜನಿಕ ಉಪಯೋಗಕ್ಕೆ ನೀಡುವಂತೆ ಎಸಿಗೆ ಪತ್ರ ಬರೆದಿದ್ದಾರೆ. ಇಷ್ಟಲ್ಲದೇ  ಗ್ರಾಮದಲ್ಲಿ 50 ಎಕರೆಯಷ್ಟು ಸರ್ಕಾರಿ ದಾಖಲೆಯಿರುವ ಭೂಮಿ ಇದೆ. ಪರಿಸ್ಥಿತಿ ಹೀಗಿದ್ದರೂ ಕೆಲವು ರಾಜಕೀಯ ಶಕ್ತಿಗಳು, ಕಂದಾಯ ಇಲಾಖೆ ಏಜೆಂಟರು ಹಾಗೂ ಭೂ ಒತ್ತುವರಿದಾರರು ನಿದೇಶನರಹಿತರಿಗೆ ನೀಡಲು ಮುಂದಾಗಿರುವ ಭೂಮಿ ಕುರಿತು ಸಾರ್ವಜನಿಕವಾಗಿ ಹಾಗೂ ಕೆಲ ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ಆತ ಕಟ್ಟಿ ನಿವೇಶನರಹಿತರ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ ಎಂದು ದೂರಿದರು.

ಬಹು ಮುಖ್ಯವಾಗಿ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರು ಒತ್ತಡ, ಅಮಿಷಗಳಿಗೆ ಒಳಗಾಗಿ ಕೆಲಸ ನಿರ್ವಹಿಸುವುದನ್ನು ಬಿಟ್ಟು ನಿವೇಶನರಹಿತರಿಗೆ ನ್ಯಾಯ ದೊರಕಿಸಿಕೊಡಲು ಜಿಲ್ಲಾಧಿಕಾರಿ  ಅವರು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.

ಸರ್ವೇ ನಂ.190ರಲ್ಲಿ ಗುರುತಿಸಿರುವ ಭೂಮಿ 2018ರಿಂದ ಹೇಗೆ ಒತ್ತುವರಿಯಾಯಿತು ಎಂಬ ಕುರಿತು ಇಂಟಲಿಜೆನ್ಸ್ ವರದಿ ಪರಿಶೀಲನೆ ನಡೆಸಲಿ ಅಥವಾ ಬಹಿರಂಗ ಚರ್ಚೆಗೂ ಸಿದ್ಧರಿದ್ದೇವೆ ಎಂದರು.

ಅಹೋರಾತ್ರಿ ಪ್ರತಿಭಟನೆ

ಅ.27ರಿಂದ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು, ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 55 ದಲಿತ ಕುಟುಂಬಗಳಿದ್ದು ಅವರಿಗೆ ಅನ್ಯಾಯವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗಕ್ಕೆ ದೂರು ನೀಡಿ, ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಮುಖಂಡ ಎಂ.ವೈ.ಕೃಷ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!