Thursday, September 19, 2024

ಪ್ರಾಯೋಗಿಕ ಆವೃತ್ತಿ

ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ : ಸುಪ್ರೀಂಕೋರ್ಟ್ ಕಳವಳ


  • ದ್ವೇಷ ಭಾಷಣ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ 

  • ಧರ್ಮ ನಿರಾಪೇಕ್ಷ ದೇಶದಲ್ಲಿ ಒಂದು ಸಮುದಾಯದ ದ್ವೇಷ ಆಘಾತಕಾರಿ

“ಇದು 21 ನೇ ಶತಮಾನ, ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ?” ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ದ್ವೇಷದ ಭಾಷಣಗಳ ಮೇಲಿನ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು ದ್ವೇಷ ಭಾಷಣ ಮಾಡುವವರ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತು, ಅಲ್ಲದೇ ಈ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು.

ಭಾರತವು ಧರ್ಮ ನಿರಾಪೇಕ್ಷ ದೇಶವಾಗಿದೆ, ಆದರೆ ಈಗಿನ ಸ್ಥಿತಿ ಆಘಾತಕಾರಿಯಾಗಿದೆ, ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ಬೆದರಿಕೆಯನ್ನು ನಿಲ್ಲಿಸಲು, ತುರ್ತು ಮಧ್ಯಪ್ರವೇಶಿಸುವಂತೆ ಕೋರುವ ಮನವಿಗೆ ಕೇಂದ್ರ ಮತ್ತು ರಾಜ್ಯಗಳಿಂದ ಪ್ರತಿಕ್ರಿಯೆಯನ್ನು ಕೇಳಿತು.

ದೇಶಾದ್ಯಂತ ನಡೆಯುತ್ತಿರುವ ದ್ವೇಷದ ಅಪರಾಧಗಳು ಮತ್ತು ದ್ವೇಷದ ಭಾಷಣಗಳ ಬಗ್ಗೆ ವಿಶ್ವಾಸಾರ್ಹ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರಾದ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರು ಒಂದು ಸಮುದಾಯದ ಜನರನ್ನು ಸಂಪೂರ್ಣ ಬಹಿಷ್ಕಾರ ಮಾಡುವಂತೆ ಹಿಂದೂ ಸಭೆಯೊಂದರಲ್ಲಿ ಭಾಷಣ ಮಾಡಿದ್ದರು. ಮತ್ತೊಬ್ಬ ಭಾಷಣಕಾರ ಜಗತ್ ಗುರು ಯೋಗೇಶ್ವರ್ ಆಚಾರ್ಯ  “ನಮ್ಮ ದೇವಾಲಯಗಳ ಮೇಲೆ ಬೆರಳು ಎತ್ತುವ” ಯಾರಿಗಾದರೂ “ಕತ್ತು ಸೀಳಲು” ಮುಂದಾಗುವಂತೆ ದ್ವೇಷದ ಭಾಷಣ ಮಾಡಿದ್ದರು ಎಂದು ಉಲ್ಲೇಖಿಸಿದರು.

ದ್ವೇಷದ ಭಾಷಣಗಳ ವಿರುದ್ಧ ಸ್ವತಂತ್ರವಾಗಿ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರು ಮತ್ತು ಸರ್ಕಾರಗಳಿಗೆ ಕಠಿಣ ಆದೇಶ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟಿಗೆ ನ್ಯಾಯವಾದಿ ಕಪಿಲ್ ಸಿಬಲ್ ಧನ್ಯವಾದಗಳನ್ನು ತಿಳಿಸಿದಾಗ,  “ಇದು ನಮ್ಮ ಕರ್ತವ್ಯ ಎಂದು ನ್ಯಾಯಾಲಯ ಪ್ರತಿಕ್ರಿಯಿಸಿತು.

ತಮ್ಮ ಅರ್ಜಿಯಲ್ಲಿ ಅಬ್ದುಲ್ಲಾ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ದ್ವೇಷದ ಅಪರಾಧಗಳು ಮತ್ತು ದ್ವೇಷದ ಭಾಷಣಗಳನ್ನು ತಡೆಯಲು ಇತರ ಕಠಿಣ ನಿಬಂಧನೆಗಳನ್ನು ಹೇರುವಂತೆ ಕೋರಿದ್ದರು. ಆಡಳಿತಾರೂಢ ರಾಜಕೀಯ ಪಕ್ಷದ ಸದಸ್ಯರು ದ್ವೇಷಪೂರಿತ ಭಾಷಣಗಳನ್ನು ಮಾಡುವ ಮೂಲಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಭಯಭೀತರಾಗುತ್ತಿದ್ದಾರೆ ಎಂದು ಅವರು ದೂರಿದ್ದರು.

ಇತ್ತಿಚೇಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಭಾರತದಲ್ಲಿ ನಡೆಯುತ್ತಿರುವ ದ್ವೇಷದ ಭಾಷಣಗಳ ವಿರುದ್ದ ಮಾತನಾಡಿ, ಖಂಡನೆ ವ್ಯಕ್ತಪಡಿಸಿದ್ದರು.

ಅಲ್ಲದೆ “ಮಾನವ ಹಕ್ಕುಗಳ ಮಂಡಳಿಯ ಚುನಾಯಿತ ಸದಸ್ಯರಾಗಿ, ಜಾಗತಿಕ ಮಾನವ ಹಕ್ಕುಗಳನ್ನು ರೂಪಿಸುವ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಸೇರಿದಂತೆ, ಎಲ್ಲಾ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಭಾರತ ಹೊಂದಿದೆ” ಅದನ್ನು ಪಾಲಿಸಬೇಕೆಂದು  ಮುಂಬೈನಲ್ಲಿ ಮಾಡಿದ ಭಾಷಣದಲ್ಲಿ ಗುಟೆರಸ್ ಉಲ್ಲೇಖಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!