✍️ ಗಿರೀಶ್ ತಾಳಿಕಟ್ಟೆ
ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಆತ್ಮಕಥನವನ್ನು ತಿರುವಿಹಾಕುತ್ತಿದ್ದೆ. ಅವರು ತಮ್ಮ ಬಾಲ್ಯದ ದಿನಗಳನ್ನು ಕಟ್ಟಿಕೊಡುತ್ತಾ ವಿವರಿಸಿದ ಒಂದು ಘಟನೆ ನನ್ನನ್ನು ಕಾಡುತ್ತಿದೆ…..
“ಇದೇ ಸಮಯದಲ್ಲಿ ನಾಟಕ-ಬಯಲಾಟಗಳ ಸುಗ್ಗಿಯೂ ಏರ್ಪಡುತ್ತಿತ್ತು. ಕೆಲವು ನಾಟಕಗಳು, ಕೆಲವು ಪಾತ್ರಗಳು ಇಂದಿಗೂ ನನಗೆ ನೆನಪಿವೆ. ಜಮಖಂಡಿಯ ಅಪ್ಪಾಲಾಲ್ ಎನ್ನುವವರು ‘ಶ್ರೀ ಕೃಷ್ಣ ಪಾರಿಜಾತ’ ಬಯಲಾಟಕ್ಕೆ ಹೆಸರಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಅಪ್ಪಾಲಾಲ್ ಶ್ರೀಕೃಷ್ಣನ ಪೋಷಾಕಿನಲ್ಲಿ ಬಂದು ನಿಂತರೆ ನೋಡುವವರೆಲ್ಲಾ ಭಕ್ತಿ ಭಾವದಿಂದ ಕೈಮುಗಿಯುತ್ತಿದ್ದರು….”
ಕೇಳುವುದಕ್ಕೇ ಎಷ್ಟು ಹಿತವಾಗಿದೆಯಲ್ಲವೆ. ಕೂಡಿಬಾಳುವ ಸೋದರತೆಯನ್ನೂ, ಮುಗ್ಧತೆಯನ್ನೂ ತನ್ನೊಳಗೆ ಹಾಸುಹೊಕ್ಕಾಗಿಸಿಕೊಂಡಿದ್ದ ಭಾರತದ ಆತ್ಮಕ್ಕೀಗ ಭಾಗಶಃ ಲಕ್ವ ಹೊಡೆದಿದೆ. ಮುಸಲ್ಮಾನ ನಟರು ಪಾತ್ರ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಸಿನಿಮಾಗಳನ್ನೇ ‘ಬೈಕಾಟ್’ ಮಾಡುವಷ್ಟು ಹದಗೆಟ್ಟುಹೋಗಿವೆ ಮನಸ್ಸುಗಳು. ಶ್ರೇಷ್ಠತೆಯ ಅಹಮ್ಮು ಮತ್ತು ದ್ವೇಷದ ನಂಜುಗಳು ಮಿದುಳುಗಳಿಗೆ ಗೆದ್ದಲು ಹಿಡಿಸಿವೆ.
ಊಹ್ಞೂಂ, ಖಂಡಿತ ಇದು ನನ್ನ ಹಳೆಯ ಭಾರತವಲ್ಲ; ಇದು ಬೇರೆಯದೇ ಭಾರತ. ಹಾಗಾದರೆ ಎತ್ತ ಹೋಯಿತು ಆ ನನ್ನ ಭಾರತ? ಹುಡುಕುವ ಪುರಸೊತ್ತೊ ನಮಗಾದರೂ ಉಳಿದಿದೆಯಾ…..




