Friday, September 20, 2024

ಪ್ರಾಯೋಗಿಕ ಆವೃತ್ತಿ

ಹಾಲು ಉತ್ಪಾದಕರಿಗೆ ಕೊಟ್ಟಿದ್ದು 1ರೂ…ಕಿತ್ಕೊಂಡಿದ್ದು 124 ರೂ…

ಲೀಟರ್ ಹಾಲಿಗೆ 1 ರೂ ಹೆಚ್ಚಳ ಮಾಡಿ, ಪಶು ಆಹಾರದ ಬೆಲೆಯನ್ನು 125 ರೂ.ಗೆ ಏರಿಕೆ ಮಾಡುವ ಮೂಲಕ ಹಾಲು ಉತ್ಪಾದಕರಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮೋಸ ಮಾಡಿದೆ.

ಹಾಲು ಉತ್ಪಾದಕರನ್ನು ಆಗಾಗ್ಗೆ ವಂಚಿಸುವ ಕೆಲಸವನ್ನು ಈ ಹಿಂದೆಯೂ ಮಾಡಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ದೀಪಾವಳಿಯ ಉಡುಗೊರೆಯಾಗಿ ಅ.21ರಂದು‌ ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀ.ಹಾಲಿನ ದರವನ್ನು 1 ರೂ ಹೆಚ್ಚಿಸಿದೆ. ಈ ಬಗ್ಗೆ ಮನ್ ಮುಲ್ ವ್ಯವಸ್ಥಾಪಕ ನಿರ್ದೇಶಕರು ಪತ್ರಿಕೆಗಳಿಗೆ ಆದೇಶ ಪ್ರತಿ ನೀಡಿ ಭರ್ಜರಿ ಪ್ರಚಾರವನ್ನು ಪಡೆದಿದ್ದಾರೆ. ಆದರೆ ಹಾಲಿನ ದರ ಹೆಚ್ಚಳಕ್ಕೂ ಎರಡು ದಿನದ ಹಿಂದೆ ಅ.19 ರಂದು ಪ್ರತಿ 50 ಕೆ.ಜಿಯ ಪಶು ಆಹಾರದ ಬೆಲೆಯನ್ನು ನಿರ್ದಯವಾಗಿ 125 ರೂ.ಗೆ ಏರಿಕೆ ಮಾಡುವ ಮೂಲಕ ಹಾಲು ಉತ್ಪಾದಕರ ವಂಚನೆ ಮಾಡಿದೆ. ಇದನ್ನು ಮಾತ್ರ ಮಾಧ್ಯಮಗಳಿಗೆ ಕೊಟ್ಟಿಲ್ಲ.

ಮನ್ಮುಲ್ ಇಬ್ಬಗೆ ನೀತಿ
ಹಾಲಿಗೆ ಒಂದು ರೂ.ಹೆಚ್ಚಳ ಮಾಡುವ ಮೂಲಕ ರೈತರ ನೆರವಿಗೆ ನಿಂತಿದ್ದೇವೆ ಎಂದು ಪೋಸು ನೀಡಿದ ಜಿಲ್ಲಾ ಹಾಲು ಒಕ್ಕೂಟ, ಪಶು ಆಹಾರದ ದರವನ್ನು ಹೆಚ್ಚಿಸುವ ವಿಷಯವನ್ನು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗಷ್ಟೇ ತಿಳಿಸಿ ಮಾಧ್ಯಮಗಳಿಗೆ ತಿಳಿಸಿಲ್ಲ. ಹಾಲಿನ ದರ ಒಂದು ರೂ ಹೆಚ್ಚಿಸಿದ್ದನ್ನೇ ಭಾರೀ ಘನಾಂದಾರಿ ಕೆಲಸ ಎಂದು ಮಾಧ್ಯಮಗಳಿಗೆ ತಿಳಿಸಿದ ಮನ್ ಮುಲ್ ಎಂಡಿ ಪಶು ಆಹಾರ ದರವನ್ನು ನೂರಾರು ಪಟ್ಟು ಹೆಚ್ಚಿಸಿದ್ದನ್ನು ಮಾತ್ರ ಹೇಳಲೇ ಇಲ್ಲ.

ಏಕೆಂದರೆ ಮನ್ಮಲ್ ಇಬ್ಬಗೆ ನೀತಿ ಜನರ ಮುಂದೆ ಬೆತ್ತಲಾಗುವ ಭಯ ಆಡಳಿತ ಮಂಡಳಿಯದ್ದು. ಹಾಗಾಗಿ ಪಶು ಆಹಾರದ ಬೆಲೆಯನ್ನು 125 ರೂ.ಏರಿಕೆ ಮಾಡಿದ ಬಗ್ಗೆ ಎಲ್ಲೂ ಹೇಳಲೇ ಇಲ್ಲ. ಕೊನೆಗೆ ಇದು ಜನರಿಗೆ ಗೊತ್ತಾಗಿ,ಒಂದು ರೂ. ಕೊಟ್ಟು 124 ರೂ.ಕಿತ್ತುಕೊಂಡ ಮನ್ ಮುಲ್ ರೈತ ವಿರೋಧಿ ನೀತಿಯ ವಿರುದ್ಧ ಜನರು ಬಾಯಿಗೆ ಬಂದಂತೆ ಟೀಕಿಸುತ್ತಿದ್ದಾರೆ.

ಅ.21ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ಖರೀದಿ ದರವನ್ನು ನ.1ರಿಂದ 2023 ಮಾ.31ರವರೆಗೆ ಜಾರಿಗೆ ತಂದಿದ್ದು, ಖರೀದಿಸುವ ಪ್ರತಿ ಶೇ.4 ಜಿಡ್ಡು ಮತ್ತು ಶೇ.8.5ರಷ್ಟು ಜಿಡ್ಡೇತರ ಘನಾಂಶವಿರುವ ಹಾಲಿಗೆ ಪ್ರಸ್ತುತ ಸಂಘಗಳಿಗೆ 29.15 ರೂ ನೀಡಲಾಗುತ್ತಿದ್ದು, ನ.1ರಿಂದ 30.15 ರೂ ನೀಡಲಾಗುತ್ತಿದೆ. ಅಂತೆಯೇ ಉತ್ಪಾದಕರಿಗೆ ಪ್ರಸ್ತುತ 28.25 ರೂ ನೀಡಲಾಗುತ್ತಿದ್ದು, ಈ ಮೊತ್ತವನ್ನು 29.25 ರೂಗೆ ಹೆಚ್ಚಿಸಲಾಗಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ.

ಬೆಲೆ ಏರಿಕೆಗೆ ನಷ್ಟ ಕಾರಣ
ಅಲ್ಲದೆ ಮನ್ಮುಲ್ ವ್ಯಾಪ್ತಿಯಲ್ಲಿ ನಿತ್ಯ 9.84 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಮಳೆಯಿಂದಾಗಿ ಹಾಲು ಶೇಖರಣೆ ಪ್ರಮಾಣದಲ್ಲಿ ಅಗಿರುವ ಕುಸಿತ, ಹಸಿರು ಮೇವಿನ ಕೊರತೆ ಹಾಗೂ ಇತರೆ ಕಾರಣಗಳಿಂದ ಹಾಲು ಉತ್ಪಾದನಾ ವೆಚ್ಚ ಅಧಿಕವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವ ಅಗತ್ಯತೆ ಇರುವುದರಿಂದ ಖರೀದಿ ದರವನ್ನು ಪ್ರತೀ ಲೀಟರ್ ಹಾಲಿಗೆ 1 ರೂ ಹೆಚ್ಚಿಸಿರುವುದಾಗಿ ಒಂದೆಡೆ ಹೇಳಿಕೊಂಡಿದೆ.

ಮತ್ತೊಂದೆಡೆ ಪಶು ಆಹಾರ ದರ ಏರಿಕೆ ಬಗ್ಗೆ ನಷ್ಟದ ಕಾರಣ ನೀಡಲಾಗಿದೆ. ಪಶು ಆಹಾರ ಘಟಕಗಳ ಆರ್ಥಿಕ ಪರಿಸ್ಥಿತಿ ಪರಿಗಣಿಸಿ ಹಾಗೂ ನಿರೀಕ್ಷೆಗೂ ಮೀರಿ ಹೆಚ್ಚಾಗಿರುವ ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆಯಿಂದಾಗಿ ಉಂಟಾಗುತ್ತಿರುವ ನಷ್ಟ ಪರಿಗಣಿಸಿ ಕರ್ನಾಟಕ ಹಾಲು ಮಹಾಮಂಡಳವು ಡೈರಿಗೆ ಮಾರಾಟ ಮಾಡುವ ಪಶು ಆಹಾರ ದರವನ್ನು ಪರಿಷ್ಕರಿಸಿದೆ. ಅದರಂತೆ ಪ್ರತಿ 50 ಕೆ.ಜಿ.ಯ ನಂದಿನಿ ಗೋಲ್ಡ್ ಪಶು ಆಹಾರ 1040 ರೂ ಇದ್ದು, ಅದನ್ನು 1165 ರೂ.ಗೆ ಏರಿಕೆ ಮಾಡಲಾಗಿದೆ.ಹಾಗೆಯೇ 1160 ರೂ ಇದ್ದ ನಂದಿನಿ ಬೈಪಾಸ್ ಪಶು ಆಹಾರದ ದರವನ್ನು 1285 ರೂ.ಗೆ ಹೆಚ್ಚಿಸಲಾಗಿದೆ.

ಕರ್ನಾಟಕ ಹಾಲು ಮಹಾಮಂಡಳವೇ ಪಶು ಆಹಾರದ ದರ ಏರಿಕೆ ಮಾಡಿದ್ದರೂ, ಇದರಲ್ಲಿ ಸ್ಥಳೀಯ ಹಾಲು ಒಕ್ಕೂಟಗಳ ಅಭಿಪ್ರಾಯ ಕೇಳಿಲ್ಲವೇ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅಲ್ಲದೆ ಈ ಕಾರಣಕ್ಕಾಗಿಯೇ ಒಂದು ರೂ. ಹೆಚ್ಚಿಸಿ ಉತ್ಪಾದಕರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕರ ಬಾಯಲ್ಲಿ ಕೇಳಿ ಬರುತ್ತಿದೆ. ಇದೇನಾ ಮನ್ ಮುಲ್ ಹಾಲು ಉತ್ಪಾದಕರಿಗೆ ಮಾಡುವ ಉಪಕಾರದ ಪರಿ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.

 

ಉತ್ಪಾದಕರಿಗೆ ಮಾಡಿದ ಮೋಸ
ನುಡಿ ಕರ್ನಾಟಕ.ಕಾಮ್ ಜೊತೆ ಮಾತನಾಡಿದ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ, ಹಾಲು ಉತ್ಪಾದಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಎಸ್.ಸಿ.ಮಧುಚಂದನ್ 1 ರೂ. ಹೆಚ್ಚಿಸಿ ಮತ್ತೊಂದೆಡೆ 125 ರೂ. ಕಿತ್ತುಕೊಂಡ ಮನ್ ಮುಲ್ ಉತ್ಪಾದಕರಿಗೆ ಮಾಡಿರುವುದು ದೊಡ್ಡ ಮೋಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿಗೆ 1 ರೂ. ಹೆಚ್ಚಿಸಿದ್ದನ್ನು ದೀಪಾವಳಿ ಗಿಫ್ಟ್ ಎನ್ನುವಂತೆ ಮಾಧ್ಯಮಗಳಿಗೆ ತಿಳಿಸಿ ದೊಡ್ಡ ಸಾಧನೆ ಎಂದು ಬೀಗುತ್ತಿರುವ ಒಕ್ಕೂಟ ಫೀಡ್ಸ್ ಗೆ 125 ರೂ ಏರಿಕೆ ಮಾಡಿದ ಬಗ್ಗೆ ಮಾಧ್ಯಮಗಳಿಗೆ ಏಕೆ ತಿಳಿಸಿಲ್ಲ.

ಬೇರೆ ರಾಜ್ಯಗಳಲ್ಲಿ ಪ್ರತಿ ಲೀ ಹಾಲಿಗೆ 35 ರೂ‌.ನಿಂದ 40 ರೂ.ವರೆಗೆ ಕೊಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಅದರಲ್ಲಿಯೂ ಮಂಡ್ಯದಲ್ಲಿ ಕಡಿಮೆ ದರ ನೀಡಲಾಗುತ್ತಿದೆ. ಹಗಲಿರುಳು ಕಷ್ಟಪಡುವ ರೈತರಿಗೆ ಉತ್ತಮ ದರ ಕೊಡಲು ಏಕೆ ಸಾಧ್ಯವಿಲ್ಲ. ಇದೇ ರೀತಿ ಎಷ್ಟು ವರ್ಷದಿಂದ ಅನ್ಯಾಯ ಮಾಡಿಕೊಂಡು ಬರುತ್ತೀರಿ. ರೈತರ ಜೊತೆ ಇಂತಹ ನಾಟಕ‌ ಆಡುವುದನ್ನು ಬಿಟ್ಟು ಪ್ರತಿ ಲೀ ಹಾಲಿಗೆ 40 ರೂ ನಿಗದಿಪಡಿಸಬೇಕು. ಅಲ್ಲದೆ ಏರಿಕೆ ಮಾಡಿರುವ ಪಶು ಆಹಾರ ದರ (125 ರೂ.)ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿರುವ ಮಧುಚಂದನ್ ಹಾಲು ಉತ್ಪಾದಕರು ಮನ್ಮುಲ್ ಮಾಡಿರುವ ವಂಚನೆಯನ್ನು ಪ್ರಶ್ನಿಸಬೇಕೆಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!