✍️ಸರ್ವೇಶ್ವರ ದಯಾಳ್ ಸಕ್ಸೆನಾ
ಕನ್ನಡಕ್ಕೆ : ಮಂಜುಳ ಕಿರುಗಾವಲು
ನಿನ್ನ ಜೊತೆಗಿದ್ದಾಗ ನನಗೆ
ಎಲ್ಲಾ ದಿಕ್ಕುಗಳು ಹತ್ತಿರವಾಗಿ
ಪ್ರತಿ ರಸ್ತೆಗಳು ಕಿರಿದಾಗಿ
ಜಗತ್ತು ಕುಗ್ಗಿ ಒಂದು ಅಂಗಳದಂತೆ
ಮಾರ್ಪಟ್ಟು ತುಂಬಿ ತುಳುಕುತ್ತಿದ್ದು
ಒಳಗಾಗಲಿ ಇಲ್ಲವೆ ಹೊರಗಾಗಲಿ ಒಬ್ಬಂಟಿ ಅನ್ನಿಸುವುದಿಲ್ಲ..
ಎಲ್ಲ ವಸ್ತುಗಳ ಆಕಾರ ಕುಗ್ಗಿ,
ಮರಗಳು ತುಂಬಾ ಗಿಡ್ಡಾಗಿ
ಬಂದು ತಲೆಯ ಮೇಲೆ ಕೈ ಇಟ್ಟು ಆಶೀರ್ವಾದಿಸುತ್ತವೆ
ಆಗಸವೂ ಎದೆಗೆ ತಾಗುತ್ತದೆ.
ನಾನು ಯಾವಾಗ ಬೇಕಾದರೂ ಮೋಡಗಳ ಮರೆಯಲ್ಲಿ ಮುಖ ಮರೆಮಾಚಿಕೊಳ್ಳಬಹುದು..
ನಿನ್ನ ಜೊತೆಗಿದ್ದಾಗ ಹುಲ್ಲಿನ ಚಲನೆ,
ಕಿಟಕಿಯಿಂದ ಗಾಳಿ ಒಳ ಹೊಕ್ಕು ಬರುವುದು ಮತ್ತು ಸೂರ್ಯನ ಕಿರಣಗಳು ಗೋಡೆ ಮೇಲೇರಿ ಹೋಗುವುದು ಸೇರಿದಂತೆ ಎಲ್ಲವಕ್ಕೂ ಒಂದೊಂದು ಅರ್ಥವಿರುತ್ತದೆ..
ನೀನು ಜೊತೆಗಿದ್ದಾಗ ನನ್ನ ಅಸಮರ್ಥತೆಗಳು ಹೋಗಿ
ಸಾಧ್ಯತೆಗಳು ಸುತ್ತವರಿಯುತ್ತವೆ.
ಪ್ರತಿ ತಡೆಗೋಡೆಗಳಲ್ಲೂ ಬಾಗಿಲುಗಳು ಮೂಡುತ್ತವಲ್ಲದೆ
ಪ್ರತಿ ಬಾಗಿಲಿನಲ್ಲೂ ಒಂದೊಂದು ಪರ್ವತಗಳು ಹಾದುಹೋಗಬಹುದು ಎನ್ನಿಸುತ್ತದೆ..
ಶಕ್ತಿ ಸೀಮಿತವಾದರೆ
ಪ್ರತಿಯೊಂದು ಅಶಕ್ತವಾಗುತ್ತದೆ
ಬಾಹುಗಳು ಕುಗ್ಗಿದರೆ
ಸಾಗರವೂ ಕುಗ್ಗಿ ಹೋಗುತ್ತದೆ
ಸಾಮರ್ಥ್ಯ ಎನ್ನುವುದು ಇಚ್ಚೆಗಳ ಮತ್ತೊಂದು ಹೆಸರಷ್ಟೇ..
ಜೀವನ ಮತ್ತು ಮೃತ್ಯುವಿನ ನಡುವಿನ ಭೂಮಿಕೆ ಹಣೆಬರಹದ್ದಲ್ಲ.. ನನ್ನದು