Friday, September 20, 2024

ಪ್ರಾಯೋಗಿಕ ಆವೃತ್ತಿ

ಕಟೀಲ್ ಮಾತನಾಡುವಾಗ ಬಹುತೇಕ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದವು : ನಿಖಿಲ್ ಕುಮಾರಸ್ವಾಮಿ

ಮೊನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ ಸಾಹೇಬ್ರು ಮಾತನಾಡುವ ವೇಳೆ ಬಹುತೇಕ ಎಲ್ಲಾ ಕುರ್ಚಿಗಳು ಖಾಲಿಯಾಗಿದ್ದವು, ಬಿಜೆಪಿಗೆ ಮಂಡ್ಯದಲ್ಲಿ ನೆಲೆಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಪುರದಕೊಪ್ಪಲು ಗ್ರಾಮದಲ್ಲಿ ವೀರಾಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಮಂಡ್ಯವನ್ನು ಜೆಡಿಎಸ್ ಮುಕ್ತ ಮಾಡಲು ಸಾಧ್ಯವೇ ? ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಾನು ಇಷ್ಟಪಡಲ್ಲ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಾ ನಾಯಕ ಎಂಬ ಕಟೀಲ್ ಹೇಳಿಕೆಗೆ, ಕುಮಾರಣ್ಣ ಮಂಡ್ಯಕ್ಕೆ ಬಜೆಟ್‍ನಲ್ಲಿ ಎಂಟೂ ಮುಕ್ಕಾಲು ಸಾವಿರ ಕೋಟಿ ಮೀಸಲಿಟ್ಟಿದ್ದರು. ಆಗ ಬಿಜೆಪಿಯವರು ಲಘುವಾಗಿ ಮಾತನಾಡಿದ್ದರು. ಮಂಡ್ಯ, ರಾಮನಗರ, ಹಾಸನಕ್ಕೆ ಸೀಮಿತವಾದ ಬಜೆಟ್ ಅಂದರು. ಬಳಿಕ ಬಿಜೆಪಿ ಸರ್ಕಾರ ಬಂದ ಮೇಲೆ ಆ ಅನುದಾನ ಏನಾಯಿತು ಅಂತ ಪ್ರಶ್ನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ರಾಜ್ಯದ ರೈತರು, ಜನಸಾಮಾನ್ಯರಿಗೆ ಪೂರಕವಾಗಿರುವ ಪಂಚರತ್ನ ಯೋಜನೆಗಳ ಬಗ್ಗೆ ತಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ರೈತರು, ರಾಜ್ಯದ ಜನರ ದೃಷ್ಠಿಯಿಂದ ಜೆಡಿಎಸ್ ಪಕ್ಷ ಪಂಚರತ್ನ ಯೋಜನೆ ಜಾರಿಗೆ ತರಲಾಗಿದೆ ಎಂದರು.

ರಾಜ್ಯದ ಜನರು 5 ವರ್ಷಗಳ ಕಾಲ ಜೆಡಿಎಸ್ ಸರ್ಕಾರ ರಚನೆಗೆ ಆಶೀರ್ವಾದ ಮಾಡಿದರೆ, ಈ ಯೋಜನೆಯಿಂದ ಅನುಕೂಲವಾಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಣ್ಣ ಮುಖ್ಯಮಂತ್ರಿಯಾಗಿ ಸರ್ಕಾರ ರಚಿಸುವುದು ಶತಸಿದ್ದ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಗಿದೆ. ಎಲ್ಲರೂ ಒಗ್ಗೂಡಿ 2023ಕ್ಕೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಹೇಳಿದರು.

ಎಲ್ಲಿಂದ ಸ್ಪರ್ಧೆ ಎಂದು ಖಚಿತವಾಗಿಲ್ಲ 

ಸದ್ಯಕ್ಕೆ ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎನ್ನುವ ವಿಚಾರದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ, ಸದ್ಯ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ವಹಿಸಿದ್ದಾರೆ, ಅದನ್ನು ಮಾಡುತ್ತಿದ್ದೇನೆ. ರಾಜ್ಯದ ಎಲ್ಲಡೆ ಪಕ್ಷ ಸಂಘಟಿಸಲು ಪ್ರವಾಸ ಮಾಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೆ, ನಮ್ಮ ಮುಂದಿನ ಸವಾಲು ಎಂದರು.

ಈ ಸಂದರ್ಭದಲ್ಲಿ ಮುದಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರೇಗೌಡ, ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಶಾಸಕ ಸಿ.ಎಸ್. ಪುಟ್ಟರಾಜು ಪುತ್ರ ಸಿ.ಪಿ.ಶಿವರಾಜ್, ಜಿ.ಪಂ ಮಾಜಿ ಸದಸ್ಯರಾದ ಸಿ.ಅಶೋಕ್, ಎಚ್.ಟಿ. ಮಂಜು, ಗುತ್ತಿಗೆದಾರ ಬಾಲರಾಜು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!