ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ದ ಹೋರಾಡಿದ ಪ್ರಾಮಾಣಿಕವಾದ ದೇಶಪ್ರೇಮಿ ಅವರ ಪ್ರತಿಮೆ ನಿರ್ಮಾಣ ಮಾಡಿದರೆ ತಪ್ಪೇನು ? ಎಂದು ಕಾಂಗ್ರೆಸ್ ನಾಯಕ ಎನ್.ಚಲುವರಾಯಸ್ವಾಮಿ ಹೇಳಿದರು.
ಕಾಂಗ್ರೆಸ್ ಮುಖಂಡ ತನ್ವೀರ್ ಸೇಟ್ ಅವರು ಶ್ರೀರಂಗಪಟ್ಟಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಟಿಪ್ಪು ಅವರ ಕೊಡುಗೆ ಸಾಕಷ್ಟಿದೆ, ಅವರ ಪ್ರತಿಮೆ ಮಾಡಲಿ ಬಿಡಿ, ಇದರಲ್ಲಿ ವಿವಾದವೇನಿದೆ. ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರಂತೆ ಟಿಪ್ಪು ನಾಡಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಬಿಜೆಪಿಯ ನಾಯಕರಿಗೆ ವಿವಾದ ಹುಟ್ಟು ಹಾಕುವ ಮುಖ್ಯ ಕೆಲಸವಾಗಿದೆ. ಅಂತಹ ಕೆಲಸವನ್ನು ಮಾಡುವುದಕ್ಕಾಗಿ ತುದಿಗಾಲಿನಲ್ಲಿ ನಿಂತಿರುತ್ತಾರೆ ಎಂದು ಛೇಡಿಸಿದರು.
ಟಿಪ್ಪು ಸುಲ್ತಾನ್ ಕುರಿತು ಮುಂದಿನ ಪೀಳಿಗೆಗೆ ಸತ್ಯ ಸಂಗತಿಗಳನ್ನು ತಿಳಿಸಲು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ನೂರಡಿ ಎತ್ತರದ ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ತನ್ವಿರ್ ಸೇಟ್ ಇತ್ತಿಚೇಗೆ ಹೇಳಿದ್ದರು.
ಮೈಸೂರಿನಲ್ಲಿ ನಡೆದ ಟಿಪ್ಪು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದರು. “ಬಿಜೆಪಿ ಸರ್ಕಾರ ಇತಿಹಾಸವನ್ನು ತಿರುಚುತ್ತಿದ್ದು, ಟಿಪ್ಪು ಚರಿತ್ರೆಯನ್ನು ಹಾಳು ಮಾಡಲಾಗುತ್ತಿದೆ. ಹೀಗಾಗಿ, ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ಅನಿವಾರ್ಯ ಎಂದು ತಿಳಿಸಿದ್ದರು.




