Thursday, September 19, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರದ ವಿರುದ್ಧ ತಿರುಗಿ ಬಿದ್ದ ಅನ್ನದಾತರು : ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ

ಕಬ್ಬಿಗೆ 4500 ರೂ. ಬೆಲೆ ನಿಗದಿ ಸೇರಿದಂತೆ ಪ್ರತಿ ಲೀಟರ್ ಹಾಲಿಗೆ 40 ರೂಪಾಯಿ ನಿಗದಿಪಡಿಸುವಂತೆ ಒತ್ತಾಯಿಸಿ ಕಳೆದ 10 ದಿನಗಳಿಂದ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸ್ಪಂದಿಸದಿರುವ ಸರ್ಕಾರದ ವಿರುದ್ಧ, ಸಿಡಿದೆದ್ದಿರುವ ರೈತರು ಬುಧವಾರ ರೈತಸಂಘದ ನೇತೃತ್ವದಲ್ಲಿ ಮಂಡ್ಯನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿ, ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.

ಕರ್ನಾಟಕ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಮಂಡ್ಯ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆಯಿಂದ ಆರಂಭವಾದ ಪ್ರತಿಭಟನಾ ಧರಣಿ, ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಸಂಜಯ ಸರ್ಕಲ್ ವರೆಗೆ ಸಾಗಿ, ನಂತರ ಜಿಲ್ಲಾಧಿಕಾರಿ ಕಚೇರಿ ತಲುಪಿತು.

ರ್‍ಯಾಲಿಗೆ ನೂರಾರು ಸಂಖ್ಯೆಯಲ್ಲಿ ರೈತರು ಟ್ರಾಕ್ಟರ್, ಬೈಕ್ ಗಳ ಮೂಲಕ ಆಗಮಿಸಿದ್ದರು. ಈ ಪ್ರತಿಭಟನೆಗೆ ಜಿಲ್ಲಾದ್ಯಂತ ನೂರಾರು ರೈತರು ಸ್ವಯಂ ಪ್ರೇರಿತರಾಗಿ ಆಗಮಿಸಿ ಬೆಂಬಲ ಸೂಚಿಸಿದರು.

ಸರ್ಕಾರದ ಪ್ರತಿಕೃತಿ ದಹನ 

ಸರ್ಕಾರದ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಮಂತ್ರಿಗಳು ಕೇವಲ ಸುಳ್ಳು ಭರವಸೆಗಳನ್ನು ನೀಡಿ ರೈತರನ್ನು ವಂಚಿಸುತ್ತಿದ್ದಾರೆಂದು ರೈತರು ಕಿಡಿಕಾರಿದರು.

ಹರಿದು ಬಂದ ರೈತರು 

ಪ್ರತಿಭಟನಾ ಮೆರವಣಿಗೆಯಲ್ಲಿ ಎಲ್ಲೆಲ್ಲೂ ಹಸಿರು ಟವಲ್ ಧರಿಸಿದ ರೈತರು ಕಾಣುತ್ತಿದದ್ದೂ ಸಾಮಾನ್ಯವಾಗಿತ್ತು. ರೈತರೊಂದಿಗೆ ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಂಚಾರ ಅಸ್ತವ್ಯಸ್ತ

ಏಕಕಾಲಕ್ಕೆ ನೂರಾರು ರೈತರು ರ್‍ಯಾಲಿ ಹಮ್ಮಿಕೊಂಡು ರಸ್ತೆಗೆ ಇಳಿದಿದ್ದರಿಂದ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು. ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳು ನಿಧಾನಗತಿಯಲ್ಲಿ ಚಲಿಸುವಂತಾಯಿತು. ಗಂಟೆಗಟ್ಟಲೇ ವಾಹನ ಸವಾರರು ಕಾದು ನಿಲ್ಲವಂತಾಯಿತು. ವಾಹನ ಚಾಲಕರಿಗೆ ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದಾಗಿ ಪರದಾಡುವಂತಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ಖಾಕಿ ಸರ್ಪಗಾವಲು

ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತಸಂಘ ನಿನ್ನೆಯೇ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕುವುದಾಗಿ ಪ್ರಕಟಿಸಿ, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ರೈತರು ಬೃಹತ್ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದಿದ್ದರಿಂದ ಮಂಡ್ಯ ಜಿಲ್ಲಾಡಳಿತವು ಜಿಲ್ಲಾಧಿಕಾರಿ ಕಚೇರಿ ಬಳಿ ಖಾಕಿ ಸರ್ಪಗಾವಲನ್ನು ಹಾಕಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಪ್ರತಿಭಟನಾ ರ್‍ಯಾಲಿಯ ನೇತೃತ್ವವನ್ನು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ನಂದಿನಿ ಜಯರಾಂ, ಎ.ಎಲ್.ಕೆಂಪೂಗೌಡ, ಎಸ್.ಸಿ.ಮಧುಚಂದನ್, ಪ್ರಸನ್ನ, ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!