Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಜೂರಾದ ಭೂಮಿ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ 50 ನಿವೇಶನ ರಹಿತ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ 5.25 ಎಕರೆ ಭೂಮಿಯನ್ನು ಕೂಡಲೇ ಹಂಚಿಕೆ ಮಾಡುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ವಸತಿ ವಂಚಿತರು ಇಂದು ಪ್ರತಿಭಟನೆ ನಡೆಸಿದರು.

ಕಳೆದ 8 ವರ್ಷಗಳಿಂದ ಅರ್ಜಿ ಸಲ್ಲಿಸಿ ಹೋರಾಟ ನಡೆಸಿ ಪ್ರಯುಕ್ತ ಜಿಲ್ಲಾಧಿಕಾರಿಗಳು ಮಾರ್ಚ್ 3, 2022ರಂದು ಗ್ರಾಮದ ಸರ್ವೇ ನಂಬರ್ 84 ಹಾಗೂ 85 ರಲ್ಲಿ 1.21 ಎಕರೆ ಮಂಜೂರಾಗಿ ನಿಗದಿತ ಸಮಯದಲ್ಲಿ ವಿತರಿಸದೇ ಒಂದೇ ಭೂಮಿಗೆ 6 ಜನ ದಾವೆ ಹೂಡಿದ್ದಾರೆ‌. ಸರ್ವೇ ನಂ.190ರಲ್ಲಿ 2 ಎಕರೆ ಭೂಮಿ ಮಂಜೂರಾಗಿದ್ದು, ಅದರ ಕುರಿತು ಕೇವಲ 30 ಗುಂಟೆ ಭೂಮಿಗೆ ಖಾಸಗಿ ವ್ಯಕ್ತಿ ಯಾವುದೇ ದಾಖಲೆ ಇಲ್ಲದೆ ತಡೆಯಾಜ್ಞೆ ತಂದಿದ್ದಾರೆ. ಮಿಕ್ಕ 1.10 ಎಕರೆ ಭೂಮಿಯನ್ನು ವಿತರಿಸದೆ ಗ್ರಾಮ ಪಂಚಾಯತಿ ಆಡಳಿತ ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿದೆ ಎಂದು ದೂರಿದರು.

ಕಳೆದ ಜುಲೈ 29, 2022ರಲ್ಲಿ ಗ್ರಾಮದ ಸರ್ವೇ ನಂ.81, 87, 88, 89, 90 ಸೇರಿದಂತೆ 2.04 ಗುಂಟೆ ಭೂಮಿಯನ್ನು‌ ಜಿಲ್ಲಾಧಿಕಾರಿ ಮಂಜೂರು‌ ಮಾಡಿದ್ದು, ಈವರೆಗೂ ಹಸ್ತಾಂತರ ಮಾಡಿಕೊಳ್ಳದೆ ಬಡವರು, ಪರಿಶಿಷ್ಟರನ್ನು ವಸತಿ ವಂಚಿತರನ್ನಾಗಿ ಮಾಡಲು ಸಂಚು ರೂಪಿಸಿದೆ ಎಂದು ಆರೋಪಿಸಿದರು.

ಈ ಭೂಮಿಗಳನ್ನು‌ ವಿತರಿಸುವ ಹೊಣೆಗಾರಿಕೆ ಇರುವ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಕೆಲ ಖಾಸಗಿ ವ್ಯಕ್ತಿಗಳ ಸೇರಿ, ಪರಿಶಿಷ್ಟ ಜನಾಂಗದವರಿಗೆ ಭೂಮಿ ದೊರಕಿಸಬಾರದು ಎಂಬ ಷಡ್ಯಂತ್ರ ಮಾಡಿ, ಸುಳ್ಳು ಮಾಹಿತಿ, ದಾಖಲೆ ನೀಡಿ ಅನ್ಯಾಯವೇಸಗುತ್ತಿದ್ದಾರೆ. ಪರಿಶಿಷ್ಟರಿಗೆ ಸರ್ಕಾರಿ ಭೂಮಿ‌, ವಸತಿ ದೊರಕಿಸಬೇಕಾದ ಗ್ರಾಮ ಪಂಚಾಯತಿ, ಅದಕ್ಕೆ ಪೂರಕವಾದ ಪ್ರಯತ್ನ ಹಾಗೂ ನಿರ್ಣಯ ಮಾಡದೆ ಉಳ್ಳವರ ಪ್ರಭಾವ, ಆಮಿಷಕ್ಕೆ ಒಳಗಾಗಿ ನಮ್ಮ ವಸತಿ ಪಡೆಯುವ ಮೂಲಭೂತ ಹಕ್ಕುಗಳ ದಮನಕ್ಕೆ ಮುಂದಾಗಿದೆ ಎಂದು ಆಪಾದಿಸಿದರು.

ಅಲ್ಲದೆ ಕೆಲ ಖಾಸಗಿ‌ ವ್ಯಕ್ತಿಗಳು ಪರಿಶಿಷ್ಟರಿಗೆ ಭೂಮಿ, ವಸತಿ ನೀಡಬಾರದು ಎಂದು ಅವಾಚ್ಯ ಶಬ್ದಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ‌ ನಿಂದಿಸುತ್ತಿರುವುದು ಗಮನಕ್ಕೆ ಬಂದಿದೆ. ಆ ಕಾರಣದಿಂದ ನಮಗೆ ಮಾನಸಿಕ ಹಿಂಸೆ ಹಾಗೂ ಜುಗುಪ್ಸೆ ಉಂಟಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣರಾಗಿರುವ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರ ವಿರುದ್ದ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ವಹಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಎಲ್ಲಮ್ಮ, ಸರೋಜಮ್ಮ, ದೇವಮ್ಮ, ಸುಮತಿ, ಮಂಜುಳಾ, ಪದ್ಮ, ವಿಜಯ ಹರಿಕೃಷ್ಣ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!